
ಹಾಸನ, ಅಕ್ಟೋಬರ್ 16: ಕರ್ನಾಟಕದ ಪ್ರಸಿದ್ಧ ಹಾಗೂ ಪವಾಡಸದೃಶ ಕ್ಷೇತ್ರವಾದ ಹಾಸನದ ಶ್ರೀ ಹಾಸನಾಂಬೆಯ ದೇವಸ್ಥಾನದ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಯುತ್ತದೆ. 2026ರ ಸಾಲಿನ ಹಾಸನಾಂಬೆ ದರ್ಶನೋತ್ಸವದ ದಿನಾಂಕ ನಿಗದಿಯಾಗಿದ್ದು, ಕೋಟ್ಯಂತರ ಭಕ್ತರು ದೇವಿಯ ದರ್ಶನಕ್ಕೆ ಎದುರು ನೋಡುತ್ತಿದ್ದಾರೆ. ಈ ಬಾರಯ ಉತ್ಸವ ಅಕ್ಟೋಬರ್ 29ರಿಂದ ಪ್ರಾರಂಭವಾಗಿ ನವೆಂಬರ್ 11ರವರೆಗೂ ತಾಯಿಯ ದರ್ಶನಕ್ಕೆ ಅವಕಾಶವಿರಲಿದೆ.
ಕಳೆದ ವರ್ಷ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದೆ. ಸುಗಮ ದರ್ಶನಕ್ಕೆ ಬೇಕಾದ ಬ್ಯಾರಿಕೇಡ್ ವ್ಯವಸ್ಥೆ, ಪ್ರಸಾದ ವಿತರಣೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ.
ದರ್ಶನೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಕೆಎಸ್ಆರ್ ಬೆಂಗಳೂರು-ಹಾಸನ ಹಾಗೂ ಅರಸೀಕೆರೆ-ಹಾಸನ ನಡುವೆ ವಿಶೇಷ ರೈಲುಗಳ ಸಂಚಾರವನ್ನು ಕಲ್ಪಿಸಿದೆ.
ಇದನ್ನೂ ಓದಿ:ಹಾಸನಾಂಬೆ ದರ್ಶನೋತ್ಸವಕ್ಕೆ 13.5 ಕೋಟಿ ಖರ್ಚು ಅಂದಾಜು: ಜಿಲ್ಲಾಡಳಿತದ ನಡೆಗೆ ಜೆಡಿಎಸ್ನಿಂದ ತೀವ್ರ ಆಕ್ರೋಶ
ಹಾಸನದಲ್ಲಿ ಇತ್ತೀಚೆಗೆ ಗಣಪತಿ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯ ಹಾಗೂ ಜಟಾಪಟಿ ಕೊನೆಗೂ ಶಮನಗೊಂಡಿದೆ. ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಇಬ್ಬರೂ ಹಿರಿಯ ಅಧಿಕಾರಿಗಳು ತಮ್ಮ ಮನಸ್ತಾಪವನ್ನು ಮರೆತು ಒಂದಾಗಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ದಿನಾಂಕ ಫಿಕ್ಸ್: ಈ ಬಾರಿ ಹೇಗಿರಲಿದೆ ಉತ್ಸವ?
ಇಂದು ಒಟ್ಟಾಗಿ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ ಡಿಸಿ ಹಾಗೂ ಎಸ್ಪಿ, ಪರಸ್ಪರ ಹಸ್ತಲಾಘವ ಮಾಡಿ ಆತ್ಮೀಯವಾಗಿ ಅಪ್ಪಿಕೊಳ್ಳುವ ಮೂಲಕ ತಾವು ಒಂದಾಗಿರುವುದನ್ನು ಸಾಬೀತುಪಡಿಸಿದರು. ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಇಬ್ಬರೂ ಅಧಿಕಾರಿಗಳು, ಮಂಗಳಾರತಿ ತಟ್ಟೆಗೆ ಹಣ ಹಾಕುತ್ತಾ ದರ್ಶನೋತ್ಸವದ ಸಿದ್ಧತೆಗಳ ಕುರಿತು ಪರಸ್ಪರ ಸಮಾಲೋಚನೆ ನಡೆಸಿದರು. ಮುಂಬರುವ ಹಾಸನಾಂಬೆ ಉತ್ಸವವನ್ನು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಯಶಸ್ವಿಯಾಗಿ ನಡೆಸಲು ಇಬ್ಬರೂ ಪ್ರಮುಖ ಅಧಿಕಾರಿಗಳು ಸಜ್ಜಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:54 am, Fri, 16 October 26