ಬೆಂಗಳೂರು, ಸೆಪ್ಟೆಂಬರ್ 06: ಶನಿವಾರದಂದು ಕರ್ನಾಟಕದಾದ್ಯಂತ ಗಣೇಶ ಹಬ್ಬವನ್ನು (Ganesh Chaturthi) ಆಚರಿಸಲಾಗುತ್ತಿದೆ. ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಕೆ.ಆರ್.ಪುರಂನ ಐಟಿಐ ಗೇಟ್, ಆನಂದ್ ರಾವ್ ಸರ್ಕಲ್ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು, ಸವಾರರು ಪರದಾಡಿದ್ದಾರೆ.
ಹೂಡಿ ಸರ್ಕಲ್ ಹತ್ತಿರ ಅಯ್ಯಪ್ಪ ನಗರ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಅಯ್ಯಪ್ಪ ನಗರದ ಕಡೆಗೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
“ಸಂಚಾರ ಸಲಹೆ ”
ಗಣೇಶ ಹಬ್ಬದ ಪ್ರಯುಕ್ತ ಹೂಡಿ ಸರ್ಕಲ್ ಹತ್ತಿರ ಅಯ್ಯಪ್ಪ ನಗರ ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿರುವ ಕಾರಣ ಅಯ್ಯಪ್ಪ ನಗರದ ಕಡೆಗೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. @acpwfieldtrf@DCPTrEastBCP @blrcitytraffic @CPBlr pic.twitter.com/mq6hYW3vvq— MAHADEVAPURA TRAFFIC BTP (@mahadevapuratrf) September 6, 2024
ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದು ಹಾಗೂ KSRTC ವತಿಯಿಂದ ಹೆಚ್ಚುವರಿಯಾಗಿ ಬಸ್ ಬಿಟ್ಟಿರುವ ಹಿನ್ನೆಲೆ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರ ದಟ್ಟಣೆಯಾಗುವ ಕಾರಣ ಸಾರ್ವಜನಿಕರು ಬದಲಿ ರಸ್ತೆ ಮೂಲಕ ಸಂಚರಿಸುವಂತೆ ಉಪ್ಪಾರಪೇಟೆ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಅದೇ ರೀತಿಯಾಗಿ ವರ್ತೂರು ಗುಂಜೂರು ರಸ್ತೆಯಲ್ಲಿ ಹಬ್ಬ ಹಿನ್ನಲೆ ಶಾಪಿಂಗ್‌ನಿಂದಾಗಿ ನಿಧಾನಗತಿಯ ಸಂಚಾರವಿದ್ದು, ದಯಮಾಡಿ ಸಹಕರಿಸುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: ಗಣೇಶ ಹಬ್ಬ: ಬಸ್ ಟಿಕೆಟ್ ದರ ಸುಲಿಗೆ ಕಡಿವಾಣಕ್ಕೆ ಮುಂದಾದ ಆರ್ಟಿಓ, ರಾಜ್ಯಾದ್ಯಂತ ಇಂದು, ನಾಳೆ ಕಾರ್ಯಾಚರಣೆ
ರಾತ್ರಿಯಾಗುತ್ತಿದ್ದಂತೆ ಕೆಎಸ್ಆರ್ಟಿಸಿಯತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಮ್ಮ ತಮ್ಮ ಊರುಗಳಿಗೆ ಹೋಗಲು ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಟರ್ಮಿನಲ್-1ರಲ್ಲಿ ಜನಜಂಗುಳಿ ಉಂಟಾಗಿದೆ.
ಹುಬ್ಬಳ್ಳಿ, ಬಳ್ಳಾರಿ, ಧಾರವಾಡ, ಗದಗ, ಬೆಳಗಾವಿ, ಹೊಸಪೇಟೆ, ಯಲಬುರ್ಗಾ, ಗಂಗಾವತಿ, ಜಮಖಂಡಿ, ರಾಯಚೂರು, ಬಾಗಲಕೋಟೆ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ವಿವಿಧೆಡೆ ಭಾಗಕ್ಕೆ ಬಸ್ಗಳು ತೆರಳುತ್ತಿವೆ.
ಹಬ್ಬಕ್ಕೆ ಊರಿನ ಕಡೆ ಮುಖ ಮಾಡಿದ ಜನರಿಗೆ ಟಿಕೆಟ್ ದುಬಾರಿಯಿಂದ ಜೇಬಿಗೆ ಕತ್ತರಿ ಬಿದ್ದಿದೆ. ಟಿಕೆಟ್ ದರ ಹೆಚ್ಚಾದರೂ ದೇವರ ಪೂಜೆಗೆಂದು ಜನರು ತೆರಳುತ್ತಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ದುಬಾರಿ ಟಿಕೆಟ್ ದರದ ಬಗ್ಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ನಾರ್ಮಲ್ ದಿನಗಳಲ್ಲಿ ಒಂದು ರೀತಿಯ ಟಿಕೆಟ್ ದರ ಇರುತ್ತೆ, ಹಬ್ಬಗಳ ದಿನದ ವೇಳೆ ದರ ಏರಿಕೆ ಆಗತ್ತೆ. ಮಧ್ಯಮ ವರ್ಗದವರು ಏನು ಮಾಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಗಣೇಶ ಹಬ್ಬ ಪ್ರಯುಕ್ತ NWKRTCಯಿಂದ ಪ್ರಯಾಣಿಕರಿಗೆ ಗಿಫ್ಟ್: ಸೀಟ್ ಬುಕ್ಕಿಂಗ್ನಲ್ಲಿ ರಿಯಾತಿ
ಸರ್ಕಾರ ಮಹಿಳೆಯರಿಗೆ ಮಾತ್ರ ಉಚಿತ ಬಸ್ ಬಿಟ್ಟಿದೆ. ಅಲ್ಲಿ ರಶ್ ಅಂತ ಖಾಸಗಿ ಬಸ್ಗೆ ಬರುತ್ತೇವೆ. ಆದರೆ ಇವರು ಇದನ್ನೇ ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಇರುವ ಹಣಕ್ಕೆ ಡಬಲ್ ಟಿಕೆಟ್ ಮಾಡಿದ್ದಾರೆ. ಟಿಕೆಟ್ ದರ ನೋಡಿ ಬೇಸರವಾಗತ್ತೆ. ಆದರೆ ಊರಿಗೆ ಹೋಗಲೇಬೇಕು. ದೇವರ ಪೂಜೆ ಮಾಡಲೇಬೇಕು ಎನ್ನುತ್ತಿದ್ದಾರೆ ಜನರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:27 pm, Fri, 6 September 24