ನಿಧಿ ತೋರಿಸುತ್ತೇನೆಂದು ಎರಡು ಸಾವಿರ ರೂಪಾಯಿ ಲಪಟಾಯಿಸಿದ ವ್ಯಕ್ತಿಯ ಕೊಲೆ
ನಿಧಿಯ ಆಸೆ ತೋರಿಸಿ ಹಣ ಪಡೆದು ಅಲ್ಲಿ ಬಾ ಇಲ್ಲಿ ಬಾ ಎಂದು ಸತಾಯಿಸಿದ ವ್ಯಕ್ತಿಯನ್ನು ರಕ್ತಸಿಕ್ತವಾಗಿ ಹತ್ಯೆಯಾಗಿ ಹತ್ಯೆ ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ: ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ನಿಧಿ ತೋರಿಸುತ್ತೇನೆ ಎಂದು ಹೇಳಿ ಎರಡು ಸಾವಿರ ರೂಪಾಯಿ ಪಡೆದು ನಿಧಿಯನ್ನು ತೋರಿಸದೆ ಸತಾಯಿಸಿದಕ್ಕೆ ಭೀಕರವಾಗಿ ಕೊಲೆಯಾದ ಘಟನೆ ತಾಲೂಕಿನ ನಾಗನೂರು ಕ್ರಾಸ್ ಬಳಿ ಇರೋ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಹತ್ಯೆಯಾದ ವ್ಯಕ್ತಿಯನ್ನು ಮಾಸನಕಟ್ಟಿ ಗ್ರಾಮದ ಐವತ್ತು ವರ್ಷ ವಯಸ್ಸಿನ ಮಹಾದೇವಪ್ಪ ಕುರುವತ್ತಿ ಎಂದು ಗುರುತಿಸಲಾಗಿದೆ. ಮಹಾದೇವಪ್ಪನಿಗೆ ಹತ್ತು ಎಕರೆ ಜಮೀನಿದ್ದು, ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ. ಇಷ್ಟಿದ್ದರೂ ಮಹಾದೇವಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಸಾಲದ್ದಕ್ಕೆ ನಿಧಿ ತೋರಿಸುತ್ತೇನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದ ಸೋಮಣ್ಣ ಕೋಡದ ಮತ್ತು ರಾಣೆಬೆನ್ನೂರಿನ ಚಂದ್ರಪ್ಪ ಮತ್ತೂರ ಎಂಬುವರಿಗೆ ನಿಧಿ ತೋರಿಸುವುದಾಗಿ ಹೇಳಿ ಅವರಿಂದ ಎರಡೂವರೆ ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದನಂತೆ. ಆದರೆ ಮರಳಿ ಹಣವನ್ನೂ ನೀಡದೆ, ನಿಧಿಯನ್ನೂ ತೋರಿಸದೆ ಅವರ ಕೈಗೆ ಸಿಗದಂತೆ ಮಹಾದೇವಪ್ಪ ಓಡಾಡುತ್ತಿದ್ದನು.
ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಅಕ್ಟೋಬರ್ 12ರ ರಾತ್ರಿ ನಾಗನೂರು ಕ್ರಾಸ್ ಬಳಿ ಮಹಾದೇವಪ್ಪನನ್ನು ಹುಡುಕಿಕೊಂಡು ಬಂದು ಮಹಾದೇವಪ್ಪನ ಜೊತೆ ಕೂಡಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಮಹಾದೇವಪ್ಪ ಹತ್ಯೆ ಆಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದಿದ್ದ ಮೃತನ ಸಂಬಂಧಿಕರು ಮಹಾದೇವಪ್ಪನ ಹತ್ಯೆಗೆ ಹಲವಾರು ಕಾರಣಗಳನ್ನು ವ್ಯಕ್ತಪಡಿಸಿದ್ದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಆರಂಭಿಸಿದ್ದರು. ಮಹಾದೇವಪ್ಪನ ಹತ್ಯೆಗೆ ಬಳಸಿದ್ದ ಸುತ್ತಿಗೆ ಹತ್ಯೆಯಾಗಿದ್ದ ಸ್ಥಳದ ಪಕ್ಕದ ಜಮೀನಿನಲ್ಲೇ ಬಿದ್ದಿತ್ತು. ಈ ಕುರಿತು ತನಿಖೆಗೆ ಇಳಿದ ಪೊಲೀಸರು ಕೆಲವೇ ಕೆಲವು ದಿನಗಳಲ್ಲಿ ಮಹಾದೇವಪ್ಪನನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾದೇವಪ್ಪ ನಿಧಿ ತೋರಿಸುವುದಾಗಿ ಹೇಳಿ ಹಣ ವಸೂಲಿ ಮಾಡಿ ನಿಧಿ ತೋರಿಸದೆ ಸತಾಯಿಸಿದ್ದೇ ಮಹಾದೇವಪ್ಪನ ಹತ್ಯೆಗೆ ಕಾರಣ ಎನ್ನಲಾಗಿದೆ. ಅಲ್ಲದೆ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ