ಧಾರ್ಮಿಕ ಮತ್ತು ದತ್ತಿ ಮಸೂದೆ ಅಂಗೀಕಾರ: ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣ ಸರ್ಕಾರಕ್ಕೆ
ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆದಾಯದ ಹಣಕ್ಕೆ ಕೈಹಾಕಿದೆ. ಆ ಮೂಲಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆಯನ್ನು ಅಂಗೀಕರಿಸಿದೆ. ಇದು ದೇವಾಲಯದ ಆದಾಯ ಹಂಚಿಕೆಯಲ್ಲಿ ಗಣನೀಯ ಬದಲಾವಣೆಗಳನ್ನು ತಂದಿದೆ. ಕಾಂಗ್ರೆಸ್ ಸರ್ಕಾರ ಮಂಡಿಸಿದ ಈ ಮಸೂದೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರು, ಫೆಬ್ರವರಿ 21: ಶಿಕ್ಷಣದ ವಿಚಾರವಾಗಿ ಸರ್ಕಾರದ ವಿರುದ್ಧ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಸರ್ಕಾರ ಇದೀಗ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆದಾಯದ ಹಣಕ್ಕೆ ಕೈಹಾಕಿದೆ. ಆ ಮೂಲಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆಯನ್ನು ಅಂಗೀಕರಿಸಿದೆ. ಇದು ದೇವಾಲಯದ ಆದಾಯ ಹಂಚಿಕೆಯಲ್ಲಿ ಗಣನೀಯ ಬದಲಾವಣೆಗಳನ್ನು ತಂದಿದೆ. ಕಾಂಗ್ರೆಸ್ ಸರ್ಕಾರ ಮಂಡಿಸಿದ ಈ ಮಸೂದೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಗೆ ದೇವಸ್ಥಾನಗಳು ಕೊಡುತ್ತಿದ್ದ ಆದಾಯದ ಹಣದಲ್ಲಿ ದ್ವಿಗುಣಗೊಳಿಸಿದ ಸರ್ಕಾರ ಇನ್ನು ಮುಂದೆ 10 ಲಕ್ಷದಿಂದ 1 ಕೋಟಿ ರೂ. ಆದಾಯದ ದೇವಸ್ಥಾನಗಳು ಆದಾಯದ ಶೇ.5 ರಷ್ಟು ಹಣ ಸಲ್ಲಿಸಬೇಕು. 1 ಕೋಟಿಗೂ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣ ಸಲ್ಲಿಕೆ ಮಾಡಬೇಕು.
ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ವಿಮೆ ಸೌಕರ್ಯ, ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ರೂ. ಪರಿಹಾರ ಕೊಡಲು ಅವಕಾಶ ಕಲ್ಪಿಸಲಾಗಿದೆ. ಈ ಮುಂಚೆ ಮೃತಪಟ್ಟವರಿಗೆ ಕೇವಲ 35 ಸಾವಿರ ರೂ ಕೊಡಲಾಗುತ್ತಿತ್ತು. ಜೊತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ. ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್ಶಿಪ್ ಕೊಡಲು ಅವಕಾಶ ನೀಡಲಾಗಿದೆ.
ಶ್ರೀ ಘಾಟಿ ಸುಬ್ರಮಣ್ಯ (Ghati Subramanya) ಮತ್ತು ಶ್ರೀ ಹುಲಿಗೆಮ್ಮ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ ಅಂಗೀಕಾರ ಮಾಡಲಾಗಿದೆ.
ಇದನ್ನೂ ಓದಿ: ತಾಯಿ, ನವಜಾತ ಶಿಶುಗಳ ಆರೋಗ್ಯಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಜೊತೆ ಇಸ್ಫೋಸಿಸ್ ಒಪ್ಪಂದ
ರಾಜ್ಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇರುವ 35 ಸಾವಿರ ದೇವಸ್ಥಾನಗಳಿದ್ದು, ಈ ಪೈಕಿ 205 ಎ ಗ್ರೇಡ್, 193 ಬಿ ಗ್ರೇಡ್ ಮತ್ತು 34 ಸಾವಿರ ಸಿ ಗ್ರೇಡ್ ದೇವಸ್ಥಾನಗಳಿವೆ.
ಈ ವರ್ಷ ಚಾಮುಂಡಿ ಬೆಟ್ಟಕ್ಕೆ 45 ಲಕ್ಷ ಪ್ರವಾಸಿಗರು ಭೇಟಿ: 52 ಕೋಟಿ ರೂ. ಆದಾಯ
ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ ಮಾಡಲಾಗಿದ್ದು, ಈ ವರ್ಷ ಚಾಮುಂಡಿ ಬೆಟ್ಟಕ್ಕೆ 45 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದು, 52 ಕೋಟಿ ರೂ. ಆದಾಯ ಬಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ, ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ. ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ವಿಧೇಯಕದಲ್ಲಿ ಮೈಸೂರು ದಸರಾ ಅಭಿವೃದ್ಧಿ ಸಮಿತಿ ಸೇರಿಸಲು ಮನವಿ
ವಿಪಕ್ಷಗಳಿಂದ ವಿಧೇಯಕಕ್ಕೆ ಸ್ವಾಗತ ವ್ಯಕ್ತವಾಗಿದ್ದು, ಈ ವಿಧೇಯಕದಲ್ಲಿ ಮೈಸೂರು ದಸರಾ ಅಭಿವೃದ್ಧಿ ಸಮಿತಿಯನ್ನೂ ಸೇರಿಸಲು ಕೃಷ್ಣರಾಜ ಶಾಸಕ ಶ್ರೀವತ್ಸ ಮನವಿ ಮಾಡಿದೆ. ಶ್ರೀವತ್ಸ ಮನವಿಗೆ ರಾಮಲಿಂಗಾರೆಡ್ಡಿ ಸ್ಪಂದಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಾಧಿಕಾರ ರಚಿಸಲು ಸ್ಪೀಕರ್ ಸಲಹೆ ನೀಡಿದ್ದಾರೆ. ಮುಂದಿನ ಅಧಿವೇಶನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಪ್ರಾಧಿಕಾರಕ್ಕೆ ವಿಧೇಯಕ ತರುವುದಾಗಿ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನಾಡಗೀತೆ ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಿದ ಸರ್ಕಾರ: ವಿಪಕ್ಷಗಳ ಟೀಕೆಗೆ ಸಮರ್ಥನೆ ಮಾಡಿಕೊಳ್ಳಲು ಹೈರಾಣಾದ ಸಚಿವ ತಂಗಡಗಿ
ವಿಧಾನಸಭೆಯಲ್ಲಿ ವೃತ್ತಿಪರ ಸಿವಿಲ್ ಇಂಜಿನಿಯರ್ಗಳ ಬಿಲ್ ಪಾಸ್ ಮಾಡಲಾಗಿದೆ. ವೃತ್ತಿಪರ ಸಿವಿಲ್ ಇಂಜಿನಿಯರ್ಗಳ ಪರಿಷತ್ ಸ್ಥಾಪನೆಗೆ ಅವಕಾಶ ಮಾಡುವ ವಿಧೇಯಕ ಇದಾಗಿದೆ. ಸಿವಿಲ್ ಇಂಜಿನಿಯರ್ ಗಳ ನೋಂದಣಿ ಮತ್ತು ವೃತ್ತಿ ಪ್ರಮಾಣ ಪತ್ರ ನೀಡುವ ಉದ್ದೇಶಕ್ಕೆ ಪರಿಷತ್ ರಚನೆ ಮಾಡಲಾಗಿದೆ.
ಅದೇ ರೀತಿಯಾಗಿ ಪೊಲೀಸ್(ತಿದ್ದುಪಡಿ) ವಿಧೇಯಕ ಅಂಗೀಕಾರವಾಗಿದ್ದು, ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆ ಅವಧಿ ಕನಿಷ್ಠ 2 ವರ್ಷಕ್ಕೆ ನಿಗದಿಗೊಳಿಸಲು ಅವಕಾಶ ಮಾಡಿಕೊಡುವ ಬಿಲ್ ಇದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:51 pm, Wed, 21 February 24