
ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಆಶ್ರಯವಿಲ್ಲದೆ ನಿರ್ಲಕ್ಷಿಸಲ್ಪಟ್ಟ ಹಾಗೂ ವಿವಿಧ ರೀತಿಯ ಶೋಷಣೆಗೆ ಒಳಗಾಗಿರುವ ಅಸಹಾಯಕ ಹಿರಿಯ ನಾಗರಿಕರ (Senior Citizen) ರಕ್ಷಣೆ ಮತ್ತು ಆರೈಕೆಗಾಗಿ ‘ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ’ಯ ಮಾದರಿಯಲ್ಲಿ ಸಮಗ್ರವಾದ ನೂತನ ಕಾಯ್ದೆಯನ್ನು ಜಾರಿಗೆ ತರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ನಿರ್ದೇಶನ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಆದೇಶ ಹೊರಡಿಸಿದ್ದು, ವೃದ್ಧಾಪ್ಯದಲ್ಲಿ ಸೂಕ್ತ ಆರೈಕೆಯಿಲ್ಲದೆ ಕಷ್ಟಪಡುತ್ತಿರುವ ಪ್ರತಿಯೊಬ್ಬರಿಗೂ ಕಾನೂನಾತ್ಮಕ ಬೆಂಬಲ ಸಿಗಬೇಕು ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ? ಮಕ್ಕಳಿಗೆ ಹಕ್ಕು ಬರುವುದು ಹೇಗೆ? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ
ಆಶ್ರಯವಿಲ್ಲದವರು, ಮಕ್ಕಳಿಲ್ಲದ ವೃದ್ಧರು, ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆರ್ಥಿಕ ಶೋಷಣೆಗೆ ಒಳಗಾದವರು ಮತ್ತು ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿದ್ದರೂ ಆರೈಕೆ ಸಿಗದ ಅಶಕ್ತ ಹಿರಿಯ ನಾಗರಿಕರನ್ನು ಈ ನೂತನ ಕಾಯ್ದೆಯ ವ್ಯಾಪ್ತಿಗೆ ಸೇರಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಹಿರಿಯ ನಾಗರಿಕರ ಸುರಕ್ಷತೆಗಾಗಿ ಜಾರಿಗೆ ತರಬೇಕಾದ ಈ ವ್ಯವಸ್ಥೆಯಲ್ಲಿ 24 ಗಂಟೆಗಳ ತುರ್ತು ಸ್ಪಂದನಾ ವ್ಯವಸ್ಥೆ, ಉಚಿತ ಸಹಾಯವಾಣಿ, ತಾತ್ಕಾಲಿಕ ಆಶ್ರಯ ತಾಣಗಳು ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು. ಜೊತೆಗೆ, ಸಮಗ್ರ ವೃದ್ಧಾಪ್ಯ ಆರೋಗ್ಯ ಸೇವೆ, ನರ್ಸಿಂಗ್ ನೆರವು, ಮಾನಸಿಕ ಆರೋಗ್ಯ ಸೇವೆ, ಅಗತ್ಯ ಸಮಾಲೋಚನೆ ಮತ್ತು ಉಚಿತ ಕಾನೂನು ನೆರವಿನ ಅಂಶಗಳನ್ನು ಒಳಗೊಂಡಿರಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಗ್ಯಾಂಗ್ರಿನ್ ಹಾಗೂ ಇತರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ವೃದ್ಧೆಯ ಮಗ ಮತ್ತು ಮಗಳು ತಮ್ಮ ತಾಯಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಅತ್ತ ವೈದ್ಯರು ಚಿಕಿತ್ಸೆಯಿಂದ ಚೇತರಿಕೆ ಸಾಧ್ಯವಿಲ್ಲವೆಂದು ಡಿಸ್ಚಾರ್ಜ್ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.