NICE FASTag: ನೈಸ್ ರಸ್ತೆಗೂ ಬಂತು ಫಾಸ್ಟ್ಯಾಗ್; ಟೋಲ್ ಕಿರಿಕಿರಿಯಿಂದ ಮುಕ್ತಿ
NICE ROAD FASTag ವಾಹನಗಳು ನೈಸ್ ರಸ್ತೆ ಪ್ರವೇಶಿಸಿದ ತಕ್ಷಣವೇ ಸ್ಕ್ಯಾನರ್ಗಳು ಮಾಹಿತಿ ಸಂಗ್ರಹಿಸುತ್ತವೆ. ವಾಹನಗಳು ನೈಸ್ ರಸ್ತೆಯಿಂದ ಹೊರಗೆ ಹೋದ ತಕ್ಷಣ ನಿಗದಿತ ಮೊತ್ತವನ್ನು ಕಡಿತ ಮಾಡಿಕೊಳ್ಳುತ್ತವೆ
ಬೆಂಗಳೂರು: ನೈಸ್ ರಸ್ತೆಯಲ್ಲಿ ಫೆ.14ರಿಂದ ಫಾಸ್ಟ್ಯಾಗ್ (FASTag) ಬಳಕೆ ಆರಂಭವಾಗಲಿದೆ. ಕಳೆದ ಒಂದು ವರ್ಷದಿಂದ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (Nandi Infrastructure Corridor Enterprice – NICE) ತನ್ನದೇ ಆದ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಿತ್ತು. ಕೆಲವರು ಮಾತ್ರ ಈ ವ್ಯವಸ್ಥೆಗೆ ಅನುಗುಣವಾಗಿ ಕಾರ್ಡ್ಗಳನ್ನು ಖರೀದಿಸಿದ್ದರು. ಆದರೆ ಹೆಚ್ಚಿನವರು ಖರೀದಿಸಿರಲಿಲ್ಲ. ಖಾಸಗಿ ಟೋಲ್ ಕಾರ್ಡ್ ಏಕೆ ಖರೀದಿಸಬೇಕೆಂಬ ಮನಃಸ್ಥಿತಿ ಬಳಕೆದಾರರದ್ದಾಗಿತ್ತು.
ಇದೀಗ ದೇಶದಾದ್ಯಂತ FASTag ಬಳಕೆ ಆರಂಭವಾಗಿದೆ. ನೈಸ್ ಸಹ ಇದಕ್ಕೆ ಅನುಗುಣವಾಗಿ ತನ್ನ ತಾಂತ್ರಿಕ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ನೀವು ನೈಸ್ ಕಾರ್ಡ್ ಮೂಲಕವೇ ಟೋಲ್ ಪಾವತಿಸಬೇಕಿಲ್ಲ. ಅದನ್ನು FASTag ಮೂಲಕವೇ ಪಾವತಿಸಬಹುದು.
ವಾಹನಗಳು ನೈಸ್ ರಸ್ತೆ ಪ್ರವೇಶಿಸಿದ ತಕ್ಷಣವೇ ಸ್ಕ್ಯಾನರ್ಗಳು ಮಾಹಿತಿ ಸಂಗ್ರಹಿಸುತ್ತವೆ. ವಾಹನಗಳು ನೈಸ್ ರಸ್ತೆಯಿಂದ ಹೊರಗೆ ಹೋದ ತಕ್ಷಣ ನಿಗದಿತ ಮೊತ್ತವನ್ನು ಕಡಿತ ಮಾಡಿಕೊಳ್ಳುತ್ತವೆ ಎಂಬ ನೈಸ್ ವಕ್ತಾರರೊಬ್ಬರ ಹೇಳಿಕೆಯನ್ನು ರೆಸಿಡೆಂಟ್ಸ್ ವಾಚ್ ಜಾಲತಾಣ ವರದಿ ಮಾಡಿದೆ.
ನೈಸ್ ರಸ್ತೆಗೆ ಒಟ್ಟು 8 ಪ್ರವೇಶ-ನಿರ್ಗಮನ ಸ್ಥಳಗಳಿವೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ನೈಸ್ ರೋಡ್ ಇಂಟರ್ಚೇಂಜ್, ಲಿಂಕ್ ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆ ಅದರಲ್ಲಿ ಮುಖ್ಯವಾದವು. ಫೆ.14ರ ನಂತರ ನೈಸ್ ರಸ್ತೆಯಲ್ಲಿ ಸಂಚರಿಸಲು ನೀವು ನೈಸ್ ಕಾರ್ಡ್ ಖರೀದಿಸಲೇಬೇಕು ಎಂದಿಲ್ಲ. ಫಾಸ್ಟ್ಯಾಗ್ ಮೂಲಕವೇ ಪಾವತಿ ಮಾಡಬಹುದು. ಸಾಮಾನ್ಯವಾಗಿ ಕಿಕ್ಕಿರಿದು ತುಂಬಿರುತ್ತಿದ್ದ ನೈಸ್ ಟೋಲ್ಗಳ ಕಿರಿಕಿರಿಯಿಂದ ಫಾಸ್ಟ್ಯಾಗ್ಗಳು ಮುಕ್ತಿ ನೀಡಲಿವೆ.
Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?