ನಾಡಗೀತೆ ಬಗ್ಗೆ ತಿದ್ದುಪಡಿ ಆದೇಶ ಹೊರಡಿಸಿದ ಸರ್ಕಾರ: ವಿಪಕ್ಷಗಳ ಟೀಕೆಗೆ ಸಮರ್ಥನೆ ಮಾಡಿಕೊಳ್ಳಲು ಹೈರಾಣಾದ ಸಚಿವ ತಂಗಡಗಿ
ಶಾಲೆಗಳು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ನಾಡಗೀತೆ ಹಾಡುವ ವಿಚಾರಕ್ಕೆ ಸಂಬಂಧಿಸಿದ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದೆ. ಆದಾಗ್ಯೂ, ಈ ವಿಚಾರ ವಿಧಾನಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಪ್ರತಿಪಕ್ಷಗಳು ಶಿಕ್ಷಣ ಸಚಿವರು ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದರೆ, ಸುತ್ತೋಲೆಯನ್ನು ಸಮರ್ಥಿಸಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೈರಾಣಾದರು.
ಬೆಂಗಳೂರು, ಫೆಬ್ರವರಿ 21: ಖಾಸಗಿ ಶಾಲೆಗಳಲ್ಲಿ (Private Schools) ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ಹೊರಡಿಸಿದ್ದ ರಾಜ್ಯ ಸರ್ಕಾರ (Karnataka Government) ಇದೀಗ ಆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ತಿದ್ದುಪಡಿ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರಕ್ಕೆ ವಿಧಾನಸಭೆ ಕಲಾಪದಲ್ಲಿಯೂ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪ್ರತಿಪಕ್ಷಗಳ ಟೀಕಾ ಪ್ರಹಾರದ ಮಧ್ಯೆ, ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೈರಾಣಾಗುವಂತಾಯಿತು.
ತಿದ್ದುಪಡಿ ಆದೇಶದಲ್ಲೇನಿದೆ?
ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ತಿದ್ದುಪಡಿ ಆದೇಶದಲ್ಲಿ ಸರ್ಕಾರ ಉಲ್ಲೇಖಿಸಿದೆ.
ಸದನದಲ್ಲಿ ಪ್ರತಿಧ್ವನಿಸಿದ ಆದೇಶ
ಸರ್ಕಾರದ ಹಿಂದಿನ ಆದೇಶಕ್ಕೆ ವಿಪಕ್ಷ ಬಿಜೆಪಿ ಸನದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದೇ ವೇಳೆ ಸ್ಪಷ್ಟೀಕರಣ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುದ್ರಣ ದೋಷದ ಕಾರಣ ನೀಡಿದರು. ಇದನ್ನು ಒಪ್ಪದ ವಿಪಕ್ಷ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಸದನದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿ ನಡೆಯಿತು.
ನಾಡಗೀತೆಯ ಧಾಟಿಯ ಬಗ್ಗೆ ಕೋರ್ಟ್ನಲ್ಲಿ ಕಿಕ್ಕೇರಿ ಕೃಷ್ಣ ಮೂರ್ತಿ ದಾವೆ ಹೂಡಿದ್ದರು. ಅಶ್ವಥ್ ಅವರ ದಾಟಿಯಲ್ಲಿ ಹಾಡಬೇಕು ಎಂದು ಕೇಸ್ ಹಾಕಿದ್ದರು. ಆಗ ‘ಎಲ್ಲಾ ಶಾಲೆಗಳಲ್ಲಿ ಎಂದರೆ ಏನು’ ಎಂದು ಕೋರ್ಟ್ ಕೇಳಿತ್ತು. ಇದರ ಬಗ್ಗೆ ವಿವರಣೆ ನೀಡಲು ಹೋದಾಗ ಪ್ರಿಂಟ್ ಮಿಸ್ಟೇಕ್ ಆಗಿತ್ತು ಎಂದು ತಂಗಡಗಿ ಹೇಳಿದರು.
ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ: ಪ್ರಿಂಟ್ ಮಿಸ್ಟೇಕ್ ಎಂದ ಶಿವರಾಜ್ ತಂಗಡಗಿ
ಇದಕ್ಕೆ ಒಪ್ಪದ ಪ್ರತಿಪಕ್ಷ ಸದಸ್ಯರು, ಶಿಕ್ಷಣ ಸಚಿವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಶಿಕ್ಷಣ ಸಚಿವರು ಕ್ಷಮೆಯಾಚಿಸಲಿ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದರು. ಮತ್ತೊಂದೆಡೆ, ಅದ್ಹೇಗೆ ಪ್ರಿಂಟ್ ಮಿಸ್ಟೇಕ್ ಆಗುತ್ತದೆ ಎಂದ ಶಾಸಕ ಸುರೇಶ್ ಕುಮಾರ್ ಪ್ರಶ್ನಿಸಿದರು. ಸಚಿವರು ಕೋರ್ಟ್ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ನೀವು ಉತ್ತರ ನೀಡಲೇಬೇಕು ಎಂದು ವಿಪಕ್ಷ ಬಿಜೆಪಿ ಶಾಸಕರು ಆಗ್ರಹಿಸಿದರು.
ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿನ್ನು ನಾಡಗೀತೆ ಹಾಡುವುದು ಕಡ್ಡಾಯವಲ್ಲ: ರಾಜ್ಯ ಸರ್ಕಾರದಿಂದ ಆದೇಶ
ಆದೇಶ ಮಾಡುತ್ತೀರಿ, ವಾಪಸ್ ತೆಗೆದುಕೊಳ್ಳುತ್ತೀರಿ. ಏನಿದು ತುಘಲಕ್ ದರ್ಬಾರ್ ನಡೆಸ್ತಿದ್ದೀರಾ ಎಂದು ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವರು ಕ್ಷಮೆ ಕೇಳಬೇಕು, ಇಂಥ ಆದೇಶ ಹೊರಡಿಸಿದ್ದಕ್ಕೆ ಕ್ಷಮೆ ಕೇಳಿ, ತಪ್ಪಾಗಿದೆ ಅಂತ ಒಪ್ಪಿಕೊಳ್ಳಿ ಎಂದು ಅವರು ಆಗ್ರಹಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ