ಗೃಹಲಕ್ಷ್ಮಿ ಹಣ ಡೈವರ್ಟ್ ಆರೋಪ: 2,600 ಕೋಟಿ ರೂ. ಎಲ್ಲಿಗೆ ಹೋಯಿತು? ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಫಲಾನುಭವಿಗಳಿಗೆ ನೀಡದೆ ಸುಮಾರು 2,600 ಕೋಟಿ ರೂ. ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಹಣವನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಿರುವ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹಲಕ್ಷ್ಮಿ ಹಣ ಡೈವರ್ಟ್ ಆರೋಪ: 2,600 ಕೋಟಿ ರೂ. ಎಲ್ಲಿಗೆ ಹೋಯಿತು? ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ನಿಖಿಲ್ ಕುಮಾರಸ್ವಾಮಿ
Edited By:

Updated on: Nov 04, 2026 | 11:44 AM

ಮುಖ್ಯಾಂಶಗಳು

  • ಗೃಹಲಕ್ಷ್ಮಿ ಹಣ ಡೈವರ್ಟ್ ಆರೋಪ ಮಾಡಿದ ನಿಖಿಲ್
  • 2,600 ಕೋಟಿ ರೂ. ವರ್ಗಾವಣೆ ಬಗ್ಗೆ ಪ್ರಶ್ನೆ
  • ಹಣದ ಬಳಕೆ ಕುರಿತು ಸರ್ಕಾರ ಸ್ಪಷ್ಟನೆಗೆ ಆಗ್ರಹ

ಬೆಂಗಳೂರು, ನವೆಂಬರ್ 4: ಮನೆ ಯಜಮಾನಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡದ ಸರ್ಕಾರ, ಸುಮಾರು 2,600 ಕೋಟಿ ರೂಪಾಯಿಯನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಗೃಹಲಕ್ಷ್ಮಿ ಯೋಜನೆಯ ಹಣದ ಲಭ್ಯತೆ ಮತ್ತು ವರ್ಗಾವಣೆ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಎರಡು ತಿಂಗಳ ಹಣ ಬಿಡುಗಡೆ ಮಾಡದ ಆರೋಪ

ಗೃಹಲಕ್ಷ್ಮಿ ಯೋಜನೆಯಲ್ಲಿ 2023ರಲ್ಲಿ ಸುಮಾರು 1 ಕೋಟಿ 27 ಲಕ್ಷ ಮಹಿಳೆಯರು ಫಲಾನುಭವಿಗಳಾಗಿದ್ದು, ಪ್ರತಿ ತಿಂಗಳು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ 2,000 ರೂ. ನೀಡುವುದಾಗಿ ಸರ್ಕಾರ ಘೋಷಿಸಿತ್ತು. 2023ರಲ್ಲಿ ಎಂಟು ತಿಂಗಳ ಕಾಲ ಹಣ ನೀಡಲಾಗಿತ್ತು. ಆದರೆ, 2024-25ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ನಿಖಿಲ್ ಆರೋಪಿಸಿದರು.

ಈ ಕುರಿತು ಕೆಲವು ಮಹಿಳೆಯರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಗೆ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿಲ್ಲ ಎಂದು ತಿಳಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಆ ಎರಡು ತಿಂಗಳ ಹಣಕ್ಕೆ ಲಭ್ಯತೆ ಇರಲಿಲ್ಲ ಹಾಗೂ ಆರ್ಥಿಕ ಹೊರೆಯ ಕಾರಣದಿಂದ ಹಣ ಬಿಡುಗಡೆ ಮಾಡಿಲ್ಲ ಎಂಬ ಅಂಶವನ್ನು ಸರ್ಕಾರ ನ್ಯಾಯಾಲಯದ ಮುಂದೆ ತಿಳಿಸಿದೆ ಎಂದು ಅವರು ಹೇಳಿದರು. ಸರ್ಕಾರದ ಈ ನಿಲುವು ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ನಿಖಿಲ್ ಟೀಕಿಸಿದರು.

2,600 ಕೋಟಿ ರೂ. ವರ್ಗಾವಣೆ ಆರೋಪ

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬೇರೆ ಉದ್ದೇಶಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. 2025ರ ಮಾರ್ಚ್ 31ರಂದು ಸುಮಾರು 2,600 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು. ಈ ಪೈಕಿ 1,111 ಕೋಟಿ ರೂ. ಆನೇಕಲ್ ತಾಲೂಕು ಪಂಚಾಯಿತಿಯಲ್ಲಿ ಇರಿಸಲಾಗಿತ್ತು ಎಂದು ಆರೋಪಿಸಿದ ನಿಖಿಲ್, ಉಳಿದ ಹಣದಲ್ಲಿ 900 ಕೋಟಿ ರೂ.ಗೂ ಹೆಚ್ಚು ಹಣವನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಬಳಿಕ ಪಂಚಾಯಿತಿಯಲ್ಲಿದ್ದ ಹಣವೂ ಮಹಿಳಾ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆಗೊಂಡಿದ್ದು, ಒಟ್ಟಾರೆ ಸುಮಾರು 2,600 ಕೋಟಿ ರೂ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಹಣ ಮಹಿಳಾ ಅಭಿವೃದ್ಧಿ ನಿಗಮಕ್ಕೆ ಹೋಗಿದೆ ಎಂದು ಅವರು ಆರೋಪಿಸಿದರು.

ಹಣದ ಬಳಕೆ ಬಗ್ಗೆ ಸರ್ಕಾರ ಉತ್ತರಿಸಲಿ: ನಿಖಿಲ್ ಆಗ್ರಹ

ಗೃಹಲಕ್ಷ್ಮಿ ಯೋಜನೆಗೆ ಮೀಸಲಾಗಿದ್ದ ಎಂದು ಹೇಳಲಾಗುತ್ತಿರುವ ಹಣವನ್ನು ಏಕೆ ವರ್ಗಾವಣೆ ಮಾಡಲಾಯಿತು ಮತ್ತು ನಂತರ ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಹೇಳಿದ್ದರೆ, ಮತ್ತೊಂದೆಡೆ ಆರ್ಥಿಕ ಇಲಾಖೆಯ ಮೂಲಕ ಹಣಕಾಸಿನ ಕೊರತೆಯ ವಿಚಾರ ಬಹಿರಂಗವಾಗಿದೆ ಎಂದು ಅವರು ಆರೋಪಿಸಿದರು. ಗೃಹಲಕ್ಷ್ಮಿ ಯೋಜನೆಯ ಹಣದ ವರ್ಗಾವಣೆ ಹಾಗೂ ಅದರ ಬಳಕೆಯ ಕುರಿತು ಸರ್ಕಾರ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us