ಹಾಸನಾಂಬೆ ದರ್ಶನೋತ್ಸವಕ್ಕೆ 13.5 ಕೋಟಿ ಖರ್ಚು ಅಂದಾಜು: ಜಿಲ್ಲಾಡಳಿತದ ನಡೆಗೆ ಜೆಡಿಎಸ್ನಿಂದ ತೀವ್ರ ಆಕ್ರೋಶ
ರಾಜ್ಯದಲ್ಲಿ ಭೀಕರ ಬರಗಾಲ ಇರುವಾಗ ಹಾಸನಾಂಬೆ ದರ್ಶನೋತ್ಸವಕ್ಕೆ 13.5 ಕೋಟಿ ರೂ. ಅಂದಾಜು ವೆಚ್ಚ ಮಾಡಿರುವ ಹಾಸನ ಜಿಲ್ಲಾಡಳಿತದ ನಡೆ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆ ಹಣವನ್ನು ರೈತರ ನೆರವಿಗೆ ಬಳಸುವಂತೆ ಜೆಡಿಎಸ್ನ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಹಾಸನ, ಅಕ್ಟೋಬರ್ 12: ಅ.29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವಕ್ಕೆ 13.5 ಕೋಟಿ ಖರ್ಚನ್ನು ಅಂದಾಜು ಮಾಡಿರುವ ಹಾಸನ ಜಿಲ್ಲಾಡಳಿತದ ನಡೆಗೆ ಜೆಡಿಎಸ್ನಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭೀಕರ ಬರದ ಸಂದರ್ಭದಲ್ಲಿ ದುಂದುವೆಚ್ಚ ಮಾಡದಂತೆ ಆಗ್ರಹಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಶಿವಲಿಂಗೇಗೌಡ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಜೆಡಿಎಸ್ನ ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
‘ಜಿಲ್ಲಾಡಳಿತದ ನಡೆಗೆ ಜನ ಆಕ್ರೋಶಗೊಂಡಿದ್ದಾರೆ’
ಹಾಸನ ಜಿಲ್ಲೆಯ 8 ತಾಲೂಕುಗಳ ಪೈಕಿ 7 ತಾಲೂಕು ಬರಪೀಡಿತವಾಗಿವೆ. ಬರಪೀಡಿತ ತಾಲೂಕುಗಳಿಗೆ ಬರ ನಿರ್ವಹಣೆಗಾಗಿ ತಲಾ 1 ಕೋಟಿ ಬಿಡುಗಡೆ ಅಂತಾರೆ.ಆದರೆ ಈವರೆಗೆ ಯಾವುದೇ ಹಣ ಬಂದಿಲ್ಲ. ಹಾಸನಾಂಬೆ ದರ್ಶನೋತ್ಸವದ ಖರ್ಚು-ವೆಚ್ಚ ಕಡಿಮೆ ಮಾಡಿ, ಅದೇ ಹಣವನ್ನು ರೈತರ ನೆರವಿಗೆ ಬಳಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಸನಾಂಬೆ ದರ್ಶನೋತ್ಸವದ ಲೈಟಿಂಗ್ಸ್, ಬ್ಯಾರಿಕೇಡ್ ಅಳವಡಿಕೆ, ಸ್ವಾಗತ ಕಮಾನು ಅಳವಡಿಕೆ, ಸಿಬ್ಬಂದಿ ಊಟಕ್ಕೆ 13.5 ಕೋಟಿ ವೆಚ್ಚದ ಬಗ್ಗೆ ಜಿಲ್ಲಾಡಳಿತ ಅಂದಾಜು ಪಟ್ಟಿಸಿದ್ಧಪಡಿಸಿದೆ. ಜಿಲ್ಲಾಡಳಿತದ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಹಾಸನದಲ್ಲಿ ಹೆಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್: ಹಾಸನಾಂಬೆ ಜಾತ್ರೆಯ ಖರ್ಚು ಕೇಳಿ ಶಾಕ್ ಆದ ಸಚಿವ ಶಿವಲಿಂಗೇಗೌಡ
ಜಾತ್ರೆಯ ಖರ್ಚು ಕೇಳಿ ಶಾಕ್ ಆಗಿದ್ದ ಶಿವಲಿಂಗೇಗೌಡ
ಇನ್ನು ಹಾಸನಾಂಬೆ ಉತ್ಸವ ಹಿನ್ನಲೆ ಅಕ್ಟೋಬರ್ 09ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆ ವೇಲೆ ಜಾತ್ರೆಯ ಖರ್ಚು ಕೇಳಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಕೂಡ ಶಾಕ್ ಆಗಿದ್ದ ಪ್ರಸಂಗ ನಡೆದಿತ್ತು. ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್ ಎಂದು ಅಧಿಕಾರಿಗಳು ಹೇಳಿದ್ದು ಕೇಳಿ ಕಂಗಾಲಾಗಿದ್ದ ಸಚಿವರು, ಒಂದು ಕಂಟ್ರೋಲ್ ರೂಂಗೆ ಇಷ್ಟು ದುಡ್ಡಾ ಎಂದು ಪ್ರಶ್ನಿಸಿದ್ದರು. ಐವತ್ತು ಲಕ್ಷ ಅಂದ್ರೆ ಅರ್ಧ ಕೋಟಿ ರೀ… ಜನ ಏನಂತಾರೆ? ರಾಜ್ಯದಲ್ಲಿ ಬರಗಾಲ ಇದೆ ಜನರು ಏನು ಮಾತನಾಡುತ್ತಾರೆ ಎಂದು ಕೇಳಿದ್ದರು. ಜಾತ್ರೆ ಚೆನ್ನಾಗಿ ಮಾಡಬೇಕು ಅನ್ನೋದು ನನಗೂ ಸಹ ಇಷ್ಟ. ಆದರೆ ಇಷ್ಟೊಂದು ದುಂದುವೆಚ್ಚಾ ಬೇಕಾ? ಈ ಕರ್ಮದಲ್ಲಿ ನಾನು ಪಾಲುದಾರ ಆಗ್ಬೇಕಾ ಎಂದು ಪ್ರಶ್ನಿಸಿದ್ದರು. ಅಲ್ಲದೆ, ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ. ಬೇಕಿದ್ರೆ ಸಿಎಂಗೆ ಹೇಳಿ ವಾಪಸ್ ಹೋಗ್ತಿನಿ ಎಂದು ತಿಳಿಸಿದ್ದು ಕೂಡ ದೊಡ್ಡ ಸುದ್ದಿಯಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




