AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರಜ್ ರೇವಣ್ಣಗೆ ಬಿಗ್ ರಿಲೀಫ್: A2 ಶಿವಕುಮಾರ್ ಮಾಫಿ ಸಾಕ್ಷಿ ಅರ್ಜಿ ವಜಾಗೊಳಿಸಿದ ಕೋರ್ಟ್

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಎರಡನೇ ಆರೋಪಿ ಶಿವಕುಮಾರ್ ಸಲ್ಲಿಸಿದ್ದ 'ಮಾಫಿ ಸಾಕ್ಷಿ' ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ವಜಾಗೊಳಿಸಿದೆ. ಸೂರಜ್ ರೇವಣ್ಣ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ, ಶಿವಕುಮಾರ್ ಪ್ರತ್ಯಕ್ಷ ಸಾಕ್ಷಿಯಲ್ಲ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಪ್ರಕರಣದ ತನಿಖೆ ಹೊಸ ಆಯಾಮ ಪಡೆದಿದೆ.

ಸೂರಜ್ ರೇವಣ್ಣಗೆ ಬಿಗ್ ರಿಲೀಫ್: A2 ಶಿವಕುಮಾರ್ ಮಾಫಿ ಸಾಕ್ಷಿ ಅರ್ಜಿ ವಜಾಗೊಳಿಸಿದ ಕೋರ್ಟ್
ಸೂರಜ್ ರೇವಣ್ಣ
ರಮೇಶ್​ ಎಮ್​.
| Edited By: |

Updated on: Aug 18, 2026 | 4:26 PM

Share

ಬೆಂಗಳೂರು, ಆ.18 : ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ತಿರುವು ಸಿಕ್ಕಿದ್ದು, ಪ್ರಕರಣದ ಎರಡನೇ ಆರೋಪಿ (A2) ಶಿವಕುಮಾರ್ ಸಲ್ಲಿಸಿದ್ದ ‘ಮಾಫಿ ಸಾಕ್ಷಿ’ (Approver) ಅರ್ಜಿಯನ್ನು ಬೆಂಗಳೂರಿನ 42ನೇ ಎಸಿಜೆಎಂ (ACJM) ಕೋರ್ಟ್ ವಜಾಗೊಳಿಸಿದೆ. ಮಾಫಿ ಸಾಕ್ಷಿಯಾಗಲು ಅನುಮತಿ ಕೋರಿ ಎ2 ಶಿವಕುಮಾರ್ ಸಲ್ಲಿಸಿದ್ದ ಮನವಿಯನ್ನು ತೀವ್ರವಾಗಿ ವಿರೋಧಿಸಿದ್ದ ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಮಹತ್ವದ ಆದೇಶ ನೀಡಿದೆ.

ಎ2 ಶಿವಕುಮಾರ್ ಕೇವಲ ಸಂತ್ರಸ್ತನಿಗೆ ಬೆದರಿಕೆ ಹಾಕಿದ ಆರೋಪದ ಅಡಿಯಲ್ಲಷ್ಟೇ ಭಾಗಿಯಾಗಿದ್ದಾನೆ. ಐಪಿಸಿ ಸೆಕ್ಷನ್ 377 ರ ಅಡಿಯ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಘಟನೆಯ ಸಾಕ್ಷಿ ಈತನಲ್ಲ. ಆದ್ದರಿಂದ ಈತ ಪ್ರಕರಣದ ಕುರಿತು ಪ್ರತ್ಯಕ್ಷ ಅಥವಾ ಮಾಫಿ ಸಾಕ್ಷ್ಯ ನೀಡಲು ಸಾಧ್ಯವಿಲ್ಲ ಎಂದು ಸೂರಜ್ ರೇವಣ್ಣ ಪರ ವಕೀಲ ಗಂಗಾಧರ ಶೆಟ್ಟಿ ಸುದೀರ್ಘ ವಾದ ಮಂಡಿಸಿದರು.

ಪ್ರಕರಣದ ಸ್ವಭಾವ ಹಾಗೂ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಶಿವಕುಮಾರ್ ಪ್ರತ್ಯಕ್ಷ ಭಾಗಿದಾರನಲ್ಲದಿರುವುದರಿಂದ ಆತನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು 42ನೇ ಎಸಿಜೆಎಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನಲೆ ಏನು?:

ಜೂನ್ 22, 2024ರಂದು ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಯುವಕ ದೂರು ನೀಡಿದ್ದ. ಆರಂಭದಲ್ಲಿ ಹಾಸನ ಜಿಲ್ಲಾ ಪೊಲೀಸ್ ಠಾಣೆಗೆ ಆಗಮಿಸಿದ್ದ ಸಂತ್ರಸ್ತ, ನಂತರ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ವಿವಿಧ ಸೆಕ್ಷನ್‌ಗಳಡಿ ಅಧಿಕೃತ ಪ್ರಕರಣ ದಾಖಲಿಸಿದ. ಇದೇ ವೇಳೆ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವವರು ಸಂತ್ರಸ್ತನ ವಿರುದ್ಧವೇ ಪ್ರತಿ ದೂರು ನೀಡಿದ್ದರು. “ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡುವುದಾಗಿ ಬೆದರಿಕೆ ಹಾಕಿ, 5 ಕೋಟಿ ರೂ. ಹಣ ನೀಡದಿದ್ದರೆ ಕೇಸ್ ದಾಖಲಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ” ಎಂದು ಶಿವಕುಮಾರ್ ಆರೋಪಿಸಿದ್ದರು.

ಇದನ್ನೂ ಓದಿ; ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರ ಪಾದಯಾತ್ರೆ ಬಹುತೇಕ ಕ್ಯಾನ್ಸಲ್?

ದೂರು ದಾಖಲಾದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಪೊಲೀಸರು ಜೂನ್ 23 ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಪ್ರಕರಣದ ಸಂಪೂರ್ಣ ತನಿಖಾ ಜವಾಬ್ದಾರಿಯನ್ನು ಸಿಐಡಿ (CID) ಮತ್ತು ಪ್ರತ್ಯೇಕ ತನಿಖಾ ತಂಡಕ್ಕೆ (SIT) ವರ್ಗಾಯಿಸಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us