- Kannada News Photo gallery Shiradi Ghat Highway 7: 700 Crore Project Delays and Allegation Unscientific roadworks
ಹಾಸನ: ಶಿರಾಡಿಯಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ, ಆರೋಪ
ಶಿರಾಡಿಘಾಟ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 7ರ 700 ಕೋಟಿ ರೂಪಾಯಿ ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿ 8 ವರ್ಷವಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ರಸ್ತೆ ಕುಸಿಯುವ ಆತಂಕವಿದೆ. ಸ್ಥಳೀಯರು ಸಮರ್ಪಕ ಕಾಮಗಾರಿಗೆ ಆಗ್ರಹಿಸುತ್ತಿದ್ದಾರೆ.ಬೆಂಗಳೂರು-ಮಂಗಳೂರು ನಡುವಿನ ಈ ಪ್ರಮುಖ ರಸ್ತೆಯು ಸರಕು ಸಾಗಣೆ ಮತ್ತು ಯಾತ್ರಿಕರಿಗೆ ಅತ್ಯಗತ್ಯ.
Updated on: Feb 05, 2025 | 10:28 AM

ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 7ರ ಶಿರಾಡಿಘಾಟ್ನಲ್ಲಿನ ರಸ್ತೆ ಅವ್ಯವಸ್ಥೆಗೆ ದಶಕಗಳ ಇತಿಹಾಸವೇ ಇದೆ. ಹೀಗಾಗಿಯೇ ಬರೊಬ್ಬರಿ 700 ಕೋಟಿ ರೂ. ವೆಚ್ಚದಲ್ಲಿ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡು 8 ವರ್ಷ ಕಳೆದರೂ. ಕಾಮಗಾರಿ ಮಾತ್ರ ಮುಗಿದಿಲ್ಲ.

ಹಾಸನದಿಂದ ಸಕಲೇಶಫುರ ತಾಲ್ಲೂಕಿನ ಮಾರನಹಳ್ಳಿವರೆಗಿನ ಈ ರಸ್ತೆಯಲ್ಲಿ ಸದ್ಯ ಸಕಲೇಶಪುರದವರೆಗೆ ಮಾತ್ರ ಕಾಮಗಾರಿ ಬಹುತೇಕ ಮುಗಿದಿದ್ದರೂ ಸಕಲೇಶಫುರದಿಂದ ಮಾರನಹಳ್ಳಿವರೆಗಿನ ಕಾಮಗಾರಿ ದುರವಸ್ಥೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಳೆಗಾಲದಲ್ಲಾದ ಅವಾಂತರದಿಂದ ಈ ವರ್ಷ ಮಳೆಗಾಲ ಆರಂಭದೊಳಗೆ ಕಾಮಗಾರಿ ಮುಗಿಸುವ ಧಾವಂತಗದಲ್ಲಿ ಬೇಕಾಬಿಟ್ಟಿಯಾಗಿ ಅವೈಜ್ಞಾನಿಕ ತಡೆಗೋಡೆಗಳನ್ನು ನಿರ್ಮಿಸಿ ಕಾಮಗಾರಿ ಮಾಡುತ್ತಿರುವುದು ಮತ್ತೊಂದು ರೀತಿಯ ಅವಾಂತರಕ್ಕೆ ಕಾರಣವಾಗುತ್ತಾ ಎನ್ನೋ ಆತಂಕ ಶುರುವಾಗಿದೆ.

ಮಳೆಗಾಲದಲ್ಲಂತೂ ಹತ್ತಾರು ಬಾರಿ ಕುಸಿಯುವ ಗುಡ್ಡದಿಂದ ಸಂಚಾರ ಬಂದ್ ಆಗುವುದು ತಪ್ಪಿಲ್ಲ. ಕಳೆದ ವರ್ಷದ ಮಳೆಗಾದಲ್ಲಿ ದೊಡ್ಡ ತಪ್ಲು ಬಳಿ ಪದೇ ಪದೆ ಆದ ಭೂ ಕುಸಿತ ಸಾಕಷ್ಟು ಭಿತಿ ಸೃಷ್ಟಿಸಿತ್ತು. ಹೀಗಾಗಿಯೇ ಈ ಮಾರ್ಗದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಈ ವರ್ಷ ಮಳೆಗಾಲದ ವೇಳೆಗೆ ಕಾಮಗಾರಿ ಮುಗಿಸುವ ಸಲುವಾಗಿ ಆತುರದಲ್ಲಿ ಕಾಮಗಾರಿ ಮಾಡಲಾಗುತ್ತಿದ್ದು 70ರಿಂದ 80 ಅಡಿ ಎತ್ತರದ ಗುಡ್ಡಗಳಿರುವ ಪ್ರದೇಶದಲ್ಲಿ ನಾಲ್ಕರಿಂದ ಐದು ಅಡಿ ಎತ್ತರದ ತಡೆಗೋಡೆ ಕಟ್ಟಿ ಕಾಂಕ್ರಿಟ್ ರಸ್ತೆ ಮಾಡಲಾಗುತ್ತಿದೆ. ಇದು ಅತ್ಯಂತ ಅವೈಜ್ಪಾನಿಕವಾಗಿದ್ದು ಮಲೆನಾಡಿನ ಪ್ರದೇಶಕ್ಕೆ ಇದು ಸೂಕ್ತವಲ್ಲ. ಹೀಗಾದರೆ ಮಳೆಗಾಲದಲ್ಲಿ ಗುಡ್ಡಗಳು ವಾಹನಗಳ ಮೇಲೆ ಬೀಳುವುದು ನಿಶ್ಚಿತ ಎಂಬ ಭೀತಿ ಇದ್ದು ಸೂಕ್ತ ರೀತಿಯಲ್ಲಿ ಕಾಮಗಾರಿ ಮಾಡಿ ಎಂದು ಸ್ಥಳಿಯ ಶಾಸಕರೇ ಆಗ್ರಹಿಸಿದ್ದಾರೆ.

ಬೆಂಗಳೂರು-ಮಂಗಳೂರು ನಡುವಿನ ಈ ಪ್ರಮುಖ ರಸ್ತೆ ಸರಕು ಸಾಗಣೆ ದೃಷ್ಟಿಯಿಂದ ಮಾತ್ರವಲ್ಲದೆ ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆ ಸೇರಿ ಹಲವು ಧಾರ್ಮಿಕ ಕ್ಷೇತ್ರಗಳಿಗೆ ನಿತ್ಯವೂ ಸಾವಿರಾರು ಜನರು ಓಡಾಡುವ ಮಾರ್ಗವೂ ಆಗಿದೆ. ನಿತ್ಯ ಕನಿಷ್ಟ 20ರಿಂದ 25 ಸಾವಿರ ವಾಹನಗಳು ಓಡಾಡುವ ಈ ರಸ್ತೆ ಸುಸಜ್ಜಿತವಾಗಿ ಇರಬೇಕು.

ಹಲವೆಡೆ ದೊಡ್ಡ ದೊಡ್ಡ ಗುಡ್ಡಗಳನ್ನ ಕಡಿದು ನಡುವೆ ರಸ್ತೆ ಮಾಡಲಾಗಿದೆ. ಈ ಮಾರ್ಗದಲ್ಲಿ ಕನಿಷ್ಟ 15 ಅಡಿ ಎತ್ತರದ ತಡೆಗೋಡೆ ನಿರ್ಮಿಸಬೇಕು. ತಡೆಗೋಡೆ ಜೊತೆಗೆ ನೀರು ಹರಿಯಲು ಚರಂಡಿ ನಿರ್ಮಿಸಬೇಕು. ಆದರೆ, ಆತುರದಲ್ಲಿ ಗುತ್ತಿಗೆದಾರರು ಕೆಲಸ ಮಾಡಿ ಮುಗಿಸುತ್ತಿದ್ದಾರೆ. ಹೀಗಾಗಿ ಇದು ಬೇಕಾಬಿಟ್ಟಿ ಕೆಲಸವಾಗಿದ್ದು ಕೂಡಲೆ ಕಾಮಗಾರಿ ನಿಲ್ಲಿಸಿ ಸಮರ್ಪಕ ಕೆಲಸ ಮಾಡಿ ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

ಹತ್ತಾರು ವರ್ಷಗಳಿಂದ ಹೊಂಡ-ಗುಂಡಿಗಳ ನಡುವೆ ಓಡಾಡುತ್ತಿರುವ ಲಕ್ಷಾಂತರ ಜನರು ಈ ರಸ್ತೆಗೆ ಮುಕ್ತಿ ಸಿಗುತ್ತೆ ಎಂದು ದಶಕಗಳಿಂದ ಕಾಯುತ್ತಲೇ ಇದ್ದಾರೆ. ಆದರೆ, ವರ್ಷಗಳು ಮುಗಿದರೂ ಮಳೆಗಾಲದ ನರಕಮಯ ಸಂಚಾರ ಸಮಸ್ಯೆ ಮಾತ್ರ ಮುಗಿಯುತ್ತಿಲ್ಲ. ಈಗ ಕಾಮಗಾರಿ ಮುಗಿಯುತ್ತಿದೆ. ಆದರೆ, ಆಗುತ್ತಿರುವ ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿ ಮುಗಿಸಿ ಎಂಬುವುದು ಜನರ ಆಗ್ರಹವಾಗಿದೆ.



















