
ಗದಗ, ಸೆಪ್ಟೆಂಬರ್ 20: ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಗದಗ ತಾಲೂಕಿನ ಮುಳಗುಂದದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ, ಬರ ಪಟ್ಟಿಯಲ್ಲಿ ಗದಗ ತಾಲೂಕಿನ ಹೆಸರನ್ನು ಸರ್ಕಾರ ಘೋಷಣೆ ಮಾಡದ ಕಾರಣ ರೈತರ ಆಕ್ರೋಶದ ಕಟ್ಟೆ ಒಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಸಭೆ ಮಾಡಿದ್ದೆವು. ಗದಗ ಬರಪೀಡಿತ ಪ್ರದೇಶವೆಂದು ಸ್ಪಷ್ಟವಾದ ಚಿತ್ರಣ ನಮ್ಮದಾಗಿತ್ತು. ಅಧಿಕಾರಿಗಳ ವರದಿ ನಂತರ ಮುಖ್ಯಮಂತ್ರಿಗಳು ಧಾವಿಸಿ ಬಂದರು. ಕದಂಪುರದಿಂದ ಕುರ್ತಕೋಟಿವರೆಗೆ ಸಿಎಂ ಬೆಳೆ ವೀಕ್ಷಣೆ ಮಾಡಿದ್ರು. ಇಷ್ಟು ಆದ್ರು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಹೀಗಾಗಿ ರೈತರು ರೊಚ್ಚಿಗೆದ್ದು ಹೋರಾಟ ಮಾಡುತ್ತಿದ್ದಾರೆ ಎಂದು ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗದಗ ತಾಲೂಕಿನಲ್ಲಿ ಶೇಕಡಾ 49ರಷ್ಟು ಮಳೆ ಕೊರತೆ ಆಗಿದ್ದರೂ ಬರಪೀಡಿತ ಪ್ರದೇಶವೆಂದು ಸರ್ಕಾರ ಯಾಕೆ ಘೋಷಿಸಿಲ್ಲ? ಬರಪೀಡಿತ ತಾಲೂಕು ಎಂದು ಘೋಷಿಸಲು ಯಾರು ಅಡ್ಡಿಯಾದರು? ಅನ್ಯಾಯ, ಮೋಸ ಸಹಿಸೋದಕ್ಕೆ ಸಾಧ್ಯವಿಲ್ಲ. ತಾನು ರೈತರ ಪರ ಇದ್ದವನು, ಜೊತೆಗೆ ನಮ್ಮದೂ ರೈತ ಕುಟುಂಬ. ರೈತರ ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ. ತನ್ನನ್ನು ಶಾಸಕರನ್ನಾಗಿ ಮಾಡಿದ ನಾಯಕರು ಕೂಡ ಇಲ್ಲಿದ್ದಾರೆ. ಬರಪೀಡಿತ ತಾಲೂಕು ಎಂದು ಘೋಷಿಸಲು ಪ್ರಯತ್ನ ಮಾಡ್ತೇನೆ. ಅದು ಸಾಧ್ಯವಾಗದಿದ್ರೆ ಅಕ್ಟೋಬರ್ 10ರವರೆಗೆ ಶಾಸನಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಗಡುವು ಕೊಡುತ್ತೇನೆ. ಅಷ್ಟರೊಳಗೆ ಬರಪೀಡಿತ ತಾಲೂಕು ಎಂದು ಗದಗವನ್ನು ಘೋಷಣೆ ಮಾಡದಿದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ: ಸಂಖ್ಯೆ 124ಕ್ಕೆ ಏರಿಕೆ
ಉತ್ತರ ಕರ್ನಾಟಕ ಭಾಗದ 73 ತಾಲೂಕುಗಳ ಪೈಕಿ 27 ತಾಲೂಕುಗಳ ಬರಪೀಡಿತ ಪ್ರದೇಶ ಅಲ್ಲವೆಂದು ಕೈಬಿಟ್ಟಿದ್ದಾರೆ. ಆದರೆ ಉತ್ತರ ಕರ್ನಾಟಕ ಭಾಗದ ಆ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಮಳೆ ಕೊರತೆ ಹಾಗೂ ಒಣಹವೆ ಪರಿಸ್ಥಿತಿಯ ನಡುವೆ ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಅದಾದ ಬಳಿಕ ಮತ್ತೆ 23 ತಾಲೂಕುಗಳನ್ನು ಈ ಪಟ್ಟಿಗೆ ಸೇರಿಸಿ ಒಟ್ಟು 124 ತಾಲೂಕುಗಳು ಬರಪೀಡಿತ ಎಂದು ಪರಿಗಣಿಸಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.