ಪ್ರೇಮಿಗಳಿಬ್ಬರು ರಾತ್ರೋರಾತ್ರಿ ಮನೆಯಿಂದ ಎಸ್ಕೇಪ್; ಬೆಳಗ್ಗೆ ಮರಕ್ಕೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆ
ಆ ಪ್ರೇಮಿಗಳು ಪರಸ್ಪರ ಪ್ರೀತಿ ಇಬ್ಬರು ಮಾಡುತ್ತಿದ್ದರು. ಮದುವೆಯಾಗಬೇಕು ಎಂದು ಕನಸು ಕೂಡ ಕಂಡಿದ್ದರು. ಆದ್ರೆ, ತಮ್ಮ ಪ್ರೀತಿ ವಿಷಯ ಪೋಷಕರಿಗೆ ಹೇಳದೆ ನಿಗೂಢವಾಗಿ ಇಟ್ಟಿದ್ರು. ಹೀಗಾಗಿಯೇ ಯುವತಿ ಪೋಷಕರು ಇನ್ನೋರ್ವ ಯುವಕನ ಜೊತೆಗೆ, ಮದುವೆ ಮಾಡಿದ್ದಾರೆ. ಯುವತಿ ಹಸೆಮಣೆ ಏರಿ ತವರೂ ಮನೆಗೆ ಬಂದಿದ್ದೇ ತಡ, ಪ್ರೇಮಿಗಳು ರಾತ್ರೋರಾತ್ರಿ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಳಿ ಬದುಕಬೇಕಾದ ಜೋಡಿ ಜೊತೆಯಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಆದ್ರೆ, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿದೆ.

ಗದಗ, ಏ.13: ಪರಸ್ಪರ ಪ್ರೀತಿ ಮಾಡಿ ಇಬ್ಬರು ಬಿಟ್ಟಿರಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ (Gajendragad) ತಾಲೂಕಿನ ನರೇಗಲ್ ಪಟ್ಟಣದಲ್ಲಿ ನಡೆದಿದೆ. ಅಪ್ಪಣ್ಣ ಗೊರಕಿ ಹಾಗೂ ಲಲಿತಾ ಹಲಗೇರಿ ಮೃತ ರ್ದುದೈವಿಗಳು. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದ್ರೆ, ಕುಟುಂಬಸ್ಥರಿಗೆ ಹಾಗೂ ತಮ್ಮ ಸ್ನೇಹಿತರ ಮುಂದೆ ಕೂಡ ತಮ್ಮ ಪ್ರೀತಿ-ಪ್ರೇಮದ ವಿಷಯವನ್ನು ಹೇಳಿರಲಿಲ್ಲ. ಈ ಹಿನ್ನಲೆ ಲಲಿತಾ ಕುಟುಂಬಸ್ಥರು ಏಪ್ರಿಲ್ 4 ರಂದು ಬೇರೆ ಯುವಕನ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ನಾಲ್ಕೈದು ದಿನ ಗಂಡನ ಮನೆಯಲ್ಲಿದ್ದು, ತವರೂ ಮನೆಗೆ ಬಂದಿದ್ದ ಲಲಿತಾ, ನಿನ್ನೆ(ಏ.12) ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಹೆತ್ತವರಿಗೆ ಕಣ್ಣುತಪ್ಪಿಸಿ ಮನೆಯಿಂದ ಹೊರಗಡೆ ಹೋಗಿದ್ದಾಳೆ.
ಯುವಕ ಅಪ್ಪಣ್ಣ ಕೂಡ ರಾತ್ರಿ 10 ಗಂಟೆಗೆ ಮನೆಯನ್ನು ಬಿಟ್ಟಿದ್ದಾನೆ. ಪಕ್ಕಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಯೇ ಹಗ್ಗವನ್ನು ತೆಗೆದುಕೊಂಡು ಹೋಗಿದ್ದಾರೆ. ಅದರಂತೆ ಹಗ್ಗದಿಂದ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದ ಆಧಾರ ಸ್ಥಂಭವಾದ ಮಗನನ್ನು ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಅಪ್ಪಣ್ಣ ಹಾಗೂ ಲಲಿತಾ ಇಬ್ಬರ ಪ್ರೀತಿ-ಪ್ರೇಮದ ವಿಷಯ ಕುಟುಂಬಸ್ಥರಿಗೆ ಹಾಗೂ ಪಟ್ಟಣದಲ್ಲಿ ಯಾರಿಗೂ ಗೊತ್ತೇ ಇಲ್ಲ. ಯಾಕೆಂದರೆ ಲಲಿತಾ ಬಿಇ ಇಂಜಿನಿಯರಿಂಗ್ ಓದಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಅಪ್ಪಣ್ಣ 10 ನೇ ತರಗತಿಗೆ ಶಾಲೆಯನ್ನು ಬಿಟ್ಟು, ಕೂಲಿ ಕೆಲಸಕ್ಕೆ ಹೋಗುತ್ತಿದ್ದ.
ಇದನ್ನೂ ಓದಿ:ಪತ್ನಿ ಅಕ್ರಮ ಸಂಬಂಧ ಶಂಕೆ; ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ಆದ್ರೆ, ನರೇಗಲ್ ಪಟ್ಟಣದಲ್ಲಿ ಇಬ್ಬರ ಮನೆಗಳು ಒಂದೇ ಪ್ರದೇಶದಲ್ಲಿವೆ. ಹೀಗಾಗಿ ಇಬ್ಬರ ಪರಿಚಯವಾಗಿ ಪ್ರೀತಿ ಮೂಡಿದೆ. ಆದ್ರೆ, ಈ ವಿಷಯ ಕುಟುಂಬಸ್ಥರಿಗೆ ಗೊತ್ತಿಲ್ಲ. ಇಬ್ಬರು ಬಹಳ ಪ್ರೀತಿ ಮಾಡಿ, ಒಬ್ಬರನ್ನೊಬ್ಬರು ಬಿಟ್ಟು ಇರಬಾರದು ಎನ್ನುವ ಉದ್ದೇಶದಿಂದ ಆತ್ಮಹತ್ಯೆಗೆ ಪ್ಲಾನ್ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ, ಲಲಿತಾ ಮದುವೆಯಾದ ಮಾಂಗಲ್ಯ ಸರವನ್ನು ತೆಗೆದು ಇಟ್ಟು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎರಡು ಕಡೇ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಆತ್ಮಹತ್ಯೆಗೆ ನಿಖರವಾದ ಕಾರಣ ಗೊತ್ತಾಗಬೇಕಾಗಿದೆ. ಪ್ರೇಮಿಗಳ ಆತ್ಮಹತ್ಯೆಯಿಂದ ಇಡೀ ನರೇಗಲ್ ಪಟ್ಟಣವೇ ಬೆಚ್ಚಿಬಿದ್ದಿದ್ದು, ಮದುವೆಯಾಗಿ ಒಂದೇ ವಾರದಲ್ಲಿ ಯುವತಿ, ಪ್ರೀಯಕರನ ಜೊತೆಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ದುಡುಕಿನ ನಿರ್ಧಾರ ತೆಗೆದುಕೊಂಡು ಪ್ರೇಮಿಗಳು ತಮ್ಮ ಬದುಕೇ ಅಂತ್ಯವಾಗಿಸಿಕೊಂಡಿದ್ದಾರೆ. ಆದ್ರೆ, ಹೆತ್ತು ಹೊತ್ತು ಸಾಕಿ ಸಲುಹಿದ ಹೆತ್ತವರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



