ಭಾರೀ ಮಳೆ: ಏಳು ಜಿಲ್ಲೆಗಳಲ್ಲಿಂದು ಶಾಲೆ ಕಾಲೇಜುಗಳಿಗೆ ರಜೆ, ಇಲ್ಲಿದೆ ವಿವರ

ಮಂಗಳೂರು, ಉಡುಪಿ, ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ಕರ್ನಾಟಕದ ವಿವಿಧೆಡೆ ಮುಂಗಾರು ಮಳೆಯ ಆರ್ಭಟ ಮುಂದುವರಿದಿದೆ. ನದಿಗಳ ಭೋರ್ಗರೆತ, ಬೆಳಗಳು ಜಲಾವೃತ, ಗುಡ್ಡ ಕುಸಿತು ಅನಾಹುತ ಸೇರಿದಂತೆ ಸಾಲು ಸಾಲು ಸಂಕಷ್ಟಗಳನ್ನು ತಂದೊಡ್ಡಿದೆ. ಭಾರೀ ಮಳೆಯ ಕಾರಣ ವಿವಿಧ ಜಿಲ್ಲೆಗಳಲ್ಲಿಂದು ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಲ್ಲೆಲ್ಲಿ ಎಂಬ ಮಾಹಿತಿ ಇಲ್ಲಿದೆ.

ಭಾರೀ ಮಳೆ: ಏಳು ಜಿಲ್ಲೆಗಳಲ್ಲಿಂದು ಶಾಲೆ ಕಾಲೇಜುಗಳಿಗೆ ರಜೆ, ಇಲ್ಲಿದೆ ವಿವರ
ಶೃಂಗೇರಿಯಲ್ಲಿ ತುಂಗಾ ನದಿ ಪ್ರವಾಹ

Updated on: Aug 18, 2025 | 8:53 AM

ಬೆಂಗಳೂರು, ಆಗಸ್ಟ್ 18: ಕೆಲವು ದಿನಗಳಿಂದ ತುಸು ಬಿಡುವು ನೀಡಿದ್ದ ಮುಂಗಾರು ಮಳೆ (Monsoon Rain) ಮತ್ತೆ ಕರ್ನಾಟಕದಾದ್ಯಂತ ಅಬ್ಬರಿಸತೊಡಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ಕೊಡಗು, ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆ ಜೋರಾಗಿದೆ. ಹಲವೆಡೆ ಮಳೆಯಿಂದಾಗಿ ಅನಾಹುತ-ಅವಾಂತರಗಳು ಸೃಷ್ಟಿಯಾಗಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಏಳು ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ (School Colleges Holiday) ಘೋಷಣೆ ಮಾಡಲಾಗಿದೆ.

ಉತ್ತರ ಕನ್ನಡ ಈ ತಾಲೂಕುಗಳಲ್ಲಿ ಶಾಲೆ-ಕಾಲೇಜು ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆ ಜಿಲ್ಲೆಯ 11 ತಾಲೂಕುಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳು, ಪಿಯು ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಶಿರಸಿ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಜೋಯಿಡಾ, ಹಳಿಯಾಳ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಡಗೋಡು ತಾಲೂಕಿನಲ್ಲಿ ಮಾತ್ರ ರಜೆ ನೀಡಿಲ್ಲ.

ದಕ್ಷಿಣ ಕನ್ನಡದಲ್ಲಿಯೂ ಶಾಲೆ-ಕಾಲೇಜು ರಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಇಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಹೆಚ್​.ವಿ.ದರ್ಶನ್ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗದಲ್ಲಿ ಶಾಲೆ ಕಾಲೇಜು ರಜೆ

ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿ ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಮಳೆ ಅಬ್ಬರ

ಹಾಸನದ ವಿವಿಧ ತಾಲೂಕುಗಳಲ್ಲಿ ಶಾಲೆ ಕಾಲೇಜು ರಜೆ

ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಸಕಲೇಶಪುರ, ಬೇಲೂರು ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಅಂಗನವಾಡಿ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾತ್ರ ಇಂದು ರಜೆ ಘೋಷಣೆ ಮಾಡಲಾಗಿದೆ.

ಕೊಡಗಿನಲ್ಲಿಯೂ ಶಾಲೆ ಕಾಲೇಜುಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ಇಂದು ಅರೆಂಜ್ ಅಲರ್ಟ್ ಹಿನ್ನೆಲೆ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಲಾಗಿದೆ. ಜೋರು ಗಾಳಿ‌ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ. ಕೊಡಗಿನಾದ್ಯಂತ ವರುಣಾರ್ಭಟ ಹೆಚ್ಚಾಗಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾರಂಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು, ಡ್ಯಾಂನಿಂದ 8 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.

ಚಿಕ್ಕಮಗಳೂರು: ಈ ತಾಲೂಕುಗಳಲ್ಲಿ ರಜೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೂಡ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಜಾಗರ, ಖಾಂಡ್ಯ, ಆಲ್ದೂರು, ವಸ್ತಾರೆ, ಆವತಿ ಹೋಬಳಿ ವ್ಯಾಪ್ತಿಯಲ್ಲಿ ಅಂಗನವಾಡಿ, ಶಾಲೆಗಳಿಗೆ ಮಾತ್ರ ಇಂದು ರಜೆ ಘೋಷಣೆ ಮಾಡಲಾಗಿದೆ.

ಸಕಲೇಶಪುರ ಕಡಗರವಳ್ಳಿ ಬಳಿ ರಸ್ತೆ ಸಂಚಾರ ಬಂದ್

ಸಕಲೇಶಪುರ ಭಾಗದಲ್ಲಿ ಭಾನುವಾರದಿಂದ ಭಾರೀ ಮಳೆ ಆಗುತ್ತಿದ್ದು, ಕಡಗರವಳ್ಳಿ ಬಳಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿದೆ. ಮತ್ತೆ ಗುಡ್ಡ ಕುಸಿತದ ಭೀತಿ ಇದ್ದು, ಇಲ್ಲಿ ಸಂಚಾರ ಬಂದ್‌ಗೆ ಸೂಚಿಸಲಾಗಿದೆ.

ದಾವಣಗೆರೆ ಜಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆ ಮುಂದುವರಿದಿದೆ. ಶೃಂಗೇರಿ ತಾಲೂಕಿನಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗಾಂಧಿ ಮೈದಾನ, ಪ್ಯಾರಲಲ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ನದಿ ತೀರಕ್ಕೆ ಸ್ಥಳೀಯರು, ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ. ಇನ್ನೊಂದೆಡೆ ಕೊಪ್ಪ ತಾಲೂಕಿನ ಕುದುರೆಗುಂಡಿ ಬಳಿ ರಸ್ತೆ ಜಲಾವೃತ ಆಗಿತ್ತು. ಇದ್ರಿಂದ ಕುದುರೆಗುಂಡಿ, ಕಾನೂರು, ಕಟ್ಟಿಮನೆ ಗ್ರಾಮಗಳ ಸಂಪರ್ಕ ಬಂದ್ ಆಗಿತ್ತು. ಬಸರೀಕಟ್ಟೆ ರಸ್ತೆಯಲ್ಲಿ ನದಿಯಂತೆ ನೀರು ಹರಿದಿತ್ತು.

ಇದನ್ನೂ ಓದಿ: ಕರ್ನಾಟಕ ಹವಾಮಾನ; ಆಗಸ್ಟ್ 20ರ ವರೆಗೂ ಭಾರಿ ಮಳೆ ಮುನ್ಸೂಚನೆ ನೀಡಿದ ಐಎಂಡಿ

ಉತ್ತರ ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲಿ ನಿರಂತರ ಮಳೆಗೆ 210 ಹೆಕ್ಟೇರ್‌ನಲ್ಲಿನ ವಿವಿಧ ಬೆಳೆಗಳಿಗೆ ಹಾನಿಯಾಗಿವೆ. ಕಲಬುರಗಿ ಜಿಲ್ಲೆಯಲ್ಲಿ ತೊಗರಿ, ಉದ್ದು, ಹೆಸರು ನಾಶವಾಗಿದ್ದು, ಪರಿಹಾರ ಕೊಡಿ ಎಂದು ಭಾನುವಾರ ರೈತರು ಪ್ರತಿಭಟನೆ ನಡೆಸಿದ್ದಾರೆ.

ಇನ್ನೂ ಮೂರು ದಿನ ಮಳೆ ಮುನ್ಸೂಚನೆ

ಈ ಎಲ್ಲಾ ಅವಾಂತರಗಳ ನಡುವೆ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಧಾರಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 am, Mon, 18 August 25