AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70ರ ಇಳಿವಯಸ್ಸಿನಲ್ಲೂ ಕುಗ್ಗಲಿಲ್ಲ ಉತ್ಸಾಹ; ಡಾ ರಾಜ್​​ರಿಂದ ಪ್ರಭಾವಿತರಾಗಿ ಕರುನಾಡ ಸೇವೆಗೆ ಟೊಂಕ ಕಟ್ಟಿ ನಿಂತ ಹಿರಿಯ ಜೀವ

ಕನ್ನಡನಾಡಿನ ಸೇವೆಗೆ ಸರ್ಕಾರಿ ನೌಕರಿಯನ್ನು ತ್ಯಜಿಸಿ, ಕನ್ನಡಕ್ಕಾಗಿ ಸರ್ವಸ್ವವನ್ನು ಮುಡಿಪಾಗಿಟ್ಟ ಗದಗನ ಅಜ್ಜ ಕನ್ನಡಿಗರ ಪಾಲಿಗೆ ಸ್ಪೂರ್ತಿ

70ರ ಇಳಿವಯಸ್ಸಿನಲ್ಲೂ ಕುಗ್ಗಲಿಲ್ಲ ಉತ್ಸಾಹ; ಡಾ ರಾಜ್​​ರಿಂದ  ಪ್ರಭಾವಿತರಾಗಿ ಕರುನಾಡ ಸೇವೆಗೆ ಟೊಂಕ ಕಟ್ಟಿ ನಿಂತ ಹಿರಿಯ ಜೀವ
ಕನ್ನಡ ಪ್ರೇಮಿ ಮಲ್ಲಿಕಾರ್ಜುನ ಖಂಡಮ್ಮನವರ
TV9 Web
| Edited By: |

Updated on:Oct 30, 2022 | 10:24 PM

Share

ಅವರು ಕನ್ನಡಕ್ಕಾಗಿ ಹೋರಾಡಿದ ಹಿರಿಯ ಜೀವ. ಕನ್ನಡಕ್ಕಾಗಿ ಜೈಲು ಸೇರಿದ ಅಪ್ಪಟ ಕನ್ನಡ ಪ್ರೇಮಿ. ಈ ಕನ್ನಡ ಪ್ರೇಮಿಯನ್ನು ಅಂದು ಜೈಲಿನಿಂದ ಹೊರ ತಂದವರು ವರನಟ ಡಾ. ರಾಜ್​ಕುಮಾರ (Rajkumar). ಡಾ ರಾಜ್ ಅವರ ಭಾಷಣದಿಂದ ಪ್ರಭಾವಿತನಾಗಿ ಕನ್ನಡನಾಡಿನ ಸೇವೆಗೆ ನಿಂತರು. ಕರುನಾಡ ಸೇವೆಗಾಗಿ ಸರ್ಕಾರಿ ನೌಕರಿಗೆ ಗುಡ್ ಬೈ ಹೇಳಿ, ಹಳ್ಳಿ ಹಳ್ಳಿಯಲ್ಲಿ ಕನ್ನಡದ ಕಂಪು ಹರಡುತ್ತಿದ್ದಾರೆ. ತಮ್ಮ ಇಡೀ ಮನೆಯನ್ನು ಕನ್ನಡಮಯವಾಗಿಸಿದ್ದಾರೆ. ಇವರು 70ರ ಇಳಿವಯಸ್ಸಿನಲ್ಲೂ ಸ್ವಂತ ಬೈಕ್​ನ್ನು ಕನ್ನಡದ ರಥ ಮಾಡಿ ಕನ್ನಡ ನಾಡಿನ ಸೇವೆ ಮಾಡುತ್ತಿದ್ದಾರೆ. ಪ್ರತಿ ಉಸಿರಲ್ಲೂ ಕನ್ನಡ ಹೊತ್ತು ಸುತ್ತಾಡುವ ಹಿರಿಯ ಜೀವ ಮಲ್ಲಿಕಾರ್ಜುನ ಖಂಡಮ್ಮನವರ.

ನವೆಂಬರ್ 1 ರಂದು ಮಾತ್ರ ರಾಜ್ಯದಲ್ಲಿ ರಾಜೋತ್ಸವದ ಸಡಗರ ಜೋರಾಗುತ್ತೆ. ಆದರೆ, ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ನಿತ್ಯವೂ ರಾಜ್ಯೋತ್ಸವ ಸಡಗರ. ನಿತ್ಯವೂ ಕನ್ನಡ ಜಪ, ಕನ್ನಡದ ಕಂಪು ಸದ್ದಿಲ್ಲದೇ ಹರಡುತ್ತಿದೆ. ಹಳದಿ ನೆಹರು ಶರ್ಟ್, ಕೆಂಪು ಜಾಕೇಟ್, ಕೆಂಪು ಪ್ಯಾಂಟ್ ಹಾಕಿಕೊಂಡು ನಾಲ್ಕು ದಶಕಗಳಿಂದ ಸದ್ದಿಲ್ಲದೆ ಕನ್ನಡಾಂಬೆಯ ಸೇವೆ ಮಾಡುತ್ತಿದ್ದಾರೆ. ಕನ್ನಡವೇ ನಮ್ಮ ಮನೆ ದೇವರು ಅಂತ ನಿತ್ಯವೂ ಕನ್ನಡ ಪೂಜಿಸುತ್ತಾರೆ. ಈ ಅಜ್ಜನ ಪ್ರತಿ ಉಸಿರಿನಲ್ಲೂ ಕನ್ನಡ ಕಂಪು ಇದೆ. ವೇಷಭೂಷಣವೂ ಕನ್ನಡ. ಇವರ ಕನ್ನಡ ಹೋರಾಟ ಆರಂಭವಾಗಿದ್ದು ಮೈಸೂರಿನಿಂದ. 1982 ರಲ್ಲಿ ಮೈಸೂರಿನಲ್ಲಿ ವಿ ಕೃ ಗೋಕಾಕ ವರದಿ ಜಾರಿಗೆಗಾಗಿ ಮೈಸೂರಿನಲ್ಲಿ ಹೋರಾಟ ನಡೆದಿತ್ತು. ಈ ಹೋರಾಟದಲ್ಲಿ ಮಲ್ಲಿಕಾರ್ಜುನ ಖಂಡಮ್ಮನವರ ಭಾಗಿಯಾದ್ದರು. ಅಂದು ಪ್ರತಿಭಟನಾಕಾರರು 25ಕೆಜಿ ಕಲ್ಲು ತಲೆಮೇಲೆ ಹೊತ್ತು ನಗರವನ್ನು ಸುತ್ತಾಡುವ ಮೂಲಕ ಪ್ರತಿಭಟನೆ ಮಾಡುತ್ತಿದ್ದರು. ಆ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಭಾಗಿಯಾಗಿದ್ದರು.

ಈ ಹೋರಾಟದಲ್ಲಿ 150 ಜನರನ್ನು ಪೊಲೀಸರು ಬಂಧಿಸಿದ್ದರು. ಆಗ ವರನಟ ಡಾ ರಾಜಕುಮಾರ ಅವರಿಗೆ ಈ ವಿಷಯ ಗೋತ್ತಾಗಿ ಮೈಸೂರಿಗೆ ಬಂದು ಮಲ್ಲಿಕಾರ್ಜುನವರನ್ನು ಬಿಡುಗಡೆ ಮಾಡಿಸಿದ್ದರು, ಅಂತ ಮಲ್ಲಿಕಾರ್ಜುನ ಅಜ್ಜ ಅಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ.

ಇವರ ಮನೆ ಮೇಲೆ ಇಡೀ ವರ್ಷ ಕನ್ನಡದ ಧ್ವಜ ರಾರಾಜಿಸುತ್ತದೆ. ಇನ್ನೂ ರಾಷ್ಟ್ರೀಯ ಹಬ್ಬವಾದ ಆಗಸ್ಟ್ 15 ಸ್ವಾತಂತ್ರ್ಯೋತ್ಸವ, ಜನವೇರಿ 26 ಗಣರಾಜೋತ್ಸವ, ನವೆಂಬರ್ 1 ರಂದು ಬೈಕ್​ನ್ನು ಕನ್ನಡ ರಥವನ್ನಾಗಿ ನಿರ್ಮಾಣಮಾಡ್ತಾರೆ. ಕೆಂಪು ಹಳದಿ ಹೂವುಗಳಿಂದ ಅಲಂಕಾರ ಮಾಡಿ, ಅದರಲ್ಲಿ ಕನ್ನಡ ಅಭಿಮಾನ ಬಿಂಬಿಸುವ ಹಾಡು ಹಚ್ಚಿಕೊಂಡು ಹೊರಟರೇ ಸಾಕು ಎಲ್ಲರೂ ಮಲ್ಲಿಕಾರ್ಜುನ ಅವರನ್ನೇ ನೋಡುತ್ತಾ ನಿಂತು ಬಿಡುತ್ತಾರೆ. ಇವರ ಮನೆಯಲ್ಲಿ ಚಿಕ್ಕದಾದ ಕನ್ನಡ ಗ್ರಂಥಾಲಯವಿದೆ. ಗ್ರಾಮದ ಮಕ್ಕಳಿಗೆ ನಿತ್ಯವೂ ಕನ್ನಡ ಪುಸ್ತಕ ನೀಡಿ ಮಕ್ಕಳಲ್ಲಿ ಕನ್ನಡದ ಸಾಹಿತ್ಯವನ್ನು ಉಣಬಡಿಸುತ್ತಿದ್ದಾರೆ.

ಇವರ ಮನೆಯ ಗೋಡೆಗಳ ಮೇಲೆ ಕನ್ನಡ ಗಾದೆಗಳು, ವಚನಗಳ ನಾಮಫಲಕ ರಾರಾಜಿಸುತ್ತವೆ. ಈ ಅಜ್ಜನ ಕನ್ನಡ ಪ್ರೀತಿ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಕನ್ನಡ ಹೋರಾಟ, ಸಾಮಾಜಿಕ ಕಾರ್ಯಕ್ಕೆ ಸರ್ಕಾರಿ ನೌಕರಿಗೆ ಅಡ್ಡಿಯಾದಾಗ ಸರ್ಕಾರಿ ನೌಕರಿ ತ್ಯಜಿಸಿದ್ದಾರೆ. ಅಂದು ಸರ್ಕಾರಿ ನೌಕರಿ ಬಿಡುವಾಗ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೆ, ಕುಟುಂಬ ನಿರ್ವಹಣೆ ಮಾಡೋ ಜವಾಬ್ದಾರಿ ನನ್ನದು ಅಂತ ಕುಟುಂಬದವರಿಗೆ ಧೈರ್ಯ ಹೇಳಿದ್ದರು. ಇವರ ಕನ್ನಡನಾಡಿನ ಸೇವೆಗೆ ಈಗ ಇಡೀ ಕುಟುಂಬ ಸಾಥ್ ನೀಡುತ್ತಿದೆ. ಗ್ರಾಮಸ್ಥರು ಕೂಡ ಅಜ್ಜನ ಕನ್ನಡ ಪ್ರೇಮಕ್ಕೆ ಕೈಜೊಡಿಸಿದ್ದಾರೆ. ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಆದರೆ, ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಗದಗ ಜಿಲ್ಲೆಯ ಜನರು ಒತ್ತಾಯ ಮಾಡುತ್ತಿದ್ದಾರೆ.

ವರದಿ- ಸಂಜೀವ ಪಾಂಡ್ರೆ, ಟಿವಿ9 ಗದಗ

Published On - 9:27 pm, Sun, 30 October 22