AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಲಾ ಸೀತಾರಾಮನ್​​ ಇರುವ ವಿಡಿಯೋ ಲಿಂಕ್ ಒತ್ತಿ ಲಕ್ಷಾಂತರ ರೂ ಕಳೆದುಕೊಂಡ ಹಾವೇರಿ ವ್ಯಕ್ತಿ

Fake AI Video Scams: ರೀಲ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಬರುವ AI ನಕಲಿ ವಿಡಿಯೋಗಳ ಬಗ್ಗೆ ಎಷ್ಟೇ ಎಚ್ಚರ ವಹಿಸಿದರು ಸಾಲದು. ಸಚಿವೆ ನಿರ್ಮಲಾ ಸೀತಾರಾಮನ್ ಅವರಂತಹ ಗಣ್ಯರ ನಕಲಿ ವಿಡಿಯೋಗಳನ್ನು ಬಳಸಿ ಸೈಬರ್ ವಂಚಕರು ಹೂಡಿಕೆ ನೆಪದಲ್ಲಿ ಲಕ್ಷಾಂತರ ಹಣ ಕಬಳಿಸುತ್ತಿದ್ದಾರೆ. ಹಾವೇರಿಯ ವ್ಯಕ್ತಿಯೊಬ್ಬರು 22 ಲಕ್ಷ ಕಳೆದುಕೊಂಡಿದ್ದಾರೆ.

ನಿರ್ಮಲಾ ಸೀತಾರಾಮನ್​​ ಇರುವ ವಿಡಿಯೋ ಲಿಂಕ್ ಒತ್ತಿ ಲಕ್ಷಾಂತರ ರೂ ಕಳೆದುಕೊಂಡ ಹಾವೇರಿ ವ್ಯಕ್ತಿ
ಸೈಬರ್​ ಪೊಲೀಸ್​ ಠಾಣೆImage Credit source: tv9 kannada
ಗಂಗಾಧರ​ ಬ. ಸಾಬೋಜಿ
|

Updated on: Aug 13, 2026 | 7:24 PM

Share

ಹಾವೇರಿ, ಆಗಸ್ಟ್​​ 13: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ (Social Media) ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ರೀಲ್ಸ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳನ್ನು ಹರಿಬಿಟ್ಟು ಸಾರ್ವಜನಿಕರಿಂದ ಲಕ್ಷಾಂತರ ರೂ ಹಣ ದೋಚುವ ಜಾಲ ಸಕ್ರಿಯವಾಗಿದೆ. ಇಂತಹದ್ದೇ ಎಐ ವಿಡಿಯೋ ಲಿಂಕ್ ಒಂದನ್ನು ನಂಬಿ ಹಾವೇರಿಯ ನಿವಾಸಿಯೊಬ್ಬರು ಬರೋಬ್ಬರಿ 22 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದು, ಈ ಸಂಬಂಧ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಕ್ಷಾಂತರ ರೂ ಲಾಭದ ಆಮಿಷ

ಸೈಬರ್ ವಂಚಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರಂತಹ ಗಣ್ಯ ವ್ಯಕ್ತಿಗಳ ಎಐ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ‘bxb ಮಾರ್ಕೆಟ್’ ಹೆಸರಿನ ಜಾಹೀರಾತಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿದಂತೆ ನಕಲಿ ವಿಡಿಯೋ ಸೃಷ್ಟಿಸಲಾಗಿತ್ತು.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಮಹಿಳೆ ಮಾತು ನಂಬಿ ಲಕ್ಷಾಂತರ ರೂ. ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

ಕೇವಲ 22 ಸಾವಿರ ರೂ ಹೂಡಿಕೆ ಮಾಡಿದರೆ ಡಬಲ್, ತ್ರಿಬಲ್ ಲಾಭ ಬರಲಿದ್ದು, 25 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದು ಎಂದು ಆಮಿಷ ಒಡ್ಡಲಾಗಿತ್ತು. ಇದನ್ನು ನಂಬಿದ ಸಂತ್ರಸ್ತರು, ಎಐ ವಿಡಿಯೋದಲ್ಲಿದ್ದ ಟ್ರೇಡಿಂಗ್ ಟೆಲಿಗ್ರಾಮ್ ಲಿಂಕ್ ಬಳಸಿ ಆರ್‌ಟಿಜಿಎಸ್ ಹಾಗೂ ಐಎಂಪಿಎಸ್ ಮೂಲಕ ಹಂತ ಹಂತವಾಗಿ ಒಟ್ಟು 22 ಲಕ್ಷ ರೂ ಹಣ ವರ್ಗಾಯಿಸಿ ಯಾವುದೇ ಲಾಭ ಸಿಗದೆ ಸಂಪೂರ್ಣ ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ.

ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರತಿಕ್ರಿಯಿಸಿದ್ದು, “ಸಾರ್ವಜನಿಕರು ಮೊಬೈಲ್‌ಗೆ ಬರುವ ಯಾವುದೇ ಅನುಮಾನಾಸ್ಪದ ಲಿಂಕ್‌ಗಳನ್ನು ಒತ್ತಬಾರದು. ಯಾರೇ ಕರೆ ಮಾಡಿ ಕೇಳಿದರೂ ಒಟಿಪಿ ಹಂಚಿಕೊಳ್ಳುವುದು ಅಥವಾ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿ ಮೋಸ ಹೋಗಬಾರದು,” ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹ

ಈ ಕುರಿತು ಸ್ಥಳೀಯರಾದ ರಮೇಶ ಕಡಕೋಳ ಎನ್ನುವವರು ಪ್ರತಿಕ್ರಿಯಿಸಿದ್ದು, “ಸೈಬರ್ ವಂಚಕರು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗಣ್ಯರ ವಿಡಿಯೋಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಸಾರ್ವಜನಿಕರು ಹಣದ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬಾರದು. ಕೇಂದ್ರ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಇಂತಹ ಫೇಕ್ ವಿಡಿಯೋಗಳನ್ನು ಹರಿಬಿಡುವ ಸೈಬರ್ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಇಂತಹ ವಂಚನೆಯ ಆ್ಯಪ್‌ಗಳನ್ನು ತಕ್ಷಣವೇ ನಿಷೇಧಿಸಬೇಕು,” ಎಂದು ಆಗ್ರಹಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us