ಗದಗದಲ್ಲೂ ಶುರುವಾಯ್ತು ನಕಲಿ ಎಸಿಬಿ ಅಧಿಕಾರಿಗಳ ಹಾವಳಿ! ಎಸಿಬಿ ಹೆಸರು ಹೇಳಿ ತಹಶೀಲ್ದಾರ್ಗೆ ವಂಚಿಸುವ ಯತ್ನ
ಗದಗನ ಎಸಿಬಿ ಡಿವೈಎಸ್ಪಿ ಎಮ್ ವೈ ಮಲ್ಲಾಪುರ ಅವರ ಹೆಸರು ಹೇಳಿಕೊಂಡು ಏಪ್ರಿಲ್ 26 ರಂದು ತಹಶೀಲ್ದಾರ್ ಅವರಿಗೆ ಫೋನ್ ಬಂದಿತ್ತು. ಅಕ್ರಮ ಆಸ್ತಿ ಸಂಪಾದನೆ ಮಾಡಿದ ಬಗ್ಗೆ ಎಸಿಬಿಗೆ ಮಾಹಿತಿ ಇದೆ. ಕೂಡಲೆ ದಾಳಿ ಮಾಡುತ್ತೇವೆ.
ಗದಗ: ರಾಜ್ಯದಲ್ಲಿ ಇತ್ತೀಚೆಗೆ ನಕಲಿ ಎಸಿಬಿ (ACB) ಅಧಿಕಾರಿಗಳ ಹಾವಳಿ ಹೆಚ್ಚಾಗಿದೆ. ರೇಡ್ ಮಾಡುವುದಾಗಿ ಅಧಿಕಾರಿಗಳನ್ನ ಹೆದರಿಸಿ ಹಣ ಪಡೆಯುವ ಗ್ಯಾಂಗ್ ಸದ್ದಿಲ್ಲದೇ ಬೆಳೆಯುತ್ತಿದೆ. ಈಗ ಗದಗ ಜಿಲ್ಲೆಯಲ್ಲೂ ಈ ನಕಲಿ ಅಧಿಕಾರಿಗಳ ಭಯ ಶುರುವಾಗಿದೆ. ಅದರಲ್ಲೂ ಜಿಲ್ಲೆಯ ಎಸಿಬಿ ಅಧಿಕಾರಿಗಳ ಹೆಸರು ಹೇಳಿಕೊಂಡು ತಾಲೂಕು ದಂಡಾಧಿಕಾರಿಗಳನ್ನೇ ಬ್ಲಾಕ್ ಮೇಲ್ ಮಾಡುವ ಯತ್ನ ನಡೆದಿದ್ದು ಬೆಳಕಿಗೆ ಬಂದಿದೆ. ಜಿಲ್ಲೆಯ ರೋಣ ತಾಲೂಕಿನ ದಂಡಾಧಿಕಾರಿ ಜಿ ಬಿ ಜಕ್ಕನಗೌಡರ್ ಅವರಿಗೆ ಹೆದರಿಸಲು ಮುಂದಾಗಿದ್ದ ಅನಾಮಿಕನೊಬ್ಬ ಹಣದ ಬೇಡಿಗೆ ಇಟ್ಟಿದ್ದ ಎಂದು ತಿಳಿದುಬಂದಿದೆ.
ಗದಗನ ಎಸಿಬಿ ಡಿವೈಎಸ್ಪಿ ಎಮ್ ವೈ ಮಲ್ಲಾಪುರ ಅವರ ಹೆಸರು ಹೇಳಿಕೊಂಡು ಏಪ್ರಿಲ್ 26 ರಂದು ತಹಶೀಲ್ದಾರ್ ಅವರಿಗೆ ಫೋನ್ ಬಂದಿತ್ತು. ಅಕ್ರಮ ಆಸ್ತಿ ಸಂಪಾದನೆ ಮಾಡಿದ ಬಗ್ಗೆ ಎಸಿಬಿಗೆ ಮಾಹಿತಿ ಇದೆ. ಕೂಡಲೆ ದಾಳಿ ಮಾಡುತ್ತೇವೆ. ಹಣದ ವ್ಯವಸ್ಥೆ ಮಾಡಿದರೆ ದಾಳಿ ತಪ್ಪಿಸುತ್ತೇವೆ ಅಂತಾ ಹೇಳಿದ್ದರು. ತಹಶೀಲ್ದಾರ್ ಅವರಿಗೆ ಬೇರೆ ಬೇರೆ ನಂಬರ್ಗಳಿಂದ ಫೋನ್ ಮಾಡಿ ಹಣ ಹೊಂದಿದ ಕೂಡಲೆ ಗೂಗಲ್ ಪೇ ಮಾಡುವಂತೆ ಹೇಳಿದ್ದರು. ಜೊತೆಗೆ ಕೂಡಲೆ ನೀವು ಇರುವ ಜಾಗದಿಂದ ಬೇರೆಡೆ ಹೋಗಿ, ಸಂಜೆ ಐದು ಗಂಟೆಯೊಳಗೆ ಕೇಸ್ ಕ್ಲೋಸ್ ಮಾಡುತ್ತೇವೆ. ಬೆಂಗಳೂರಿನ ಎಸಿಬಿ ಅಧಿಕಾರಿಗಳು ಸ್ನೇಹಿತರೊಂದಿಗೆ ಹೊರ ದೇಶಕ್ಕೆ ಹೊರಟಿದ್ದಾರೆ. ಇಬ್ಬರಿಗೆ ಏರ್ ಟಿಕೆಟ್ ಬುಕ್ ಮಾಡಬೇಕಿದೆ. ಒಂದು ಟಿಕೆಟ್ ಬೆಲೆ 65 ಸಾವಿರ ರೂಪಾಯಿ ಒಟ್ಟು 1 ಲಕ್ಷ 30 ಸಾವಿರ ರೂಪಾಯಿ ಹಣ ಕೊಟ್ಟರೆ ಕೇಸ್ ಕ್ಲೋಸ್ ಆಗುತ್ತೆ ಅಂತಾ ಡೀಲ್ ಮಾಡೋದಕ್ಕೆ ಮುಂದೆ ಬಂದಿದ್ದರು.
ಎಸಿಬಿ ಅಧಿಕಾರಿ ಎಮ್ ವೈ ಮಲ್ಲಾಪುರ ಅವರ ಹೆಸರಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಆಗಲೇ ಗುಸುಗುಸು ಶುರುವಾಗಿತ್ತು. ವಿಷಯ ತಿಳಿದು ಮಲ್ಲಾಪುರ ಅವರು ತಹಶೀಲ್ದಾರ್ ಅವರಿಗೆ ಕೇಸ್ ದಾಖಲಿಸಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರೋಣ ತಹಶೀಲ್ದಾರ್ ಜಿ ಬಿ ಜಕ್ಕನಗೌಡರ್ ರೋಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ತಹಶೀಲ್ದಾರ್ ಜಕ್ಕನಗೌಡ್ರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಇದೇ ಮಾದರಿಯಲ್ಲಿ ಜಿಲ್ಲೆಯ ಬೇರೆ ಅಧಿಕಾರಿಗಳನ್ನ ವಂಚಿಸಲಾಗುತ್ತಿತ್ತು ಎನ್ನುವ ಮಾಹಿತಿಯೂ ಇದೆ. ಮಹಾರಾಷ್ಟ್ರದಲ್ಲಿ ಕೂತು ಆಪ್ರೇಟ್ ಮಾಡುವ ಖದೀಮರ ಟೀಂ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದೆಯಂತೆ. ಕಾಲರ್ ಐಡಿಯಲ್ಲೂ ಖದೀಮರ ನಂಬರ್ ಇದ್ದರೂ ಎಸಿಬಿ ಡಿವೈಎಸ್ಪಿ ಅಂತಾ ಬರುವ ಹಾಗೆ ಮಾಡಲಾಗಿದೆಯಂತೆ.
ಇತ್ತೀಚೆಗೆ ಅತ್ಯಾಧುನಿಕ ತನಿಕಾ ಯಂತ್ರಗಳು ಇದ್ದರೂ ನಕಲಿ ಟೀಂನ ಯಾಕೆ ಬಂಧಿಸಿಲ್ಲ? ಅವರ ಬಗ್ಗೆ ಇನ್ನೂ ಸುಳಿವಿಲ್ಲ ಅಂದರೆ ಹೇಗೆ| ಅಂತ ಜನರು ಪ್ರಶ್ನೆ ಮಾಡ್ತಿದ್ದಾರೆ. ಈ ಬಗ್ಗೆ ಗದಗ ಎಸ್ಪಿ ಬಳಿ ಕೇಳಿದರೆ ದೂರು ದಾಖಲಾಗಿದೆ, ತನಿಖೆ ನಡೆಸಲಾಗುತ್ತಿದೆ ಎಂದರು.
ವರದಿ: ಸಂಜೀವ ಪಾಂಡ್ರೆ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:55 am, Sun, 15 May 22