ಹಾಸನ: ಒಂದೇ ವರ್ಷದಲ್ಲಿ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ದೂರ
ಹಾಸನ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಶಿಥಿಲವಾದ ಕಟ್ಟಡಗಳು, ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿವೆ. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಒಂದೇ ವರ್ಷದಲ್ಲಿ 7 ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ದೂರವಾಗಿದ್ದಾರೆ. ಹೀಗಾಗಿ, ಸರ್ಕಾರ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ.

ಹಾಸನ, ಮಾರ್ಚ್ 02: ಹಾಸನ (Hassan) ಜಿಲ್ಲೆಯ ಸರ್ಕಾರಿ ಶಾಲೆಗಳ (Government School) ಸ್ಥಿತಿ ಹೇಳತೀರದು. ಅನುದಾನ ಕೊರತೆಯಿಂದ ಸರ್ಕಾರಿ ಶಾಲೆಗಳು ಅದೋ ಗತಿಗೆ ತಲುಪುತ್ತಿವೆ. ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಒಂದೇ ವರ್ಷದಲ್ಲಿ 7ಸಾವಿರ ಮಕ್ಕಳು ಸರ್ಕಾರಿ ಶಾಲೆಯಿಂದ ದೂರವಾದರೇ, 500ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ.
ಹಾಸನ ಜಿಲ್ಲೆಯಲ್ಲಿ 1249 ಕಿರಿಯ ಪ್ರಾಥಮಿಕ ಶಾಲೆ, 969 ಹಿರಿಯ ಪ್ರಾಥಮಿಕ ಶಾಲೆ ಹಾಗೂ 241 ಪ್ರೌಡ ಶಾಲೆ ಸೇರಿ ಒಟ್ಟು 2249 ಸರ್ಕಾರಿ ಶಾಲೆಗಳಿವೆ. ಇವುಗಳ ಪೈಕಿ 579 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇದ್ದರೇ, 681 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. 2023-24ನೇ ಸಾಲಿನಲ್ಲಿ 86,231 ಮಕ್ಕಳು ಕಲಿಯುತ್ತಿದ್ದರು. 2024-25ನೇ ಸಾಲಿನಲ್ಲಿ ಅದು 79,283ಕ್ಕೆ ಕುಸಿದಿದ್ದು. ಒಂದೇ ವರ್ಷದಲ್ಲಿ 6,948 ಮಕ್ಕಳು ಸರ್ಕಾರಿ ಶಾಲೆಯಿಂದ ದೂರವಾಗಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲಾ ಕೆಡಿಪಿ ಸಭೆಯಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ದುಸ್ಥಿತಿಯಲ್ಲಿವೆ. ಹೀಗಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಭಯಪಡುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ, ಶಾಲೆಗಳು ಮುಚ್ಚಿದ್ರೆ ಸಮಸ್ಯೆ ಆಗಲಿದೆ. ಹೀಗಾಗಿ, ಶೌಚಾಲಯ, ಕುಡಿಯುವ ನೀರು ಮತ್ತು ಕಟ್ಟಡ ಸೇರಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿನ ಶಾಲೆಗಳ ಅವಸ್ಥೆ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಸಿಇಓ ನೇತೃತ್ವದ ಸಮಿತಿ ರಚಿಸಿ ಶೀಘ್ರವಾಗಿ ವರದಿ ನೀಡುವಂತೆ ಹೇಳಿದರು.
ಇಂಗ್ಲಿಷ್ ಮಾಧ್ಯಮದ ಮೇಲಿನ ಒಲವು, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳಿಲ್ಲದ ಕಾರಣ, ಖಾಸಗಿ ಶಾಲೆಗಳ ಕಲರ್ ಫುಲ್ ಪ್ರಚಾರದ ನಡುವೆ ಸರ್ಕಾರಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಶಾಲೆಗಳಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶಾಲಾ ಕಟ್ಡಡ ಕುಸಿದು ಬೀಳುವ ಹಂತಕ್ಕೆ ತಲುಪಿವೆ.
ಕಳೆದ ಮೂರು ವರ್ಷಗಳಲ್ಲಿ 35 ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಶಿಕ್ಷಣ ಇಲಾಖೆಯ ಶತ ಪ್ರಯತ್ನದಿಂದ 21 ಶಾಲೆಗಳು ಮರು ಪ್ರಾರಂಭವಾದರೂ ಈ ವರ್ಷ ಮತ್ತಷ್ಟು ಶಾಲೆಗಳನ್ನು ಸಂಯೋಜನೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ. ಅರಸೀಕೆರೆ ತಾಲೂಕು ಒಂದರಲ್ಲೇ 250 ಶಾಲಾ ಕಟ್ಟಡಗಳು ಸಂಪೂರ್ಣ ಶಿಥಿಲವಾಗಿವೆ. ಬಸವನಹಳ್ಳಿ ಗ್ರಾಮದ ಶಾಲಾ ಕೊಠಡಿ, ಅಡುಗೆ ಮನೆ ಶಿಥಿಲವಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಸರ್ಕಾರಿ ಶಾಲೆಗೆ 2.18 ಕೋಟಿ ರೂ. ದೇಣಿಗೆ ನೀಡಿದ ಕಾಫಿ ಉದ್ಯಮಿ!
“ದುರಸ್ಥಿ ಮಾಡಿದರೆ ಪ್ರಯೋಜನವಿಲ್ಲ. ಹೊಸ ಕಟ್ಟಡ ಕಟ್ಟಬೇಕು. ಪರಿಸ್ಥಿತಿ ಹೀಗಾದರೇ ಸರ್ಕಾರಿ ಶಾಲೆ ಉಳಿಯೋದು ಹೇಗೆ?. ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ಸಿ ಶಾಲೆ ತೆರೆಯಬೇಕು. ಅಲ್ಲಿ ಎಲ್ಕೆಜಿಯಿಂದ ಪಿಯುಸಿವರೆಗೆ ಇಂಗ್ಲೀಷ್ ಮಾಧ್ಯಮ ಒಳಗೊಂಡ ಶಿಕ್ಷಣ ನೀಡಿ, ಎಲ್ಲ ಸೌಲಭ್ಯ ನೀಡಬೇಕು. ಹಳ್ಳಿಗಳಿಗೆ ಬಸ್ ವ್ಯವಸ್ಥೆಯನ್ನು ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು” ಎಂದು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:02 am, Sun, 2 March 25







