ಅವನತಿಯ ಅಂಚಿನಲ್ಲಿರುವ ಹೆಬ್ಬಾಳ ಸೇತುವೆ; ಅನಾಹುತ ಸಂಭವಿಸುವ ಮೊದಲೆ ಎಚ್ಚೆತ್ತುಕೊಳ್ಳಲು ಚಿಕ್ಕಮಗಳೂರು ಜನತೆ ಆಗ್ರಹ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳ ಸೇತುವೆ ಯಾವುದೋ ಕುಗ್ರಾಮದ ಸೇತುವೆಯಲ್ಲ. ಬದಲಾಗಿ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುವ ಸೇತುವೆ. ಮಳೆಗಾಲದಲ್ಲಿ ಸೇತುವೆ ಮೇಲೆ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯುವ ಈ ಹೆಬ್ಬಾಳ ಸೇತುವೆ ದಿನದಲ್ಲಿ ನಾಲ್ಕೈದು ಬಾರಿ ಮುಳುಗುತ್ತದೆ.
ಚಿಕ್ಕಮಗಳೂರು: ಸಾಕ್ಷತ್ ಅನ್ನಪೂರ್ಣೇಶ್ವರಿ ನೆಲೆಸಿರುವ ಪವಿತ್ರ ಕ್ಷೇತ್ರ ಹೊರನಾಡು. ಆದರೆ ಮಳೆಗಾಲ ಬಂತೆಂದರೆ ಸಾಕು ದೇವಿಯನ್ನು ನೋಡಲು ಭಕ್ತರಿಗೆ ಕಷ್ಟಸಾಧ್ಯ. ಪ್ರತಿ ಬಾರಿ ಮಳೆಗಾಲ ಬಂದಾಗಲೂ ಈ ಬಾರಿ ಬೇಸಿಗೆಯಲ್ಲಿ ಸೇತುವೆ ನಿರ್ಮಾಣ ಮಾಡುತ್ತೀವಿ. ರಾಜ್ಯ ಹೆದ್ದಾರಿಯಲ್ಲಿ ಇರುವ ಸೇತುವೆ ವಾರಗಟ್ಟಲೇ ನೀರಿನಲ್ಲಿ ಮುಳುಗಿದರೆ ಸಮಸ್ಯೆ ಆಗೇ ಆಗುತ್ತದೆ. ನಮಗೂ ಅರ್ಥ ಆಗುತ್ತದೆ. ಈ ಬಾರಿಯಂತೂ ಸೇತುವೆ ಮಾಡಿಸಿ ಕೊಟ್ಟೆ ಕೊಡುತ್ತೀವಿ ಎನ್ನುವುದು ಜನಪ್ರತಿನಿಧಿಗಳ ಕಾಮನ್ ಡೈಲಾಗ್ ಆಗಿದೆ. ಸುಮಾರು 20 ವರ್ಷಗಳಿಂದ ಇದೇ ಮಾತನ್ನ ಕೇಳಿ ಕೇಳಿ ಜನರು ಸುಸ್ತಾಗಿ ಹೋಗಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳ ಸೇತುವೆ ಯಾವುದೋ ಕುಗ್ರಾಮದ ಸೇತುವೆಯಲ್ಲ. ಬದಲಾಗಿ ರಾಜ್ಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುವ ಸೇತುವೆ. ಮಳೆಗಾಲದಲ್ಲಿ ಸೇತುವೆ ಮೇಲೆ ನಾಲ್ಕೈದು ಅಡಿ ಎತ್ತರದಲ್ಲಿ ನೀರು ಹರಿಯುವ ಈ ಹೆಬ್ಬಾಳ ಸೇತುವೆ ದಿನದಲ್ಲಿ ನಾಲ್ಕೈದು ಬಾರಿ ಮುಳುಗುತ್ತದೆ. ಕಳೆದ ವರ್ಷದ ಆಗಸ್ಟ್ ತಿಂಗಳ ಮೊದಲ ವಾರದ ಮಳೆಗೆ ಒಂದೇ ವಾರಕ್ಕೆ ಹಲವು ಬಾರಿ ಮುಳುಗಡೆಯಾಗಿತ್ತು. ಆ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ಬಂದ ಮಳೆಯೂ ಸೇತುವೆಯನ್ನ ಎರಡು ದಿನ ಸಂಪೂರ್ಣವಾಗಿ ಆವರಿಸಿತ್ತು. ಹೀಗಾಗಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಅನ್ನಪೂರ್ಣೇಶ್ವರಿ ಸನ್ನಿಧಿ ಹೊರನಾಡಿಗೆ ಹೋಗುವ ಭಕ್ತರು, ಸ್ಥಳೀಯರು, ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸಿದ್ದರು.
20 ವರ್ಷದ ಸಮಸ್ಯೆ ಕೇವಲ ಹೊರನಾಡಿಗೆ ಮಾತ್ರವಲ್ಲ, ಹೊರನಾಡು ಸುತ್ತಮುತ್ತ ಹತ್ತಾರು ಹಳ್ಳಿಗಳ ಜನರು ಬೇರೆ ದಾರಿಯಿಲ್ಲದೇ ಸಮಸ್ಯೆಯನ್ನ ಅನುಭವಿಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆ ಸೇರಿದಂತೆ ಎಮರ್ಜೆನ್ಸಿ ಯಾವುದೇ ಕೆಲಸಕ್ಕೆ ಹೋಗಬೇಕೆಂದರೆ ಮಳೆಗಾಲದಲ್ಲಿ ಸಾಧ್ಯವೇ ಇಲ್ಲ. ಕಳೆದ 20 ವರ್ಷಗಳಿಂದಲೂ ಇದು ಜನರು ಅನುಭವಿಸುತ್ತಿರುವ ಸಮಸ್ಯೆ. ಈ ಸೇತುವೆ ಮುಳುಗಡೆಯಾದರೆ ಯಾವ ವಾಹನವೂ ಸಂಚರಿಸುವಂತಿಲ್ಲ. ಸದ್ಯ ನೀರಿನಲ್ಲಿ ತೊಯ್ದ ಈ ಸೇತುವೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಅವನತಿಯ ಅಂಚಿನಲ್ಲಿದೆ. ಒಂದು ವೇಳೆ ಕುಸಿದು ಬಿದ್ದರೆ ಆಗುವ ಅನಾಹುತ ದೊಡ್ಡ ಪ್ರಮಾಣದ್ದಾಗಿರುತ್ತದೆ. ಸೇತುವೆಯನ್ನ ಎತ್ತರದಲ್ಲಿ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬರುತ್ತಿದ್ದಾರೆ.
ಜನರ ಆಕ್ರೋಶ ಸೇತುವೆಗೆ ಯಾವುದೇ ತಡೆಗೋಡೆಗಳಿಲ್ಲ. ರಾತ್ರಿ ವೇಳೆ ವಾಹನ ಸ್ವಲ್ಪ ಜಾರಿದರೆ ನದಿ ಪಾಲಾಗುವುದರಲ್ಲಿ ಎರಡು ಮಾತಿಲ್ಲ. ಈ ಮಾರ್ಗವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನ ಪಡೆಯೋಕೆ ಹೋಗುವ ಪ್ರವಾಸಿಗರೇ ಹೆಚ್ಚು. ರಸ್ತೆ ಹಾಗೂ ಕರ್ವ್ ಪರಿಚಯವಿರುವ ಚಾಲಕರಾದರೆ ಅಡ್ಡಿಲ್ಲ. ಹೊಸದಾಗಿ ಈ ಮಾರ್ಗವಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಮಾರ್ಗ ನೀರಿನಲ್ಲಿ ಮುಳುಗಿದರೆ ಸುಮಾರು 10 ರಿಂದ 15 ಕಿಲೋಮೀಟರ್ ಸುತ್ತಿಕೊಂಡು ದೇಗುಲಕ್ಕೆ ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಬೇರೆ ಮಾರ್ಗವಿಲ್ಲದೇ ರೋಗಿಗಳು ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ಸೇತುವೆ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯವನ್ನ ಕಳೆದುಕೊಳ್ಳುತ್ತಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸ್ಥಳೀಯ ಶಾಸಕ ಎಂ.ಪಿ.ಕುಮಾರಸ್ವಾಮಿ ಕೂಡ ಹೊಸ ಸೇತುವೆ ನಿರ್ಮಾಣದ ಬಗ್ಗೆ ಮನಸ್ಸು ಮಾಡದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಲೆನಾಡಲ್ಲಿ ಯಥೇಚ್ಚವಾಗಿ ಸುರಿಯುವ ಮಳೆಯಿಂದ ಏಳೆಂಟು ತಿಂಗಳ ಕಾಲ ಸೇತುವೆ ಅಡಿಯಲ್ಲಿ ಶಾಂತಳಾಗಿ ಹರಿಯುವ ಭದ್ರೆ ಮಳೆಗಾಲದಲ್ಲಿ ಅಷ್ಟೆ ವೇಗವಾಗಿ ಹರಿಯುತ್ತಾಳೆ. ಪರಿಣಾಮ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಅಪಾಯದ ಅಂಚಿನಲ್ಲಿದೆ. ಮುಂದೊಂದು ದಿನ ಮತ್ತೊಂದು ದೊಡ್ಡ ಅನಾಹುತವಾದಾಗ ಸರ್ಕಾರ ಕೈಹಿಸುಕಿಕೊಳ್ಳುವ ಬದಲು ಕೂಡಲೇ ಇತ್ತ ಗಮನ ಹರಿಸಿ ಈ ಸೇತುವೆಗೆ ತಡೆಗೋಡೆ ನಿರ್ಮಿಸಿ, ಸೇತುವೆಯನ್ನ ಎತ್ತರಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ
Kangana Ranaut: ಜಯಲಲಿತಾ ಪಾತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ! ಬದಲಾವಣೆ ಕಂಡು ಫ್ಯಾನ್ಸ್ ಫಿದಾ
BD Basavaraj died| ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಬಸವರಾಜ್ ವಿಧಿವಶ