ಕಿರಕುಳ ಆರೋಪ: ತನ್ನದೇ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಕೃಷಿ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೋಣ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆದಿದೆ.
ಗದಗ: ಕೃಷಿ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೋಣ (Rona) ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆದಿದೆ. ರೇಣವ್ವ ಕುರಿ 38 ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಜಮೀನಲ್ಲಿ ಹಾದು ಹಾದುಹೋಗುವ ವಿಚಾರಕ್ಕೆ ಮೈದುನನ ಕುಟುಂಬದ ಕಿರಕುಳಕ್ಕೆ ಬೇಸತ್ತು ಮಹಿಳೆ ತಮ್ಮದೇ ಜಮೀನಿನ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಮಹೇಶ್ ಕುರಿ, ರೇಣವ್ವ ಕುರಿ, ಪ್ರಕಾಶ್ ಕುರಿ ಎಂಬುವರ ವಿರುದ್ಧ ದೂರು ದಾಖಲಾಗಿದೆ. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾನಸಿಕವಾಗಿ ಮನನೊಂದು ಬಾವಿಗೆ ಹಾರಿದ ವ್ಯಕ್ತಿ ರಕ್ಷಣೆ
ಉಡುಪಿ: ಮಾನಸಿಕವಾಗಿ ಮನನೊಂದು ಬಾವಿಗೆ ಹಾರಿದ್ದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನಲ್ಲಿ ನಡೆದಿದೆ. ಬೈಂದೂರು ನಿವಾಸಿ ಸತೀಶ್ ಭಂಡಾರಿ, ಬೈಂದೂರು ಜೂನಿಯರ್ ಕಾಲೇಜು ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿಷಯ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಗೆ ಹಾರಿದ್ದ ಸತೀಶ್ ಭಂಡಾರಿ ಅವರನ್ನು ರಕ್ಷಿಸಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರ ದುರ್ಮರಣ
ಕೋಲಾರ: ಕಾರು ಅಪಘಾತದಲ್ಲಿ ಗಾಯಗೊಂಡು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಚಾಲಕ ವಿಮಲ್(27), ಶರೀನಾ(22) ಮೃತ ದುರ್ದೈವಿಗಳು
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸ್ನೇಹಿತರು, ಇಂದು ಮುಂಜಾನೆ ಚೈನೈ ನಿಂದ ಬಾಡಿಗೆ ಕಾರು ಮಾಡಿಕೊಂಡು ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕೋಲಾರ ತಾಲೂಕಿನ ಷಾಪೂರು ಬಳಿ ಮರಕ್ಕೆ ಕಾರು ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಹರ್ಷಿತಾ, ಡೇವಿಡ್, ವಿಮೋನಿಯಲ್, ವಿಮಲ್, ಶರೀನಾ ಗಾಯಗೊಂಡಿದ್ದರು.
ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಅವರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹರ್ಷಿತಾ, ಡೇವಿಡ್, ವಿಮೋನಿಯಲ್ಗೆ ಚಿಕಿತ್ಸೆ ಮುಂದುವರಿದಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಾತ್ರೆಗೆ ಬಂದಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು
ಹಾಸನ: ಜಾತ್ರೆಗೆ ಬಂದಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ಜಾತ್ರೆಯಲ್ಲಿ ನಡೆದಿದೆ. ಅಂದಾಜು 45 ವರ್ಷದ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಪೊಲೀಸರು ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದಾರೆ.
ಕತ್ತರಿಘಟ್ಟ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಶ್ರೀಲಕ್ಷ್ಮೀದೇವಿ ಶ್ರೀನಿವಾಸನಮ್ಮರವರ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಹೀಗಾಗಿ ಜಾತ್ರೆಗೆ ಎಂದು ಬಂದಾಗ ಮುಡಿ ಕೊಟ್ಟು ಸ್ನಾನಕ್ಕೆ ತೆರಳಿದಾಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು
ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಆಲಮಟ್ಟಿ ರಸ್ತೆ ಬಳಿಯ ಜಮೀನಿನಲ್ಲಿ ವ್ಯಕ್ತಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಡವಡಗಿ ಗ್ರಾಮದ ನಿವಾಸಿ ಸಂಗಣ್ಣ ಹೂಗಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಂಗಣ್ಣ ಹೂವಿನ ವ್ಯಾಪರ ಮಾಡಿಕೊಂಡಿದ್ದನು. ಆದರೆ ಆತ್ಮಹತ್ಯೆ ಏಕೆ ಮಾಡಿಕೊಂಡ ಎಂದು ನಿಖರವಾದ ಕಾರಣ ತಿಳಿದು ಬಂದಿಲ್ಲ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯುತ್ ಪ್ರವಹಿಸಿ ಮಹಿಳೆ ಸ್ಥಳದಲ್ಲೇ ದುರ್ಮರಣ
ಉತ್ತರ ಕನ್ನಡ: ವಿದ್ಯುತ್ ಪ್ರವಹಿಸಿ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿರಸಿ ತಾಲೂಕಿನ ವಡ್ಡಿನಗದ್ದೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಸರಸ್ವತಿ ನಾರಾಯಣ ಕೊಡಿಯಾ(55) ಮೃತ ಮಹಿಳೆ. ಸರ್ವಿಸ್ ಲೈನ್ನಿಂದ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಈ ವೇಳೆ ಬೇಲಿಯ ತಂತಿ ತಗುಲಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 pm, Sun, 11 September 22