
ಗದಗ, ನ.2: ಹೊರಗಡೆಯಿಂದ ನೋಡಿದರೆ ಅಬ್ಬಾ! ಗ್ರಾಮೀಣ ಭಾಗದಲ್ಲೂ ಎಂಥಾ ಅತ್ಯಾಧುನಿಕ ಆಸ್ಪತ್ರೆ ಸೌಲಭ್ಯ ಎನ್ನುವಂತಹ ಭವ್ಯ ಕಟ್ಟಡ, ಅತ್ಯಾಧುನಿಕ ಆಪರೇಷನ್ ಥಿಯೇಟರ್ ಹಾಗೂ 30 ಹಾಸಿಗೆಗಳ ಸೌಲಭ್ಯ. ಆದರೆ, ಆಸ್ಪತ್ರೆಯ ಒಳಗೆ ಹೆಜ್ಜೆ ಇಟ್ಟರೆ ಸಾಕು ಪಕ್ಕಾ ‘ಭೂತ ಬಂಗಲೆ’ಯಂತೆ ದರ್ಶನ ನೀಡುತ್ತದೆ! ಎಲ್ಲಿ ನೋಡಿದರೂ ಧೂಳು, ಸ್ವಚ್ಛತೆಯೇ ಮಾಯ!
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಸಮುದಾಯ ಆರೋಗ್ಯ ಕೇಂದ್ರದ ಕಥೆ ಇದು. ಕೋಟಿ ಕೋಟಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಿದರೂ ವೈದ್ಯರು ಹಾಗೂ ಸಿಬ್ಬಂದಿಗಳನ್ನೇ ನೇಮಿಸದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ಹಾಗೂ ರೋಗಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರದ ಎನ್‌ಹೆಚ್‌ಎಮ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನ ಸೇರಿ ಒಟ್ಟು 6 ಕೋಟಿ ರೂಪಾಯಿ ವೆಚ್ಚದಲ್ಲಿ ಈ 30 ಹಾಸಿಗೆಗಳ ಹೈಟೆಕ್ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಗಿದೆ. ಕಳೆದ ವರ್ಷ ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಅವರು ಈ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು. : ಉದ್ಘಾಟನೆಯಾಗಿ ವರ್ಷಗಳೇ ಕಳೆದರೂ ಆಸ್ಪತ್ರೆ ಬಾಗಿಲು ತೆರೆದು ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಕಟ್ಟಡಕ್ಕೆ ಇನ್ನೂ ಸುಮಾರು ೩ ಕೋಟಿ ರೂಪಾಯಿ ವೆಚ್ಚದ ವೈದ್ಯಕೀಯ ಉಪಕರಣಗಳು ಬರಬೇಕಿದೆ.
ಈ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕನಿಷ್ಠ 5 ಮುಖ್ಯ ವೈದ್ಯರು ಹಾಗೂ ನರ್ಸ್‌ಗಳು ಸೇರಿ 30ಕ್ಕೂ ಹೆಚ್ಚು ಸಿಬ್ಬಂದಿಗಳ ಅಗತ್ಯವಿದೆ. ಆದರೆ ರಾಜ್ಯ ಸರ್ಕಾರ ವೈದ್ಯರನ್ನಾಗಲಿ, ಸಿಬ್ಬಂದಿಯನ್ನಾಗಲಿ ನೇಮಕ ಮಾಡಿಲ್ಲ. “ಹೊರಗಡೆ ನೋಡಲು ಅದ್ಭುತವಾಗಿರುವ ಕಟ್ಟಡ ಒಳಗಡೆ ಸಂಪೂರ್ಣವಾಗಿ ಧೂಳು ತಿನ್ನುತ್ತಿದೆ. ರೋಗಿಗಳಿಗೆ ಉಚಿತ ಹಾಗೂ ಉತ್ತಮ ಚಿಕಿತ್ಸೆ ನೀಡಬೇಕಿದ್ದ ಆಸ್ಪತ್ರೆ ಸಿಬ್ಬಂದಿಗಳ ಸಂಸಾರ ಮಾಡುವ ತಾಣವಾಗಿದೆ. ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದ್ದು, ಸರ್ಕಾರ ತಕ್ಷಣವೇ ವೈದ್ಯರನ್ನು ನೇಮಿಸಿ ಚಿಕಿತ್ಸೆ ಆರಂಭಿಸಬೇಕು,” ಎಂದು ಸ್ಥಳೀಯ ನಿವಾಸಿ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿಯರೇ ಎಚ್ಚರ….: ಒಟಿಪಿ, ಬ್ಯಾಂಕ್ ವಿವರ ಕೇಳಿದ್ರೆ ನೀಡಬೇಡಿ; ಇಲ್ಲಿದೆ ಸರ್ಕಾರ ಮಹತ್ವದ ಸೂಚನೆ
“ಹೊಳೆಆಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು ಹಾಗೂ ಇತರ ಸಿಬ್ಬಂದಿಗಳ ನೇಮಕಾತಿ ಮತ್ತು 3 ಕೋಟಿ ವೆಚ್ಚದ ವೈದ್ಯಕೀಯ ಉಪಕರಣಗಳ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಹಾಗೂ ಅನುದಾನ ಸಿಕ್ಕ ತಕ್ಷಣವೇ ವೈದ್ಯರನ್ನು ನಿಯೋಜಿಸಿ ಆಸ್ಪತ್ರೆಯನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಗೊಳಿಸಲಾಗುವುದು.” ಎಂದು ಗದಗ ಡಿಎಚ್‌ಒ ಡಾ. ಎಸ್.ಎಸ್. ನಿಲಗುಂದ ಹೇಳಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ಕೋಟ್ಯಾಂತರ ವೆಚ್ಚದ ಈ ಆಸ್ಪತ್ರೆ ಕಟ್ಟಡ ಪಾಳು ಬೀಳುವುದನ್ನು ತಪ್ಪಿಸಿ, ಗ್ರಾಮೀಣ ಭಾಗದ ಬಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಬೇಕಿದೆ ಎಂದು ಸಾರ್ವಜನಿಕ ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ