
ಬೆಂಗಳೂರು, (ಸೆಪ್ಟೆಂಬರ್ 16): ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಬೆಸ್ಕಾಂ ಶಾಕ್ ಕೊಟ್ಟಿದೆ. ಝೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಇದೀಗ ಸಾವಿರಾರು ರೂಪಾಯಿ ಕರೆಂಟ್ ಬಿಲ್ ಬಂದಿದೆ. ಕಳೆದ ಎರಡು ವರ್ಷಗಳ ಕಾಲ ಫಲಾನುಭವಿಗಳ ಮನೆಗಳಿಗೆ ಜಿರೋ ಜಿರೋ ಬಿಲ್ ಬರುತ್ತಿತ್ತು. ಆದ್ರೆ, ಇದೀಗ ರಾಜ್ಯ ಸರ್ಕಾರ ಪರಿಸ್ಕರಣೆ ಮಾಡಿದ ಬಳಿಕ ಜೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ. ಹೌದು..ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮಖಾನ್ ಕಾಂಪೌಂಡ್ ಏರಿಯಾದಲ್ಲಿ ಈ ಸಮಸ್ಯೆ ಎದುರಾಗಿದ್ದು, ಜನರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಜಾರಿಗೆ ಬಂದು 3 ವರ್ಷಗಳಾಗಿದೆ. ಪ್ರತಿ ಅರ್ಹ ಮನೆಗೂ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಕೊಡೋದು ಯೋಜನೆಯ ಉದ್ದೇಶ. ಆದರೆ ಸಾಕಷ್ಟು ಕಡೆಗಳಲ್ಲಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಜೀರೋ ಬರ್ತಾ ಇಲ್ಲ. ಶಿವಾಜಿನಗರ ಬಳಿಯ ಭಾರತಿ ವಾರ್ಡ್ನ ಮಕಾನ್ ಕಾಂಪೌಂಡ್ ಕಾಲೋನಿಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ದುಬಾರಿ ಬಿಲ್ ಬರ್ತಾ ಇದೆ.ಒಂದೆರೆಡು ತಿಂಗಳ ಹಿಂದೆ ಇದೇ ಕಾಲೋನಿಯ ಹಲವು ಮನೆಗಳಿಗೆ ಜೀರೋ ಬಿಲ್ ಬದಲು, 1,2,3 ರಿಂದ 5 ಸಾವಿರದವರೆಗೂ ಬಿಲ್ ಕೊಡಲಾಗಿದೆ.
ಇನ್ನು ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಸಮಸ್ಯೆ ಸಂಪೂರ್ಣವಾಗಿ ಸರಿಹೋಗಿಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ. ಇನ್ನು ಬೆಸ್ಕಾಂ ಸಿಬ್ಬಂದಿ ಪ್ರಕಾರ, ಮೀಟರ್ ರೀಡರ್ಗಳು ಎಸ್ಐಆರ್ ಪ್ರಕ್ರಿಯೆ ಹಾಗೂ ಗೃಹ ಜ್ಯೋತಿ ಮರುಪರಿಶೀಲನಾ ಕಾರ್ಯದಲ್ಲಿ ನಿರತರಾಗಿರುವುದರಿಂದ ಕೆಲವು ಕಡೆ ತಾಂತ್ರಿಕ ಸಮಸ್ಯೆಯಾಗಿದೆಯಂತೆ.
ಒಟ್ಟಾರೆ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಕಡೆಗಳಲ್ಲಿ ಗೃಹ ಜ್ಯೋತಿಯ ಪ್ರಕಾರ ಶೂನ್ಯ ಬಿಲ್ ಬರ್ತಾ ಇಲ್ಲ ಎಂಬ ಆರೋಪ ಇದೆ. ಏನೇ ಇದ್ದರೂ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗೃಹ ಜ್ಯೋತಿಯ ಆಸರೆ ಕೈತಪ್ಪದಿರಲಿ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ