ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್: ಶಿರಾಡಿಘಾಟ್ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ಸಂಚಾರ

ಹಾಸನ ಜಿಲ್ಲೆಯ ಸಕಲೇಶಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯ ನಡುವಿನ ಶಿರಾಡಿಘಾಟ್ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. 20 ಬೋಗಿಗಳ ಈ ಅತ್ಯಾಧುನಿಕ ರೈಲು ಶೀಘ್ರದಲ್ಲೇ ಬೆಂಗಳೂರು-ಮಂಗಳೂರು ನಡುವೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದ್ದು, ಪ್ರಯಾಣಿಕರಿಗೆ ವೇಗದ ಹಾಗೂ ಐಷಾರಾಮಿ ಪ್ರಯಾಣದ ಅನುಭವ ನೀಡಲಿದೆ.

ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್: ಶಿರಾಡಿಘಾಟ್ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ಸಂಚಾರ
ಹಾಸನ ಜಿಲ್ಲೆಗೆ ಬಂತು ವಂದೇ ಭಾರತ್ ಎಕ್ಸ್‌ಪ್ರೆಸ್
Edited By:

Updated on: Aug 12, 2026 | 1:14 PM

ಮುಖ್ಯಾಂಶಗಳು

  • ಶಿರಾಡಿಘಾಟ್‌ನಲ್ಲಿ ವಂದೇ ಭಾರತ್ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
  • ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ರೈಲು ಟ್ರಯಲ್ ರನ್ ನಡೆದಿದೆ.
  • ಶೀಘ್ರದಲ್ಲೇ ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಸಂಚಾರ ಆರಂಭ.

ಹಾಸನ, ಆಗಸ್ಟ್ 12: ಜಿಲ್ಲೆಯ ಜನರ ಬಹುದಿನಗಳ ಕನಸು ಕೊನೆಗೂ ನನಸಾಗುವತ್ತ ಹೆಜ್ಜೆ ಇಟ್ಟಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ ಸಂಚಾರವು (ಟ್ರಯಲ್ ರನ್) ಹಾಸನ ಜಿಲ್ಲೆಯ ಸಕಲೇಶಪುರ ನಿಲ್ದಾಣದಿಂದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಯಶಸ್ವಿಯಾಗಿ ಆರಂಭಗೊಂಡಿದೆ. ಅತ್ಯಂತ ಕಠಿಣ ಹಾಗೂ ತಿರುವುಗಳಿಂದ ಕೂಡಿದ ಶಿರಾಡಿಘಾಟ್ ಮಾರ್ಗದಲ್ಲಿ ಈ ರೈಲು ಸಂಚರಿಸುವ ಮೂಲಕ ಇತಿಹಾಸ ಬರೆದಿದೆ.

ಟ್ರಯಲ್ ರನ್ ಪ್ರಕ್ರಿಯೆ ಚಾಲನೆಯಲ್ಲಿ

ಸಕಲೇಶಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ್ ರೈಲಿಗೆ ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜು ಅವರು ವಿಶೇಷ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಭಾಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಶಾಸಕರು ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ನಿರಂತರವಾಗಿ ಮನವಿ ಸಲ್ಲಿಸಿದ್ದರು. ಅದಕ್ಕೆ ಪೂರಕವಾಗಿ ಸಕಲೇಶಪುರ ಮಾರ್ಗದವರೆಗಿನ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಈಗ ಟ್ರಯಲ್ ರನ್ ಪ್ರಕ್ರಿಯೆ ಚಾಲನೆಯಲ್ಲಿದೆ.

ಈ ವಿಶೇಷ ವಂದೇ ಭಾರತ್ ರೈಲು 20 ಬೋಗಿಗಳನ್ನು ಹೊಂದಿದ್ದು, ಏಕಕಾಲಕ್ಕೆ 1,080 ಪ್ರಯಾಣಿಕರು ಅತ್ಯಂತ ಸುಖಕರವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಘಾಟ್ ಪ್ರದೇಶದ ಕಡಿದಾದ ಇಳಿಜಾರಿನಲ್ಲಿ ಸುರಕ್ಷಿತವಾಗಿ ಚಲಿಸಲು ಈ ರೈಲಿನಲ್ಲಿ ಅತ್ಯಾಧುನಿಕ ‘ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್’ (AEB) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಐಷಾರಾಮಿ ಸಾರಿಗೆ ವ್ಯವಸ್ಥೆ

ಬೆಂಗಳೂರು ಹಾಗೂ ಕರಾವಳಿ ಭಾಗದ ಪ್ರಯಾಣಿಕರಿಗೆ ಇನ್ನು ಮುಂದೆ ಅತ್ಯಂತ ವೇಗದ ಮತ್ತು ಐಷಾರಾಮಿ ಸಾರಿಗೆ ವ್ಯವಸ್ಥೆ ಸಿಗಲಿದೆ. ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬೆನ್ನಲ್ಲೇ, ಶೀಘ್ರದಲ್ಲೇ ಈ ರೈಲು ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಸಾಧ್ಯತೆ ಇದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ನಿಯಮಿತವಾಗಿ ಸಂಚಾರ ಆರಂಭಿಸಲಿ ಎಂಬುದು ಹಾಸನ ಹಾಗೂ ಕರಾವಳಿ ಜಿಲ್ಲೆಗಳ ಪ್ರಯಾಣಿಕರ ತೀವ್ರ ಆಶಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us