ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು

ಹಾಸನದ ಅರಸೀಕೆರೆಯಲ್ಲಿ ಕೆರೆಗೆ ಕಾಲುಜಾರಿ ಬಿದ್ದ ಸೋದರಳಿಯನ ರಕ್ಷಣೆಗೆ ಹೋಗಿ ಮಾವನೂ ಮೃತಪಟ್ಟ ದಾರುಣ ಘಟನೆ ನಡೆದಿದೆ. ಇದಲ್ಲದೆ, ಪಿರಿಯಾಪಟ್ಟಣದಲ್ಲಿ ಕಾವೇರಿ ನದಿಗೆ ಈಜಲು ಹೋಗಿದ್ದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆಯಷ್ಟೇ ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವ ಘಟನೆ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿತ್ತು ಎನ್ನುವುದಿಲ್ಲಿ ಗಮನಾರ್ಹ.

ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆಗೆ ಹೋದ ಮಾವನೂ ಸಾವು: ಅತ್ತ ಪಿರಿಯಾಪಟ್ಟಣದಲ್ಲಿ ಇಬ್ಬರು ಯುವಕರು ನೀರು ಪಾಲು
ಕಾಲು ಜಾರಿ ಕೆರೆಗೆ ಬಿದ್ದ ಅಳಿಯನ ರಕ್ಷಣೆ ಗೆ ಹೋದ ಮಾವನೂ ಸಾವು
Image Credit source: Tv9 Kannada
Edited By:

Updated on: Apr 20, 2026 | 9:41 AM

ಹಾಸನ/ಮೈಸೂರು, ಏಪ್ರಿಲ್​​ 20: ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆ ಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರಭಾಕರ್ (45), ಪ್ರತೀಕ್ (12) ಮೃತ ದುರ್ದೈವಿಗಳು. ಮೂಲತಃ ದುದ್ದ ಹೋಬಳಿ ಸೋಮನಹಳ್ಳಿ ಗ್ರಾಮದ ಪ್ರತೀಕ್ ಬೇಸಿಗೆ ರಜೆ ಹಿನ್ನಲೆ ಮಾವ ಪ್ರಭಾಕರ್ ಮನೆಗೆ ಬಂದಿದ್ದ. ಕೆರೆಯ ಏರಿ ಮೇಲೆ ಮಾವ ಮತ್ತು ಅಳಿಯ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಪ್ರತೀಕ್ ಬಿದ್ದಿದ್ದಾನೆ. ಆತನ ರಕ್ಷಿಸಿಲು ಕೆರೆಗೆ ಇಳಿದ ಪ್ರಭಾಕರ್, ಈಜು ಬಾರದ ಕಾರಣ ಅಳಿಯನ ಜೊತೆಗೇ ಜಲ ಸಮಾಧಿ ಆಗಿದ್ದಾರೆ. ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿದೆ. ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟವರಾಗಿದ್ದಾರೆ. ಪಟ್ಟಣದಲ್ಲಿ ಟೈಲ್ಸ್‌ ಮತ್ತು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಗಣೇಶ್‌ ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಇಮ್ರಾನ್‌ ಶವಕ್ಕಾಗಿ ಶೋಧ ಮುಂದುವರಿದಿದೆ. ಈ ಸಂಬಧ ಬೈಲಕುಪ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು; ಬದುಕು ದುರಂತ ಅಂತ್ಯ

ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ದುರ್ಮರಣ ಹೊಂದಿರುವ ಘಟನೆ ನಿನ್ನೆಯಷ್ಟೇ K.R.ನಗರದ ಅರ್ಕೇಶ್ವರ ದೇಗುಲದ ಬಳಿ ನಡೆದಿತ್ತು. ಉರೂಸ್​ ಹಿನ್ನೆಲೆ ದರ್ಗಾಕ್ಕೆ ಬಂದಿದ್ದ 8 ಜನರ ತಂಡ ನದಿಗೆ ಈಜಲು ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು.ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಉಳಿದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ನೀರಲ್ಲಿ ಮುಳುಗಿ ಮತ್ತೆ ನಾಲ್ವರು ಪ್ರಾಣ ಬಿಟ್ಟಿರುವ ಘಟನೆ ರಾಜ್ಯದಲ್ಲಿ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:41 am, Mon, 20 April 26

Follow Us