ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದ ಬಳಿಕ ನಟಿ ರನ್ಯಾ ರಾವ್ಗೆ ಜಾಮೀನು
Ranya Rao Bail: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ಗೆ ಜಾಮೀನು ಮಂಜೂರಾಗಿದೆ. ಆ ಮೂಲಕ ಕನ್ನಡದ ನಟಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದ್ದು, ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಬೆಂಗಳೂರು, ಏಪ್ರಿಲ್ 22: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (gold smuggling case) ಬಂಧನಕೊಳಗಾಗಿದ್ದ ನಟಿ ರನ್ಯಾ ರಾವ್ಗೆ (Ranya Rao) ಜಾಮೀನು ಲಭಿಸಿದೆ. ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬುಧವಾರ ಆದೇಶ ಹೊರಡಿಸಿದೆ. ಆ ಮೂಲಕ ರನ್ಯಾ ರಾವ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಒಂದು ವರ್ಷ ಜೈಲು ವಾಸದ ಬಳಿಕ ಇದೀಗ ಜಾಮೀನು ಸಿಕ್ಕಿದ್ದು, ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಆಗಲಿದ್ದಾರೆ.
ಚಿನ್ನ ಕಳ್ಳಸಾಗಣೆ ಮಾಡಿದ್ದ ಆರೋಪದಲ್ಲಿ ರನ್ಯಾ ರಾವ್ ಕಳೆದ 1 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದರು. ಈ ಹಿಂದೆ ಕೋರ್ಟ್ನಿಂದ ರನ್ಯಾರಾವ್ಗೆ ಜಾಮೀನು ಸಿಕ್ಕಿತ್ತು. ಆದರೆ ಕಾಫಿಪೋಸಾ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದರು. ಇಂದಿಗೆ ಒಂದು ವರ್ಷ ಆದ ಹಿನ್ನೆಲೆ ಜೈಲಿನಿಂದ ಬಿಡುಗಡೆ ಆಗುತ್ತಿದ್ದಾರೆ. ಇನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಮತ್ತು ಕಳ್ಳಸಾಗಣೆ ತಡೆ ಕಾಯ್ದೆ ಅಡಿ ರನ್ಯಾ ರಾವ್ ವಿರುದ್ಧ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ(ಸಿಇಐಬಿ) ಹೊರಡಿಸಿದ್ದ ಬಂಧನ ಆದೇಶವನ್ನು ಎತ್ತಿಹಿಡಿದಿತ್ತು.
ಒಂದು ವರ್ಷದ ಬಳಿಕ ರನ್ಯಾ ರಾವ್ ರಿಲೀಸ್
102 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ 2025 ಮಾರ್ಚ್ 3ರಂದು ನಟಿ ರನ್ಯಾ ರಾವ್ ಡಿಆರ್‌ಐ ಕೈಯಲ್ಲಿ ಲಾಕ್ ಆಗಿದ್ದರು. ಬಳಿಕ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ ಕಾಫಿಪೋಸಾ ಕಾಯ್ದೆ ಸೆಕ್ಷನ್ 3(1) ಅಡಿ ಬಂಧನದ ಆದೇಶ ಹೊರಡಿಸಿತ್ತು. ಹೀಗಾಗಿ ರನ್ಯಾ ರಾವ್ಗೆ ಒಂದು ವರ್ಷ ಜಾಮೀನು ಸಿಕ್ಕಿರಲಿಲ್ಲ.
ಇದನ್ನೂ ಓದಿ: ದುಬೈನಿಂದ ಆಫ್ರಿಕಾವರೆಗೆ: ನಟಿ ರನ್ಯಾ ರಾವ್ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಬಯಲಿಗೆ
ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ರನ್ಯಾ ರಾವ್ ಕೆಲವು ಬ್ಯುಸಿನೆಸ್ ಮಾಡಿಕೊಂಡಿದ್ದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಾಸವಿದ್ದ ರನ್ಯಾ ರಾವ್, ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಮಲ ಮಗಳು. ಆಗಾಗ ಬ್ಯುಸಿನೆಸ್ ನೆಪ ಒಡ್ಡಿ ದುಬೈಗೆ ಹೋಗುತ್ತಿದ್ದ ರನ್ಯಾ ಮೇಲೆ ಕಸ್ಟಮ್ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಹೀಗಾಗಿ ಆಕೆಯ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದರು. 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳದಿದ್ದ ರನ್ಯಾ ರಾವ್ ಅನ್ನು ಡಿಆರ್‌ಐ ಅಧಿಕಾರಿಗಳು ತಪಾಸಣೆ ಮಾಡಿದ್ದರು. ಈ ವೇಳೆ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ನಂತರ ಅವರನ್ನು ಬಂಧಿಸಲಾಗಿತ್ತು. ಬಳಿಕ ಒಂದೊಂದೇ ಹಗರಣಗಳು ಬಯಲಾಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:32 pm, Wed, 22 April 26



