ಗಾಂಧಿ ಜಯಂತಿ ದಿನವೇ ಮಹಾಲಯ ಅಮಾವಾಸ್ಯೆ! ಮಾಂಸ ಮಾರಾಟ ನಿಷೇಧದಿಂದ ವ್ಯಾಪಾರಿಗಳಿಗೆ, ಮಹಾಲಯ ಆಚರಣೆಗೆ ಸಂಕಷ್ಟ
ಈ ಬಾರಿ ಗಾಂಧಿ ಜಯಂತಿಯ ದಿನವೇ ಮಹಾಲಯ ಅಮಾವಾಸ್ಯೆ ಕೂಡ ಬಂದಿದ್ದು, ಅಂದು ಪ್ರಾಣಿವಧೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆದೇಶ ಹೊರಡಿಸಿವೆ. ಇದರಿಂದ ರಾಜ್ಯದಲ್ಲಿ ಚಿಕನ್, ಮಟನ್ ಸಿಗಲಾರದು. ಇದು ಹಬ್ಬದ ಮೂಡ್ನಲ್ಲಿದ್ದವರು ಮತ್ತು ವ್ಯಾಪಾರಿಗಳು ಕಂಗಲಾಗುವಂತೆ ಮಾಡಿದೆ.
ಬೆಂಗಳೂರು, ಅಕ್ಟೋಬರ್ 1: ಪ್ರತಿವರ್ಷ ಆಕ್ಟೋಬರ್ 2 ರಂದು ಮಹಾತ್ಮ ಗಾಂಧಿಜೀಯವರ ಜನ್ಮದಿನ (ಗಾಂಧಿ ಜಯಂತಿ) ಆಚರಣೆ ಮಾಡಲಾಗುತ್ತದೆ. ಆ ದಿನ ದೇಶದಲ್ಲಿ ಪ್ರಾಣಿವಧೆ ಮಾಡುವಂತಿಲ್ಲ. ಹೀಗಾಗಿ ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಅಕ್ಟೋಬರ್ 2 ರಂದು ಬುಧವಾರ, ಮಾಂಸ ಮಾರಾಟ ನಿಷೇಧ ದಿನ ಎಂದು ಆದೇಶ ಹೊರಡಿಸಿವೆ. ಆದರೆ ಈ ಬಾರಿ ಆಕ್ಟೋಬರ್ 2 ರಂದೇ ಮಹಾಲಯ ಅಮಾವಾಸ್ಯೆ ಕೂಡ ಬಂದಿದ್ದು, ರಾಜ್ಯದ ಲಕ್ಷಾಂತರ ಜನರು ಧೈವಧೀನಾರಾಗಿರುವ ತಮ್ಮ ಹಿರಿಯರಿಗೆ ಎಡೆ ಇಟ್ಟು ಪೂಜೆ ಮಾಡುತ್ತಾರೆ.
ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ನಿಂದ ಸಿಎಂಗೆ ಪತ್ರ
ಆದರೆ, ಇದೀಗ ಗಾಂಧಿ ಜಯಂತಿ ದಿನವೇ ಮಹಾಲಯ ಕೂಡ ಬಂದಿರುವುದರಿಂದ ಆ ದಿನ ಮಾಂಸ ಮಾರಾಟ ಮಾಡದಂತಾಗಿದೆ. ಹೀಗಾಗಿ, ಗಾಂಧಿ ಜಯಂತಿ ದಿನ ಮಾಂಸ ಮಾರಾಟಕ್ಕೆ ಅವಕಾಶ ನೀಡುವಂತೆ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಸಿಎಂ ಕಚೇರಿಗೆ ಪತ್ರ ಬರೆದು ಮನವಿ ಮಾಡಿದೆ.
ವಿಶೇಷ ದಿನವೆಂದು ಪರಿಗಣಿಸಲು ಮನವಿ
ಮಹಾಲಯದಂದು ಹಿಂದೂಗಳು ತಮ್ಮ ಪಿತೃಗಳಿಗೆ ಮಾಂಸವನ್ನು ಎಡೆಯಿಟ್ಟು ಪೂಜೆ ಮಾಡುತ್ತಾರೆ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಅಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಇದರಿಂದ, ವ್ಯಾಪಾರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ. ಹಿರಿಯರಿಗೆ ಮಾಂಸದ ಅಡುಗೆ, ಪೂಜೆಗೆ ಎಡೆ ಇಡಲು ಆಗುವುದಿಲ್ಲ. ಈ ಒಂದು ದಿನವನ್ನು ವಿಶೇಷ ದಿನ ಎಂದು ಪರಿಗಣಿಸಿ, ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸಿಎಂ ಮಾಂಸ ಮಾರಾಟಗಾರರು ಮನವಿ ಮಾಡಿದ್ದಾರೆ ಎಂದು ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್ ನಾಗರಾಜ್ ತಿಳಿಸಿದ್ದಾರೆ.
ಈಗಾಗಲೇ ಮಹಾಲಯ ಅಮಾವಾಸ್ಯೆಗೆ ಬೇರೆ ಬೇರೆ ರಾಜ್ಯದಿಂದ ಕುರಿ, ಮೇಕೆಗಳನ್ನು ತರಿಸಿಕೊಳ್ಳಲಾಗಿದೆ. ಕೋಳಿಗಳನ್ನು ರೆಡಿ ಇಟ್ಟುಕೊಂಡಿದ್ದೇವೆ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಕೆಲ ಮಾಂಸದ ಅಂಗಡಿ ಮಾಲೀಕರು ಮಾತ್ರ ನಾವು ಅಂದು ಮಾಂಸ ಕಟ್ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.
ಗಾಂಧೀಜಿ ಹುಟ್ಟುವ ಮುಂಚೆಯಿಂದಲೂ ನಾವು ಮಹಾಲಯ ಅಮಾವಾಸ್ಯೆಗೆ ಹಿರಿಯರಿಗೆ ಎಡೆ ಇಡುತ್ತಿದ್ದೇವೆ. ಈ ಬಾರಿಯೂ ನಾವು ಇಡುತ್ತೇವೆ. ನಮ್ಮ ಗ್ರಾಹಕರಿಗಾಗಿ ಮಾಂಸ ಮಾರಾಟ ಮಾಡುತ್ತೇವೆ. ಅಧಿಕಾರಿಗಳು ಕೇಸ್ ಹಾಕಿದರೂ ಪರವಾಗಿಲ್ಲ ಎಂದು ಮಾಂಸದಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿಗೆ ಬೈಕ್ ಸವಾರ ಬಲಿ: ಹೆಲ್ಮೆಟ್ ಹಾಕಿದ್ರೂ ಉಳಿಯಲಿಲ್ಲ ಜೀವ!
ಒಟ್ಟಿನಲ್ಲಿ ಮಹಾತ್ಮ ಗಾಂಧಿ ಜಯಂತಿಯ ದಿನವೇ ಮಹಾಲಯ ಅಮಾವಾಸ್ಯೆ ಬಂದಿರುವುದು ಹಿಂದೂಗಳು ಮತ್ತು ವ್ಯಾಪಾರಿಗಳಿಗೆ ತಂದಿರೋದಂತು ಸುಳ್ಳಲ್ಲ. ಸಿಎಂ ಸಿದ್ದರಾಮಯ್ಯ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:14 am, Tue, 1 October 24