ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ? ಗೃಹ ಸಚಿವ ಪರಮೇಶ್ವರ್ ಉಡಾಫೆ ಮಾತು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ. ಇದು ಹಿಂದೂ -ಮುಸ್ಲಿಂ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು, ಈ ಘಟನೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇನ್ನು ಈ ಘಟನೆ ಸಂಬಂಧ ಗೃಹ ಸಚಿವ ಡಾ.ಜಿ ಪರಮೇಶ್ವರ್ ಉಡಾಫೆ ಮಾತುಗಳನ್ನಾಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 02): ಶಿವಮೊಗ್ಗದ (Shivamogga) ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆ (shivamogga violence) ಬಗ್ಗೆ ಗೃಹ ಸಚಿವ ಪರಮೇಶ್ವರ್ (Dr g parameshwar ) ಅವರು ಲಘುವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೌದು.. ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ? ಎಂದು ಹೇಳುವ ಮೂಲಕ ಶಿವಮೊಗ್ಗದ ಗಲಭೆ ವಿಚಾರವನ್ನು ಗೃಹ ಸಚಿವ ಪರಮೇಶ್ವರ್ ಉಡಾಫೆ ಮಾತುಗಳನ್ನಾಡಿದ್ದಾರೆ. ಅಲ್ಲದೇ ಗೃಹ ಸಚಿವರ ಈ ಹೇಳಿಕೆ ಗಮನಿಸಿದರೆ ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಂತೆ ಕಾಣಿಸಿದೆ.
ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು(ಅ.02) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಮಗೆ ಅಲ್ಲಿ ಟೆನ್ಶನ್ ಇದೆ ಎಂದು ಗೊತ್ತಿತ್ತು. ಪ್ರೊಸೆಷನ್ ಹೋದಾಗ ಏನಾದರೂ ಆಗುತ್ತೆ ಎಂದು ನಾವು ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದೆವು. ಹಾಗಾಗಿ ದೊಡ್ಡ ಪ್ರಮಾಣದ ಗಲಾಟೆ ಆಗಿಲ್ಲ. ಅದನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಸಣ್ಣಪುಟ್ಟ ಗಲಾಟೆ ಆದಾಗ ಅದನ್ನ ಹೇಗೆ ಕ್ರಮ ತೆಗೆದುಕೊಳ್ಳಬೇಕೋ ಅದನ್ನೇ ಪೊಲೀಸರು ಮಾಡಿದ್ದಾರೆ. ಅವರ ಕಡೆ ಇವರ ಕಡೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ: ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಈಗ ಹೇಗಿದೆ?
ದೊಡ್ಡ ಪ್ರಮಾಣದ ಗಲಾಟೆಯನ್ನು ಪೋಲೀಸರು ತಪ್ಪಿಸಿದ್ದಾರೆ. ಎರಡೂ ಗುಂಪಿನ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬ್ಯಾನರ್ ಕಟ್ತಾರೆ, ಪೋಸ್ಟರ್ ಹಾಕ್ತಾರೆ. ಇದನ್ನು ಕೆಲವರು ಅಡ್ವಾಂಟೇಜ್ ಆಗಿ ತಗೆದುಕೊಳ್ಳುತ್ತಾರೆ ಎಂದು ಹೇಳಿರುವ ಪರಮೇಶ್ವರ್, ಶಿವಮೊಗ್ಗದ ಘಟನೆಗೆ ಕಾರಣ ಏನು ಎಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಆದ್ರೆ, ಕಲ್ಲು ತೂರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಏನಾಗಿದೆ ಎಂದು ಗೊತ್ತಿದೆ, ಹೇಳಿಕೆ ಕೊಡುವವರು ಕೊಡುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದೇವು. ಆರೋಪಿಗಳ ಹೆಸರು ಬಹಿರಂಗಗೊಳಿಸುವುದಿಲ್ಲ, ನಿಮಗೂ ಹೇಳಲ್ಲ. ಅನುಮತಿ ಇಲ್ಲದೆ ಆಗಿದೆ. ಇಂತಹದ್ದಕ್ಕೆಲ್ಲ ಪ್ರಚೋಚನೆ ನೀಡುವುದಿಲ್ಲ ಎಂದರು.
ಇಂತಹ ಕೋಮು ಸಂಘರ್ಷದಂತಹ ಗಲಾಟೆ ಬಗ್ಗೆ ಇಷ್ಟು ಲಘುವಾಗಿ ಮಾತನಾಡುತ್ತಾರೆ ಅಂದರೆ ಏನು ಅರ್ಥ? ಗೃಹ ಸಚಿವರಾಗಿಯೇ ಈ ರೀತಿ ಹೇಳಿಕೆ ನೀಡುವುದು ಸರಿಯೇ? ಎಂದು ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪರಮೇಶ್ವರ್ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ