ಪೊಲೀಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ; ರಾಜ್ಯ ಸರಕಾರಕ್ಕೆ ಹೆಚ್.ಡಿ.ಕುಮಾಸ್ವಾಮಿ ಒತ್ತಾಯ

ಪೊಲೀಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ; ರಾಜ್ಯ ಸರಕಾರಕ್ಕೆ ಹೆಚ್.ಡಿ.ಕುಮಾಸ್ವಾಮಿ ಒತ್ತಾಯ
ಹೆಚ್​ಡಿ ಕುಮಾರಸ್ವಾಮಿ

HD Kumarawamy | Ravindranath: ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರ ರಾಜಿನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

TV9kannada Web Team

| Edited By: shivaprasad.hs

May 11, 2022 | 10:09 AM

ಬೆಂಗಳೂರು: ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ, ನಿಯಮಬಾಹಿರವಾಗಿ ವರ್ಗಾವಣೆ ಮಾಡಿದ್ದರಿಂದ ಬೇಸತ್ತು ರಾಜಿನಾಮೆ ನೀಡಿರುವ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ (Dr P Ravindranath) ಅವರ ರಾಜೀನಾಮೆಯನ್ನು ರಾಜ್ಯ ಸರಕಾರ ಅಂಗೀಕಾರ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಒತ್ತಾಯಿಸಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ದಲಿತ ಹಾಗೂ ದಕ್ಷ ಅಧಿಕಾರಿ ರವೀಂದ್ರನಾಥ್ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ತಿಮಿಂಗಿಲಗಳಿಗೆ ಬಲೆ ಹಾಕಿದ್ದರು. ಸರಕಾರಕ್ಕೆ ಹಾಗೂ ಸಮಾಜಕ್ಕೆ ವಂಚನೆ ಮಾಡಿದ್ದವರ ಜಾತಕ ಬಿಚ್ಚಿಡಲು ಪ್ರಯತ್ನ ಮಾಡುತ್ತಿದ್ದರು ಎಂದು ಮಾಧ್ಯಮ ಹೇಳಿಕೆಯಲ್ಲಿ ಅವರು ಹೇಳಿದ್ದಾರೆ.

ಗಣ್ಯ ವ್ಯಕ್ತಿ, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕತೆಯ ಪೋಸು ಕೊಟ್ಟು ನಕಲಿ ಜಾತಿ ಪತ್ರದ ಮೂಲಕ ಹುದ್ದೆ ಗಿಟ್ಟಿಸಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ನಿವೃತ್ತ ಅಧಿಕಾರಿಗೆ ನೋಟೀಸ್ ನೀಡಿದ ಹತ್ತೇ ದಿನದಲ್ಲಿ ಆ ನೋಟೀಸ್ ಕೊಟ್ಟ ಅಧಿಕಾರಿಯನ್ನೇ ಎತ್ತಂಗಡಿ ಮಾಡಲಾಗುತ್ತದೆ ಎಂದರೆ ಈ ಸರಕಾರ ಯಾರ ಬಾಲಂಗೋಚಿಯಾಗಿ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಆರೋಪಿ ಸ್ಥಾನದಲ್ಲಿರುವ ನಿವೃತ್ತ ಅಧಿಕಾರಿ ಕಾಂಗ್ರೆಸ್ ಸರಕಾರದಲ್ಲಿ ಗೃಹ ಇಲಾಖೆಯ ಸಲಹೆಗಾರರಾಗಿದ್ದರು. ಐದು ವರ್ಷ ರಾಜ್ಯವನ್ನು ಆಳಿದ ಮುಖ್ಯಮಂತ್ರಿಗೆ ಆಪ್ತರೂ ಆಗಿದ್ದರು. ಅವರಿಗೆ ನೋಟೀಸ್ ನೀಡಿದಾಕ್ಷಣ ಡಾ.ರವೀಂದ್ರನಾಥ್ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ಒಳ ಒಪ್ಪಂದವೇನು? ಒಬ್ಬ ದಲಿತ ಅಧಿಕಾರಿಯನ್ನು ಬಲಿ ಹಾಕಲು ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸಿದ ಷಡ್ಯಂತ್ರ ಇದಾಗಿದೆ ಎಂದು ಮಾಜಿ ಸಿಎಂ ನೇರ ಆರೋಪ ಮಾಡಿದ್ದಾರೆ.

ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ನಾಯಕರ ಆಪ್ತರಾಗಿದ್ದ ನಿವೃತ್ತ ಅಧಿಕಾರಿ ವಿರುದ್ಧ ಕೇಳಿಬಂದಿರುವುದು ಗಂಭೀರ ಆರೋಪ. ಅಂಥ ವ್ಯಕ್ತಿಯನ್ನು ರಕ್ಷಣೆ ಮಾಡುವ ಅಗತ್ಯ ಸರಕಾರಕ್ಕೆ ಏನಿದೆ? ಎಲ್ಲಿಂದ ಯಾರು, ಯಾರ ಮೇಲೆ ಒತ್ತಡ ಹೇರಿದ್ದಾರೆ? ಯಾರು ಯಾರ ಋಣ ಚುಕ್ತಾ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಬೇಕಿದೆ ಎಂದು ಅವರು ಆಗ್ರಹಪಡಿಸಿದ್ದಾರೆ.

ರವೀಂದ್ರನಾಥ್ ರಾಜಿನಾಮೆ ನೀಡಿದ್ದೇಕೆ?

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಯಾಗಿದ್ದ ರವೀಂದ್ರನಾಥ್ ಅವಧಿಪೂರ್ವ ವರ್ಗಾವಣೆಯ ಕಾರಣ ನೊಂದು ರಾಜಿನಾಮೆ ಸಲ್ಲಿಸಿದ್ದರು. ತಮ್ಮ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, ‘‘ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ನಾನು ಸಮರ ಸಾರಿದ್ದೆ. ಈ ಹಂತದಲ್ಲೇ ನನ್ನ ವರ್ಗಾವಣೆ ಮಾಡಿದ್ದು ಬೇಸರ ತಂದಿತ್ತು. ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರಿಗೆ ನೋಟಿಸ್ ನೀಡಿದ್ದೆ. ಅವರು ವಕೀಲರ ಮೂಲಕ 10 ದಿನ ಕಾಲಾವಕಾಶ ಕೇಳಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿತ್ತು. ನನ್ನ ವರ್ಗಾವಣೆಯಲ್ಲಿ ಈ ಪ್ರಕರಣದ ಪಾತ್ರ ಇದೆ’’ ಎಂದಿದ್ದರು.

‘‘ನಕಲಿ‌ಜಾತಿ ಪ್ರಮಾಣ ಪತ್ರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದೆ. ಎಸ್.ಎಸ್ಟಿ ಕಾಯ್ದೆಯಡಿ ಪೊಲೀಸ್ ಸಿಬ್ಬಂದಿಗೆ ಭದ್ರತಾ ಸಮಿತಿ ರಚಿಸಲು‌ ಕೋರಿದ್ದೆ. ಆದರೆ ಸರ್ಕಾರ ನನ್ನ ಮನವಿಯನ್ನ ಪರಿಗಣಿಸಿಲ್ಲ. ಬದಲಾಗಿ ಕಿರುಕುಳ ನೀಡಲೆಂದೇ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಬೇಸತ್ತು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’’ ಎಂದು ಅವರು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada