ಗದಗನ ಐತಿಹಾಸಿಕ ಭೀಷ್ಮ ಕೆರೆಗೆ ಕಲುಷಿತ ನೀರು: ಮೀನುಗಳ ಮಾರಣಹೋಮ; ಕೆಟ್ಟ ವಾಸನೆಯಿಂದ ಪ್ರವಾಸಿಗರು ಪರದಾಟ
Gadag Bhishma Kere pollution: ಗದಗನ ಐತಿಹಾಸಿಕ ಭೀಷ್ಮ ಕೆರೆಗೆ ಚರಂಡಿ ನೀರು ಸೇರಿ ಸಂಪೂರ್ಣ ಕಲುಷಿತಗೊಂಡಿದೆ. ಬೃಹತ್ ಬಸವಣ್ಣನ ಮೂರ್ತಿ ಮತ್ತು ಬೋಟಿಂಗ್‌ನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಈ ಕೆರೆಯಲ್ಲಿ ಈಗ ನೂರಾರು ಮೀನುಗಳು ಸಾವನ್ನಪ್ಪುತ್ತಿವೆ. ದುರ್ವಾಸನೆಯಿಂದ ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ.

ಗದಗ, ಆಗಸ್ಟ್ 18: ಅದು ಐತಿಹಾಸಿಕ ಭೀಷ್ಮ ಕೆರೆ. ಆ ಕೆರೆಯಲ್ಲಿ ಬೃಹತ್ ಬಸವಣ್ಣನ ಮೂರ್ತಿ ಹಾಗೂ ಬೋಟಿಂಗ್ ವ್ಯವಸ್ಥೆ ಕೂಡ ಇದೆ. ಹೀಗಾಗಿ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಆದರೆ ಅಂತಹ ಕೆರೆಗೆ ಚರಂಡಿ ನೀರು ಸೇರುತ್ತಿದೆ. ಪರಿಣಾಮ ಇಡೀ ಕೆರೆ ನೀರು ಕಲುಷಿತವಾಗಿವೆ (Bhishma Kere pollution). ಹೀಗಾಗಿ ಕೆರೆಯಲ್ಲಿರುವ ಮೀನುಗಳ ಮಾರಣಹೋಮವೇ ನಡೆದಿದೆ. ಉಪಲೋಕಾಯುಕ್ತರು ಸರ್ಕಾರದ ವಿರುದ್ಧ ಅವಳಿ ನಗರದ ಜನರು ಆಕ್ರೋಶ ಹೊರಹಾಕಿದ್ದಾರೆ.
ನಡೆದಿದ್ದೇನು?
ಗದಗ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಗೆ ಚರಂಡಿ ನೀರು ಸೇರುತ್ತಿದೆ. ಹೀಗಾಗಿ ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ನಿತ್ಯ ಮೀನುಗಳು ಸಾವಿನ ಮನೆ ಸೇರುತ್ತಿವೆ. ಈ ಭೀಷ್ಮ ಕೆರೆಗೆ ಸಾಕಷ್ಟು ಪ್ರವಾಸಿಗರು ಬರ್ತಾರೆ. ಭೀಷ್ಮ ಕೆರೆಯಲ್ಲಿನ ಬೃಹತ್ ಬಸವಣ್ಣನ ಮೂರ್ತಿ ಹಾಗೂ ಬೋಟಿಂಗ್ ವ್ಯವಸ್ಥೆ ಕೂಡ ಇದೆ. ಆದರೆ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿದೆ.
ನೂರಾರು ಮೀನುಗಳ ಮಾರಣಹೋಮ
ಇನ್ನೂ ಭೀಷ್ಮ ಕೆರೆ ಅಭಿವೃದ್ಧಿಗೆ ಮಾಜಿ ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ಬಹಳ ಮುತುವರ್ಜಿ ವಹಿಸಿದ್ದರು. ಕೋಟ್ಯಂತರ ರೂ ಅನುದಾನ ತಂದು ಅಭಿವೃದ್ಧಿ ಮಾಡಿದ್ದರು. ಆದರೆ ಇದೀಗ ಇಡೀ ವ್ಯವಸ್ಥೆ ಹಳ್ಳ ಹಿಡದಿದೆ. ಗದಗನ ಹೊಸ ಬಸ್ ನಿಲ್ದಾಣದ ಮಾರ್ಗ ಚರಂಡಿ ನೀರು ಭೀಷ್ಮ ಕೆರೆಗೆ ಸೇರುತ್ತಿದ್ದು, ನೂರಾರು ಮೀನುಗಳ ಸಾವಿಗೆ ಪ್ರಮುಖ ಕಾರಣವಾಗಿದೆ. ಕೆರೆಯ ಬಳಿ ದುರ್ವಾಸನೆ ಬರ್ತಾಯಿದೆ. ಆದರು ಕೂಡ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಜೆಡಿಎಸ್ ರಾಜ್ಯ ವಕ್ತಾರ ಗೋವಿಂದಗೌಡ್ರು ಆಕ್ರೋಶ
ಕಳೆದ ವಾರ ಲೋಕಾಯುಕ್ತ ನ್ಯಾಯಾಧೀಶರು ಬಂದಾಗ, ಕೆರೆಗೆ ಚರಂಡಿ ನೀರು ಬರದ ಹಾಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ನ್ಯಾಯಾಧೀಶರ ಸೂಚನೆ ಬೆನ್ನಲ್ಲೂ ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆ ಕಲುಷಿತವಾಗಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಗೋವಿಂದಗೌಡ್ರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಅನುದಾನ ಕೊರತೆಯೋ, ಅಧಿಕಾರಿಗಳ ಬೇಜವಾಬ್ದಾರಿಯೋ? ಗದಗ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಖಾಲಿ ಖಾಲಿ
ಗದಗ ಬೆಟಗೇರಿ ಅವಳಿ ನಗರದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಗೆಯಾಗಲು ಇದೆ ಭೀಷ್ಮ ಕೆರೆ ಕಾರಣ. ಹೀಗಾಗಿ ಅವಳಿ ನಗರದ ಬೋರ್ವೆಲ್ ಹಾಗೂ ಬಾವಿಗಳಿಗೆ ಸಾಕಷ್ಟು ನೀರು ಬರ್ತಾಯಿದೆ. ಆದರೆ ಅಂತಹ ಕೆರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತವಾಗುತ್ತಿದೆ. ಇನಾದರೂ ಅಧಿಕಾರಿಗಳು ಎಚ್ಚತ್ತುಕೊಂಡು ಭೀಷ್ಮ ಕೆರೆಗೆ ಕಾಯಕಲ್ಪ ಕಲ್ಪಿಸಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:33 pm, Tue, 18 August 26




