AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 12 ದಿನದಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬೆಯ ದರ್ಶನ: ಇನ್ನೊಂದೇ ದಿನ ಬಾಕಿ

ಹಾಸನಾಂಬೆ ದರ್ಶನೋತ್ಸವಕ್ಕೆ ನಾಳೆ ತೆರೆಬೀಳಲಿದೆ. ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದುಕೊಂಡಿದ್ದಾರೆ. ದರ್ಶನ ಜೊತೆಜೊತೆಗೆ 17 ಕೋಟಿ ರೂ ಆದಾಯ ಸಂಗ್ರಹವಾಗಿದೆ. ಇನ್ನು ದೀಪಾವಳಿ ಹಬ್ಬದ ಹಿನ್ನೆಲೆ ಇಂದು ಸರತಿ ಸಾಲುಗಳು ಸಂಪೂರ್ಣ ಖಾಲಿ ಇದೆ. ಅ 22 ಅಂದರೆ ನಾಳೆ ಹಾಸನಾಂಬೆ ಉತ್ಸವ ಕೊನೆಯಾಗಲಿದೆ.

ಕೇವಲ 12 ದಿನದಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬೆಯ ದರ್ಶನ: ಇನ್ನೊಂದೇ ದಿನ ಬಾಕಿ
ಹಾಸನಾಂಬೆ
ಮಂಜುನಾಥ ಕೆಬಿ
| Edited By: |

Updated on: Oct 21, 2025 | 8:36 AM

Share

ಹಾಸನ, ಅಕ್ಟೋಬರ್​​ 21: ಇಡೀ ದೇಶವನ್ನೆ ತನ್ನತ್ತ ಸೆಳೆಯುತ್ತಿರುವ ರಾಜ್ಯದ ಶಕ್ತಿಕೇಂದ್ರ ಹಾಸನಾಂಬೆಯ (Hasanamba) ತವರು ಹಾಸನದಲ್ಲಿ ಮೇಳೈಸುತ್ತಿರುವ ಹಾಸನಾಂಬೆ ಉತ್ಸವಕ್ಕೆ ನಾಳೆ ತೆರೆಬೀಳಲಿದೆ. ಅ. 10ರಿಂದ ಆರಂಭವಾಗಿರುವ ಸಾರ್ವಜನಿಕ ದರ್ಶನ ಅ. 22 ಅಂದರೆ ನಾಳೆಯೇ ಕೊನೆಯಾಗಲಿದೆ. ಕೇವಲ 12 ದಿನಗಳಲ್ಲಿ ಬರೋಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು (Devotees) ದೇವಿ ದರ್ಶನ ಮಾಡಿದರೆ, ಟಿಕೆಟ್​ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಬರೋಬ್ಬರಿ 17 ಕೋಟಿ ರೂ ಹೆಚ್ಚು ಆದಾಯ ಹರಿದು ಬಂದಿದೆ. ಆ ಮೂಲಕ ಹಾಸನಾಂಬೆ ದರ್ಶನೋತ್ಸವದ ಈವರೆಗಿನ ಎಲ್ಲಾ ದಾಖಲೆಗಳನ್ನು ಮೀರಿಸಿದೆ.

ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿದ್ದಾರೆ. 12ನೇ ದಿವನಾದ ಇಂದು ಕೂಡ ಮಂಗಳವಾರ ಆಗಿರುವುದರಿಂದ ಅಪಾರ ಸಂಖ್ಯೆಯ ಭಕ್ತರು ಹಾಸನಾಂಬೆ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಅಕ್ಟೋಬರ್ 9ರ ಗುರುವಾರ ದೇಗುಲದ ಬಾಗಿಲು ತೆರೆಯಲಾಗಿದ್ದು. ಅಕ್ಟೋಬರ್ 10ರ ಶುಕ್ರವಾರದಿಂದ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಮೊದಲ ನಾಲ್ಕು ದಿನ ಸರಾಸರಿ ಒಂದುವರೆ ಲಕ್ಷದಷ್ಟು ಭಕ್ತರು ದರ್ಶನ ಪಡರೆ ಅಕ್ಟೋಬರ್ 17ರ ಏಕಾದಶಿ ದಿನ ದಾಖಲೆಯ ನಾಲ್ಕು ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ನಂತರ ನಿತ್ಯವು ಎರಡರಿಂದ ಎರಡುವರೆ ಲಕ್ಷ ಭಕ್ತರು ಹಾಸನಾಂಬೆಯ ಆಶೀರ್ವಾದ ಪಡೆದು ವರ್ಷಕ್ಕೆ ಒಮ್ಮೆ ದರ್ಶನ ಕೊಡುವ ಮಹಾತಾಯಿಯನ್ನ ಕಣ್ತುಂಬಿಕೊಂಡು ತಮ್ಮ ಕಷ್ಟ ದೂರಮಾಡಿ, ಇಷ್ಟಾರ್ಥ ಸಿದ್ಧಿಸು ತಾಯೇ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ಹಾಸನಾಂಬೆಯ ದರ್ಶನ ಮುಗಿಸಿ ಮರಳುತ್ತಿದ್ದ ಬೈಕ್​ಗೆ ಗುದ್ದಿದ ಇನ್ನೋವಾ ಕಾರು; ಸ್ಥಳದಲ್ಲೆ ಇಬ್ಬರ ದುರ್ಮರಣ

ಕೇವಲ ಭಕ್ತರು ಮಾತ್ರವಲ್ಲ ರಾಜಕೀಯ ನಾಯಕರು, ಸಿನಿತಾರೆಯರು, ವಿವಿಧ ಮಠಾಧೀಶರು, ನಾಡಿನ ಪ್ರತಿಷ್ಠಿತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ನಿನ್ನೆ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕರುಗಳಾದ ಜಿಟಿ ದೇವೇಗೌಡ, ಭಾಗೀರತಿ, ಸಿಎನ್ ಬಾಲಕೃಷ್ಣ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಸೇರಿ ಹಲವು ಗಣ್ಯರು ದೇವಿ ದರ್ಶನ ಪಡೆದರು.

ನಟ ವಿಜಯ ರಾಘವೇಂದ್ರ, ವಾಣಿಜ್ಯ ಮಂಡಳಿ ಮಾಜಿ ಸದ್ಯಕ್ಷ ಸಾರಾಗೋವಿಂದು ಸೇರಿ ಹಲವು ಗಣ್ಯರು ಶಕ್ತಿ ದೇವತೆಗೆ ನಮಿಸಿದ್ದಾರೆ. ಸಂಭ್ರಮ ಸಡಗರದ ಹಾಸನಾಂಬೆ ಉತ್ಸವಕ್ಕೆ ನಾಳೆಯೇ ಕೊನೆಯ ದಿನವಾಗಿದ್ದು ಸಾರ್ವಜನಿಕರ ದರ್ಶನಕ್ಕೆ ನಾಳೆ ಸಂಜೆಗೆ ತೆರೆಬೀಳಲಿದೆ.

23 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬೆಯ ದರ್ಶನ

ಇಷ್ಟಾರ್ಥ ಸಿದ್ದಿಸೋ ದೇವಿ, ಬೇಡಿದ ವರವ ಕರುಣಿಸುವ ಮಹಾತಾಯಿ, ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶದ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷ 20 ಲಕ್ಷ ಭಕ್ತರು ದೇವಿ ದರ್ಶನ ಮಾಡಿ ದಾಖಲೆ ನಿರ್ಮಾಣವಾಗಿದ್ದರೆ, ಈ ವರ್ಷ ಇನ್ನೂ ಒಂದು ದಿನ ಬಾಕಿ ಇರುವಂತೆಯೇ ಈ ದಾಖಲೆಯನ್ನ ಮೀರಿ 12 ದಿನಕ್ಕೆ 23 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ಆಶೀರ್ವಾದ ಪಡೆದುಕೊಂಡಿದ್ದಾರೆ.

17 ಕೋಟಿಗೂ ಅಧಿಕ ಆದಾಯ

ಇನ್ನು ಈ ವರ್ಷ ಕೇವಲ ಟಿಕೆಟ್​​ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ದಾಖಲೆಯ 17 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ. ಇನ್ನು ಒಂದು ದಿನ ಬಾಕಿ ಇರುವಾಗಲೇ ಅತ್ಯಧಿಕ ಆದಾಯ ಹಾಸನಾಂಬೆ ಸನ್ನಿದಿಗೆ ಹರಿದುಬಂದಿದೆ. ಇಂದು ಬೆಳಿಗ್ಗೆ 5 ಗಂಟೆಯಿಂದ ಹಾಸನಾಂಬೆ ದರ್ಶನ ಆರಂಭವಾಗಿದ್ದು ಮಧ್ಯಾಹ್ನ 2 ಗಂಟೆವರೆಗೆ ನಿರಂತವಾಗಿ ದರ್ಶನ ನಡೆಯಲಿದೆ. 2 ಗಂಟೆಯಿಂದ 3-30ರವರೆಗೆ ನೈವೇದ್ಯಕ್ಕಾಗಿ ದೇಗುಲ ಮುಚ್ಚಿರಲಿದ್ದು, ನಂತರ ರಾತ್ರಿವರೆಗೂ ಹಾಸನಾಂಬೆ ದರ್ಶನ ಭಾಗ್ಯ ಸಿಗಲಿದೆ.

ಇದನ್ನೂ ಓದಿ: ಹಬ್ಬದ ದಿನವು ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು!

ಒಟ್ಟಿನಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಸಿಗುವ ಪುಣ್ಯಕ್ಷೇತ್ರ ಹಾಸನದ ಹಾಸನಾಂಬೆ ದರ್ಶನದ ಭಾಗ್ಯ ಇನ್ನೊಂದೇ ದಿನಕ್ಕೆ ಅಂತ್ಯವಾಗಲಿದೆ. ಲಕ್ಷ ಲಕ್ಷ ಭಕ್ತರಿಗೆ ಆಶೀರ್ವಾದ ಮಾಡುವ ಮಹಾಮಯಿ ಹಾಸನಾಂಬೆ ಗರ್ಭಗುಡಿಯಲ್ಲಿ ನೆಲೆಸಲಿದ್ದು, ಮತ್ತೆ ದರ್ಶನಕ್ಕಾಗಿ ಒಂದು ವರ್ಷ ಕಾಯಬೇಕಿದೆ. ಕೊನೆಯ ದಿನದ ದರ್ಶನಕ್ಕೂ ಅಪಾರ ಸಂಖ್ಯೆ ಭಕ್ತರು ಹರಿದು ಬರಲಿದ್ದು. ಜಿಲ್ಲಾಡಳಿತ ಕೂಡ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸನ್ನದ್ದರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.