ಹಾವೇರಿ ಮೂಲದ ನಿರ್ದೇಶಕನಿಗೆ ಒಲಿದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದ ಅತ್ಯುತ್ತಮ ಚಿತ್ರ 2021 ಪ್ರಶಸ್ತಿ

ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶಿಸಿದ ಜಂಗಲ್ ಕ್ರೈ ಚಲನಚಿತ್ರಕ್ಕೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಅತ್ಯುತ್ತಮ ಚಿತ್ರ 2021 ಎಂಬ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾವೇರಿ ಮೂಲದ ನಿರ್ದೇಶಕನಿಗೆ ಒಲಿದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದ ಅತ್ಯುತ್ತಮ ಚಿತ್ರ 2021 ಪ್ರಶಸ್ತಿ
ನಿರ್ದೇಶಕ ಸಾಗರ ಬಳ್ಳಾರಿ
Follow us
TV9 Web
| Updated By: preethi shettigar

Updated on: Jun 22, 2021 | 8:46 AM

ಹಾವೇರಿ : ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ಅವರ ನಿರ್ದೇಶನದ ಹಿಂದಿ ಸಿನಿಮಾ ಜಂಗಲ್ ಕ್ರೈ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಬಾಚಿಕೊಂಡ ನಿರ್ದೇಶಕ ಸಾಗರ ಬಳ್ಳಾರಿ ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಬುಡಕಟ್ಟು ಜನಾಂಗದ ಅನಾಥ ಮಕ್ಕಳ ನೈಜ ಜೀವನದ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ದೇಶಿಸಲಾಗಿದೆ. ಓಡಿಸ್ಸಾದ ಕಳಿಂಗ ಸೋಷಿಯಲ್ ಸೈನ್ಸ್ ಸಂಸ್ಥೆಯ ಬಾಲಕ 2007ರಲ್ಲಿ ಯುಕೆಯಲ್ಲಿ ನಡೆದ ರಗ್ಬಿ ಆಟದಲ್ಲಿ ಚಾಂಪಿಯನ್ ಆದ ಘಟನೆಯನ್ನು ಆಧರಿಸಿದ ಚಿತ್ರವೇ ಈ ಜಂಗಲ್ ಕ್ರೈ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ದಾದಾಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಆಚರಿಸಿಕೊಂಡು ಬರಲಾಗುತ್ತಿದೆ. ದೇಶದ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡ ನಗರಗಳಲ್ಲಿ ಈ ಚಲನಚಿತ್ರೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶಿಸಿದ ಜಂಗಲ್ ಕ್ರೈ ಚಲನಚಿತ್ರಕ್ಕೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಅತ್ಯುತ್ತಮ ಚಿತ್ರ 2021 ಎಂಬ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ನೀಡಿ ಗೌರವಿಸಿದೆ. ಬಾಲಿವುಡ್​ನ ಸೃಜನಾತ್ಮಕ ನಿರ್ದೇಶಕ ಸಾಗರಗೆ ಈ ಪ್ರಶಸ್ತಿ ದೊರೆತಿರುವುದು ಹಾವೇರಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಜಂಗಲ್ ಕ್ರೈ ಸಿನಿಮಾ ಬಾಲಿವುಡ್ ಮತ್ತು ಹಾಲಿವುಡ್ ಎಂಬ ಟ್ಯಾಗ್​ಲೈನ್​ ಜತೆಗೆ ಮೂಡಿ ಬಂದಿದೆ.

ಸುಮಾರು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿರುವ ನಿರ್ದೇಶಕ ಸಾಗರಗೆ ಮೋಟೆಬೆನ್ನೂರು ಎಂದರೆ ಎಲ್ಲಿಲ್ಲದ‌ ಪ್ರೀತಿ. ವರ್ಷಕ್ಕೊಮ್ಮೆಯಾದರೂ ಕುಟುಂಬದವರ ಜೊತೆಗೆ ಮೋಟೆಬೆನ್ನೂರಿಗೆ ಬಂದು ಹೋಗುತ್ತಾರೆ. ಹೀಗೆ ಊರಿಗೆ ಬರುವುದನ್ನು ಯಾವುದೇ ಕಾರಣಕ್ಕೂ ಸಾಗರ ಮರೆಯುವುದಿಲ್ಲ. ಮುಂಬೈನಲ್ಲೇ ಓದಿರುವ ಇವರು, ಮುಂಬೈನ ಸತ್ಯಜೀತ್ ರೇ ಇನ್ಸ್​ಟೊಟ್ಯೂಟ್​ನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಗರ ಅವರು ಈವರೆಗೆ ಐದು ಸೃಜನಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ. ಸಾಗರ ನಮ್ಮ ಮೋಟೆಬೆನ್ನೂರು ಗ್ರಾಮದವರು ಹಾಗೂ ನಮ್ಮ ಸಂಬಂಧಿ ಎನ್ನುವುದು ನಮಗೆ ಖುಷಿಯ ಸಂಗತಿಯಾಗಿದೆ ಎಂದು ನಿರ್ದೇಶಕ ಸಾಗರ ಅವರ ಸಂಬಂಧಿ ರಮೇಶ ಬಳ್ಳಾರಿ ಸಂತೋಷ ವ್ಯಕ್ತಡಿಸಿದ್ದಾರೆ.

ಇದನ್ನೂ ಓದಿ:

ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಸಮರ್ಪಿಸಿದ ರಜನಿಕಾಂತ್​!

ದಾದಾ ಸಾಹೇಬ್​ ಫಾಲ್ಕೆ ಸೌತ್​ 2020 ಪ್ರಶಸ್ತಿ: ರಕ್ಷಿತ್​-ರಶ್ಮಿಕಾಗೆ ಅವಾರ್ಡ್​