
ಹಾಸನ, ಸೆಪ್ಟೆಂಬರ್ 20: ಸಕಲೇಶಪುರ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸಚಿವ ಶಿವಲಿಂಗೇಗೌಡ ಮಾತಿನ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ. ಆದರೆ ಬಲತ್ಕಾರವಾಗಿ ದುಡ್ಡು ಕಿತ್ತುಕೊಳ್ಳೋದು ಸರಿಯಲ್ಲ ಎಂದು ಸಚಿವರು ಹೇಳಿದ್ದಾರೆ. ಸಚಿವರ ಮಾತಿಗೆ ಸ್ಥಳದಲ್ಲಿದ್ದ ಜನರು ಕೆರಳಿದ್ದು, ಗೌರವಯುತವಾಗಿ ಯಾಕೆ ಕೊಡಬೇಕು? ಅವರಿಗೆ ಸಂಬಳ ಕೊಡಲ್ವಾ? ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗ್ರಾಸವಾಗಿದೆ.
ತಾನು ಹೇಳಿದ್ದು ಗೌರವ ಕೊಡಿ ಎಂದೇ ಹೊರತು ಲಂಚಕೊಡಿ ಅಂದಿಲ್ಲ ಎಂದು ಸಚಿವ ಶಿವಲಿಂಗೇಗೌಡ ಬಳಿಕ ಸ್ಪಷ್ಟನೆ ನೀಡಿದ ಪ್ರಸಂಗವೂ ಈ ವೇಳೆ ನಡೆದಿದೆ. ಆದರೂ ಸಚಿವರ ಹೇಳಿಕೆ ಬಗ್ಗೆ ವ್ಯಕ್ತಿಯೋರ್ವ ಆಕ್ಷೇಪ ತೆಗೆದ ಹಿನ್ನೆಲೆ, ಆತ ಸಭೆ ಹಾಳುಮಾಡಲು ಬಂದಿದ್ದಾನೆ ಎಂದ ಸಚಿವರು ಪೊಲೀಸರ ಮೂಲಕ ವ್ಯಕ್ತಿಯನ್ನು ಹೊರಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘: ಸಿಎಂರನ್ನ ಹಾಡಿ ಹೊಗಳಿದ ಬಿಜೆಪಿ ನಾಯಕ
ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂಬ ಸಚಿವ ಶಿವಲಿಂಗೇಗೌಡರ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ. ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಹೇಳಿಕೆ ನೀಡಿರುವುದು ಲಂಚವನ್ನು ಅಧಿಕೃತಗೊಳಿಸಿದಂತಿದೆ ಎಂದವರು ಆರೋಪಿಸಿದ್ದಾರೆ. ಅಲ್ಲದೆ, ಇಂತಹ ಹೇಳಿಕೆ ನೀಡಿದ ಸಚಿವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕೆಂದು ವ್ಯಂಗ್ಯವಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.