ಬೆಂಗಳೂರು ಮಂಗಳೂರು ಪ್ರಯಾಣಿಕರಿಗೆ ತಪ್ಪದ ಸಂಕಷ್ಟ: ಈ ವರ್ಷವೂ ಶಿರಾಡಿ ಘಾಟಿ ರಸ್ತೆ ಕಾಮಗಾರಿ ಮುಗಿಯೋದು ಅನುಮಾನ
ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರಿಗೆ ಸಂಪರ್ಕ ಕೊಂಡಿಯಾಗಿರುವ ಶಿರಾಡಿ ಘಾಟ್ನಲ್ಲಿ ಸುಸಜ್ಜಿಗ ರಸ್ತೆ ನಿರ್ಮಾಣ ಆಗಬೇಕು ಎಂಬ ಆಶಯ ಎಲ್ಲರದ್ದಾಗಿದ್ದರೂ ಎಂಟು ವರ್ಷದಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ. ಈ ವರ್ಷದ ಮಳೆಗಾಲ ಆರಂಭದ ಸಮಯಕ್ಕೆ ಕಾಮಗಾರಿ ಮುಗಿಸುವ ಭರವಸೆ ಇತ್ತಾದರೂ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ.

ಹಾಸನ, ಮೇ 20: ನಿತ್ಯವೂ 20 ರಿಂದ 25 ಸಾವಿರ ವಾಹನಗಳು ಓಡಾಡುವ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ವಲಯಗಳ ದೃಷ್ಟಿಯಿಂದಲೂ ಪ್ರಮುಖವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ಕಾಮಗಾರಿ (Shiradi Ghat Road Work) ಮಾತ್ರ ಎಂಟು ವರ್ಷಗಳ ಕೆಲಸದ ಹೊರತಾಗಿಯೂ ಈ ವರ್ಷವೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಹಾಸನದಿಂದ ಮಾರನಹಳ್ಳಿವರೆಗಿನ 45 ಕಿಲೋಮೀಟರ್ ವರೆಗಿನ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಬರೊಬ್ಬರಿ ಎಂಟು ವರ್ಷ ಕಳೆದಿದೆ. ಕುಂಟುತ್ತಾ ಸಾಗಿದ್ದ ಕಾಮಗಾರಿ ಕಡೆಗೂ ಈಗ ಅಂತಿಮ ಹಂತಕ್ಕೆ ಬಂದಿದೆ. ಆದರೆ, ಈ ಮಳೆಗಾಲದ ಆರಂಭಕ್ಕೂ ಮುನ್ನ ಮುಗಿಯುವ ಸಾಧ್ಯತೆ ಕಡಿಮೆಯಾಗಿದೆ.
ಹಾಸನದಿಂದ ಸಕಲೇಶಪುರದ ವರೆಗೆ ಕಾಮಗಾರಿ ಬಹುತೇಕ ಮುಗಿದಿದೆ. ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ. ಮಳೆಗಾಲ ಆರಂಬವಾದರೆ ಸಾಕು; ಶಿರಾಡಿಘಾಟ್ ಯಾವಾಗ ಬಂದ್ ಆಗುತ್ತದೋ, ಎಲ್ಲಿ ಭೂಕುಸಿತವಾಗಿ ಅನಾಹುತ ಸೃಷ್ಟಿಯಾಗುತ್ತದೋ ಎಂಬ ಭೀತಿ ಕಳೆದ ಐದಾರು ವರ್ಷಗಳಿಂದ ಇದೆ. ಅನೇಕ ಕಡೆಗಳಲ್ಲಿ ಕಡಿದಾಗಿ ಗುಡ್ಡಗಳನ್ನು ಕಡಿದಿರುವುದರಿಂದ ಜನರ ಆತಂಕ ಮುಂದುವರಿದಿದೆ.
ಭಾರಿ ಭುಕುಸಿತಕ್ಕೆ ಸಂಭವಿಸಿದ್ದ ದೊಡ್ಡತಪ್ಲು ಬಳಿ ಮುಗಿದಿಲ್ಲ ಕಾಮಗಾರಿ
ಕಳೆದ ವರ್ಷ ಸರಣಿ ಭೂಕುಸಿತ ಸಂಭವಿಸಿ ಭೀತಿ ಹುಟ್ಟಿಸಿದ್ದ ದೊಡ್ಡತಪ್ಲು ಬಳಿ ಇನ್ನೂ ಕಾಮಗಾರಿ ಅಂತಿಮಗೊಂಡಿಲ್ಲ. ಭಾರೀ ವಿಸ್ತಾರದ ಪ್ರದೇಶದಲ್ಲಿ ಮಣ್ಣು ಕುಸಿದಿದ್ದರೂ ಅದರ ಪಕ್ಕದಲ್ಲೇ ತಡೆಗೋಡೆ ನಿರ್ಮಿಸಿ ರಸ್ತೆ ನಿರ್ಮಾಣ ಮಾಡುವ ಯತ್ನ ನಡೆದಿದೆ. ಆದರೆ, ಅದು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಬೇಗನೆ ಉಳಿದ ಕಾಮಗಾರಿ ಮುಗಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಲವು ಬಾರಿ ಗುತ್ತಿಗೆದಾರರ ಬದಲಾವಣೆ; ಅಸಮರ್ಪಕ ಕಾಮಗಾರಿ
2016ರಲ್ಲಿ ಆರಂಭವಾಗಿದ್ದ ಕಾಮಗಾರಿ ಸಮರ್ಪಕವಾಗಿ ಆಗಿರಲಿಲ್ಲ. ಹಲವು ಬಾರಿ ಗುತ್ತಿಗೆದಾರರು ಬದಲಾಗಿದ್ದರಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು. ಕಳೆದ ವರ್ಷ ಭೂ ಕುಸಿತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್ ಆದಿಯಾಗಿ ಸಾಕಷ್ಟು ನಾಯಕರು ಬೇಟಿ ನೀಡಿದ ಬಳಿಕ ಕಾಮಗಾರಿಗೆ ವೇಗ ಸಿಕ್ಕಿತ್ತು. ಇದೀಗ ಕಾಮಗಾರಿ ಸಾಕಷ್ಟು ಪ್ರಮಾಣದಲ್ಲಿ ಮುಗಿದಿದ್ದರೂ ಕೂಡ ಈ ವರ್ಷದ ಮಳೆಗಾಲದಲ್ಲಿಯೂ ಕೂಡ ನಿರಾತಂಕದ ಪ್ರಯಾಣ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕಳೆದ ವರ್ಷ ಕೂಡ ಹೊಸದಾಗಿ ರಸ್ತೆ ನಿರ್ಮಿಸಿದ ಹಲವು ಕಡೆ ರಸ್ತೆಗಳೇ ಕುಸಿದಿದ್ದವು. ಈಗಲೂ ಕೂಡ ತರಾತುರಿಯಲ್ಲಿ ಹಲವು ಕಡೆ ಕಾಮಗಾರಿ ಮಾಡಿದ್ದರಿಂದ ಆತಂಕ ಹಾಗೆಯೇ ಉಳಿದುಕೊಂಡಿದೆ.
ಇದನ್ನೂ ಓದಿ: ಹಾಸನ: ಶಿರಾಡಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ, ಆರೋಪ
ಸದ್ಯಕ್ಕೆ ದೊಡ್ಡ ದೊಡ್ಡ ಹೊಂಡ ಗುಂಡಿಗಳಿದ್ದ ಶಿರಾಡಿ ಘಾಟ್ ಬದಲಾಗಿದೆ. ಅಲ್ಲಲ್ಲಿ ಒಂದಷ್ಟು ಕಾಮಗಾರಿ ಬಾಕಿ ಉಳಿದಿರುವುದು ಬಿಟ್ಟರೆ ಬಹುತೇಕ ಕೆಲಸ ಆಗಿದೆ. ಆದರೆ ಆ ಕಾಮಗಾರಿಯ ಗುಣಮಟ್ಟ ಹೇಗಿದೆ ಎಂಬುದು ಮಳೆಗಾಲದ ಬಳಿಕ ಗೊತ್ತಾಗಲಿದೆ. ಬಾಕಿ ಉಳಿದಿರುವ ಕಾಮಗಾರಿ ಬೇಗನೆ ಮುಗಿಸಿ ಸಂಚಾರ ದುರವಸ್ಥೆ ತಪ್ಪಿಸಿ ಎಂದು ಜನರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Tue, 20 May 25







