10 ಜನರ ಬಲಿಪಡೆದಿದ್ದ ಹಾಸನ ಗಣೇಶೋತ್ಸವ ದುರಂತಕ್ಕೆ ಒಂದು ವರ್ಷ: ಅನುಮೋದನೆ ಸಿಕ್ಕರೂ ಶುರುವಾಗದ ಮೇಲ್ಸೇತುವೆ ಕಾಮಗಾರಿ!

Hassan Ganeshotsava tragedy: ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದರು. ಈ ದುರಂತ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಸೆಪ್ಟೆಂಬರ್​​ 12ಕ್ಕೆ ಈ ದುರ್ಘಟನೆ ಸಂಭವಿಸಿ ಒಂದು ವರ್ಷವಾಗುತ್ತದೆ. ಹೀಗಿರುವಾಗ ಫ್ಲೈ ಓವರ್ ನಿರ್ಮಾಣದ ಬೇಡಿಕೆ ಇನ್ನೂ ಈಡೇರಿಲ್ಲ, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

10 ಜನರ ಬಲಿಪಡೆದಿದ್ದ ಹಾಸನ ಗಣೇಶೋತ್ಸವ ದುರಂತಕ್ಕೆ ಒಂದು ವರ್ಷ: ಅನುಮೋದನೆ ಸಿಕ್ಕರೂ ಶುರುವಾಗದ ಮೇಲ್ಸೇತುವೆ ಕಾಮಗಾರಿ!
ಹಾಸನ ಗಣೇಶೋತ್ಸವ ದುರಂತ
Image Credit source: tv9 kannada
Edited By:

Updated on: Aug 19, 2026 | 7:31 PM

ಹಾಸನ, ಆಗಸ್ಟ್​ 19: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಸನ (hassan) ತಾಲೂಕಿನ ಮೊಸಳೆಹೊಸಳ್ಳಿ ಗಣೇಶೋತ್ಸವ ಮೆರವಣಿಗೆಯ ಭೀಕರ ರಸ್ತೆ ದುರಂತ (accident) ನಡೆದು ಬರೋಬ್ಬರಿ ಒಂದು ವರ್ಷ ಕಳೆಯುತ್ತಾ ಬಂದಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ, ವಿದ್ಯಾರ್ಥಿಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈ ಓವರ್ ಆಗಬೇಕು ಎನ್ನುವುದು ಇಲ್ಲಿನ ಜನರ ಆಗ್ರಹ ಮಾತ್ರ ಇನ್ನೂ ಈಡೇರಿಲ್ಲ. ಮಕ್ಕಳನ್ನು ಕಳೆದುಕೊಂಡವರ ದುಖಃ ಮರೆಯಾಗಿಲ್ಲ, ಅಲ್ಪ ಪ್ರಮಾಣದ ಪರಿಹಾರ ನೀಡಿ ಕೈತೊಳೆದುಕೊಂಡ ಜಿಲ್ಲಾಡಳಿತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗದಿರುವುದು ಜನರ ಆಕ್ರೊಶಕ್ಕೆ ಕಾರಣವಾಗಿದೆ.

ಸಂಭ್ರಮದ ಕ್ಷಣದಲ್ಲೇ ಎರಗಿದ್ದ ಕರಾಳ ಸಾವು

2025ರ ಸೆಪ್ಟೆಂಬರ್ 12ರ ಶುಕ್ರವಾರ ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸುತ್ತಮುತ್ತಲ ಹತ್ತಾರು ಹಳ್ಳಿಗಳ ಸಹಸ್ರಾರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆಯಿಂದ ಹುಚ್ಚೆದ್ದು ಕುಣಿದು ಇನ್ನೇನು ರಾತ್ರಿ 8-30ರಲ್ಲಿ ಮೆರವಣಿಗೆ ಮುಗಿಯುವ ಹಂತದಲ್ಲಿತ್ತು. ಆರ್ಕೆಸ್ಟ್ರ ನೋಡಲು ಜನರು ಜಮಾಯಿಸಿದ್ದರು.

ಇದನ್ನೂ ಓದಿ: ಹಾಸನ: ಗಣೇಶ ಮೆರವಣಿಗೆ ವೇಳೆ ನಡೆದ ಟ್ರಕ್​ ದುರಂತಕ್ಕೆ ಇದುವೇ ಕಾರಣ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಹಾಸನದದಿಂದ ಹೊಳೆನರಸೀಪುರದ ಕಡೆಗೆ ಬರುತ್ತಿದ್ದ ಲಾರಿ, ಚಾಲಕನ ಅಜಾಗರೂಕತೆಯಿಂದ ರಸ್ತೆಯ ಒಂದು ಪಥದಿಂದ ಮತ್ತೊಂದು ಪಥಕ್ಕೆ ಡಿವೈಡರ್ ಮುರಿದುಕೊಂಡು ನುಗ್ಗಿತ್ತು. ನೋಡನೋಡುತ್ತಿದ್ದಂತೆ ಸ್ಥಳದಲ್ಲಿಯೇ ಏಳು ಜನರು ಸಾವನ್ನಪ್ಪಿದ್ದರು. ಆಸ್ಪತ್ರೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಘಟನೆ ನಡೆದ ಬಳಿಕ ಕೆಲ ತಾತ್ಕಾಲಿಕ ಕ್ರಮಕೈಗೊಂಡಿದ್ದ ಆಡಳಿತ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ ಎನ್ನುವುದು ಜನರ ಆಕ್ರೋಶ.

ಫ್ಲೈ ಓವರ್ ನಿರ್ಮಾಣಕ್ಕೆ ಜನರು ಆಗ್ರಹ

ಇಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​​ ಪಾಲಿಟೆಕ್ನಿಕ್, ಐಟಿಐ, ಪದವಿ, ಸ್ನಾತಕೋತ್ತರ ಕಾಲೇಜ್​​ ಸೇರಿ ಸಹಸ್ರಾರು ವಿದ್ಯಾರ್ಥಿಗಳು ಬಂದು ಹೋಗುವ ಸ್ಥಳ ಹಾಸನ ಜಿಲ್ಲೆಯ ಬೇಲೂರು ಹಾಗೂ ಮೈಸೂರು ಜಿಲ್ಲೆಯ ಬಿಳಿಕೆರೆ ಸಂಪರ್ಕ ಮಾಡುವ ರಾಷ್ಟ್ರೀಯ ಹೆದ್ದಾರಿ 373 ಯಲ್ಲಿ ವಾಹನಗಳ ಓಡಾಟ ಇದೆ. ಹಾಗಾಗಿಯೇ ಇಲ್ಲಿ ಒಂದು ಫ್ಲೈ ಓವರ್ ನಿರ್ಮಾಣವಾಗಬೇಕು ಎನ್ನುವುದು ಜನರ ಬೇಡಿಕೆಯಾಗಿತ್ತು. ಆದರೆ ಘಟನೆ ನಡೆದು ಒಂದು ವರ್ಷ ಕಳೆಯುತ್ತಾ ಬಂದಿದೆ. ಇನ್ನೂ ಈ ಕಾಮಗಾರಿ ಆರಂಭವಾಗಿಲ್ಲ. ಇಂತಹ ಘಟನೆ ಮತ್ತೆ ಮರುಕಳಿಸದಿರಲು ಕೂಡಲೆ ಫ್ಲೈ ಓವರ್ ನಿರ್ಮಾಣವಾಗಲಿ ಎನ್ನುವುದು ಜನರ ಆಗ್ರಹವಾಗಿದೆ.

ಪರಿಹಾರ ನೀಡಿದ್ರೂ ಬತ್ತದ ಕಣ್ಣೀರು

ಅಂದು ಸಂಭ್ರಮದಲ್ಲಿದ್ದ ಊರಿನಲ್ಲಿ ಸೂತಕದ ಛಾಯೆ ನಿರ್ಮಾಣವಾಗಿತ್ತು. ಬಂಟೇನಹಳ್ಳೀಯ ಪ್ರಭಾಕರ್(55) ಮುತ್ತಿಗೆ ಹಿರೆಹಳ್ಳೀಯ ಈಶ್ವರ್, ಡಣಾಯಕನಹಳ್ಳಿಯ ಗೋಕುಲ್, ಕಬ್ಬಿನಹಳ್ಳಿಯ ಪ್ರವೀಣ್ ಹಾಗು ಕುಮಾರ್ ಸಹೋದರರು, ಕೆಬಿ ಪಾಳ್ಯದ ವಿದ್ಯಾರ್ಥಿ ರಾಜೇಶ್ ಹಾಗೂ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ದುರಂತದಲ್ಲಿ ಬಲಿಯಾಗಿದ್ದರು. ಘಟನೆಯಲ್ಲಿ ಮೃತರಾದವರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ಹಾಗೂ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿತ್ತು. ಆದರೆ ಇದ್ದ ಒಬ್ಬೊಬ್ಬರೇ ಮಕ್ಕಳನ್ನ ಕಳೆದುಕೊಂಡ ಹೆತ್ತವರ ರೋಧನೆ ಇನ್ನು ಕಡಿಮೆಯಾಗಿಲ್ಲ.

ಇನ್ನು ಜನರ ಸಮಸ್ಯೆಗೆ ಸ್ಪಂದಿಸಿದ್ದ ಮಾಜಿ ಪ್ರದಾನಿ ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದು ಫ್ಲೈಓವರ್ ನಿರ್ಮಾಣಕ್ಕೆ ಒತ್ತಾಯ ಮಾಡಿದ್ದರು. ಜೊತೆಗೆ ಹಾಸನ ಸಂಸದ ಶ್ರೇಯಸ್ ಪಟೇಲ್ ಕೂಡ ಸಂಸತ್ತಿನಲ್ಲಿ ಈ ಬೇಡಿಕೆ ಮುಂದಿಟ್ಟಿದ್ದರು. ಈಗ ಯೋಜನೆ ಅನುಮೋದನೆ ಆಗಿದೆ. ಆದರೆ ಕಾಮಗಾರಿ ಆರಂಭಯಾವಾಗ, ಅನುದಾನ ಬಿಡುಗಡೆ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ.

ಇದನ್ನೂ ಓದಿ: ಹಾಸನ ಟ್ರಕ್ ಅಪಘಾತ: ಮನೆಗೆ ಆಧಾರವಾಗಬೇಕಿದ್ದ ಯುವಕರೇ ಸಾವು, ಒಬ್ಬೊಬ್ಬರದು ಒಂದೊಂದು ಕಣ್ಣೀರ ಕಥೆ

ಒಟ್ಟಿನಲ್ಲಿ ಹತ್ತು ಅಮಾಯಕ ಜನರು ಬಲಿಯಾದ ದುರಂತಕ್ಕೆ ವರ್ಷ ಸಮೀಪಿಸುತ್ತಿದೆ, ಮತ್ತೊಂದು ಗಣೇಶೋತ್ಸವಕ್ಕೆ ಜನರು ತಯಾರಿ ನಡೆಸುತ್ತಿರುವಾಗಲು ಸರ್ಕಾರ ಮಾತ್ರ ದುರಂತ ನಡೆದ ಸ್ಥಳದಲ್ಲಿ ಕೈಗೊಳ್ಳಬೇಕಾದ ಕಾಮಗಾರಿ ಆರಂಭಕ್ಕೆ ಆಸಕ್ತಿ ತೋರಿಲ್ಲ, ಮತ್ತೊಂದು ದುರಂತ ಸಂಭವಿಸುವ ಮುನ್ನ ಫ್ಲೈ ಓವರ್ ನಿರ್ಮಾಣ ಆಗಲಿ ಎನ್ನುವುದು ಜನರ ಒತ್ತಾಯ.

ಕರ್ನಾಟದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us