ಮುಸಲ್ಮಾನರನ್ನು ಮನೆಯಿಂದ ಓಡಿಸಿದ್ದಾರೆ, ಹಿಂದೂಗಳನ್ನು ಅರೆಸ್ಟ್ ಮಾಡಿ ಅಂತ ನಾನೇ ಹೇಳಿದ್ದೆ: ಸಚಿವ ಶಿವಾನಂದ ಪಾಟೀಲ್
ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ನಡೆದ ಘಟನೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು ಹಿಂದೂಗಳನ್ನು ಬಂಧಿಸಿ ಬಿಡುಗಡೆ ಮಾಡಿದ್ದಾಗಿ ಹೇಳಿದ್ದಾರೆ. ಮುಸ್ಲಿಂ ಕುಟುಂಬಗಳನ್ನು ಮನೆಯಿಂದ ಓಡಿಸಲಾಗಿದೆ ಎಂದು ತಿಳಿದುಬಂದಿದೆ. ಕಡಕೋಳದಲ್ಲಿ ವಕ್ಫ್ ವಿವಾದದ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಹಾವೇರಿ, ನವೆಂಬರ್ 03: ಪಾಪ ಮುಸಲ್ಮಾನರನ್ನು ಮನೆಯಿಂದ ಓಡಿಸಿದ್ದಾರೆ. ಹಿಂದೂಗಳನ್ನು ಅರೆಸ್ಟ್ ಮಾಡಿ ಅಂತ ನಾನೇ ಹೇಳಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ (shivanand patil) ಹೇಳಿದ್ದಾರೆ. ಶಿಗ್ಗಾವಿ ತಾಲೂಕು ಬಂಕಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೇ ಹಿಂದೂಗಳನ್ನು ಅರೆಸ್ಟ್ ಮಾಡಿ ಬಿಡುಗಡೆ ಮಾಡಿ ಅಂತ ಹೇಳಿದ್ದೇನೆ ಎಂದಿದ್ದಾರೆ.
ಸವಣೂರು ತಾಲೂಕು ಕಡಕೋಳದಲ್ಲಿ ವಕ್ಫ್ ಗಲಾಟೆ ವಿಷಯವೇ ಇಲ್ಲ. ಗಲಾಟೆ ಯಾರು ಮಾಡಿದವರು? ಕಡಕೋಳದಲ್ಲಿ ಒಂದು ಎಂಟ್ರಿ ಆಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಎಂಟ್ರಿ ಆಗಿರಬಹುದು. ಆದರೆ ಕಡಕೋಳದಲ್ಲಿ ಒಂದೇ ಒಂದು ಎಂಟ್ರಿ ಆಗಿಲ್ಲ. ಅಲ್ಲಿ ಯಾವುದೂ ವಕ್ಪ್ ಅಂತ ಇನ್ನೂ ಎಂಟ್ರಿನೇ ಆಗಿಲ್ಲ. ಆದರೂ ಸುಮ್ಮನೆ ಸಮಸ್ಯೆ ಮಾಡುತ್ತೀರಿ ಅಂದರೆ ಎಂಥ ಮೂರ್ಖತನ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ವಕ್ಫ್ ಬೋರ್ಡ್ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ: ಇದು ರಾಜಕೀಯ ದುರುದ್ದೇಶ ಎಂದ ಸಿಎಂ
ನೋಟಿಸ್ ಕೊಟ್ಟರೆ ಎಂಟ್ರಿ ಆದ ಹಾಗೆ ಅಲ್ಲ. ಕಡಕೋಳದಲ್ಲಿ ಗಲಾಟೆ ಆಗಿರುವುದು ದುರಾದೃಷ್ಟಕರ. ಪಾಪ ಮುಸಲ್ಮಾನರನ್ನು ರಾತ್ರಿ ಒಕ್ಕಲೆಬ್ಬಿಸಿ ಮನೆಯಿಂದ ಓಡಿಸಿದಾರೆ. ಅವರು ಇನ್ನೂ ಊರಿಗೆ ಬಂದಿಲ್ಲ. ಬಹು ಸಂಖ್ಯಾತ ಹಿಂದುಗಳಿದ್ದರೆ ಮುಸ್ಲಿಂರಿಗೆ ಭಯ. ಮುಸಲ್ಮಾನರು ಬಹುಸಂಖ್ಯಾತರಿದ್ದಲ್ಲಿ ಹಿಂದೂಗಳಿಗೆ ಭಯ. ಈ ರೀತಿ ವಾತಾವರಣ ಸೃಷ್ಟಿ ಮಾಡುತ್ತಾ ಬರುತ್ತಿದ್ದಾರೆ. ಇದು ಬಹಳ ದುರದೃಷ್ಟಕರ. ಕಡಕೋಳ ಗ್ರಾಮದಲ್ಲಿ ಏನೂ ಆಗೆ ಇಲ್ಲ ಎಂದಿದ್ದಾರೆ.
ಸಚಿವರು ಶಿಗ್ಗಾವಿಗೆ ಬಂದಿರುವುದು ಹಣ ಹಂಚುವುದಕ್ಕೆ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅವರ ನಾಯಕರು ಬರುವುದು ಹಣ ಹಂಚುವುದಕ್ಕೆ ಬರ್ತಾರಾ? ನಮ್ಮ ನಾಯಕರು ಬರೋದು ಪ್ರಚಾರಕ್ಕೆ, ಆದರೆ ಅವರ ನಾಯಕರು ಹಣ ತರುತ್ತಿದ್ದರೆ ಗೊತ್ತಿಲ್ಲ. ಅಭಿವೃದ್ದಿ ಬಗ್ಗೆ ಅವರೂ ಹೇಳ್ತಾರೆ, ನಾವೂ ಹೇಳುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ವಕ್ಫ್ ವಿರುದ್ಧ ವಿಜಯಪುರದಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ
ವಕ್ಪ್ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಜಾಮದಾರ್ ಹೇಳಿರುವ ವಿಡಿಯೋ ಇದೆ ನೋಡಿದೆ. ಚುನಾವಣೆ ಸಂದರ್ಭದಲ್ಲಿ ಅಸ್ತ್ರ ಹುಟ್ಟಿಸ್ತಾರೆ, ಅವರ ನೂರು ಪಟ್ಟು ಮೀಡಿಯಾದವರು ಹುಟ್ಟಿಸ್ತಿರಿ. ವಕ್ಪ್ ಅಂತ ಎಂಟ್ರಿ ಆದರೆ ಟ್ರಿಬ್ಯುಬಲ್ ಇದೆ, ಅಲ್ಲಿ ಅಪೀಲ್ ಹಾಕಿದರೆ ಎಂಟ್ರಿ ಆಗಿರೋದು ಡಿಲೇಟ್ ಆಗುತ್ತೆ. ಕೇಂದ್ರದಲ್ಲಿ ವಕ್ಪ್ ಕಾನೂನು ಮರು ಪರಿಶೀಲನೆ ಮಾಡಲು ಹೋದಾಗ ಆ ಸಮಾಜದವರು ಒಂದು ಚಿಂತನೆಗೆ ಹೋಗಿರಬಹುದು. ಮುಸ್ಲಿಂ ರಾಜರು ಹಿಂದೂ ಮಠಗಳಿಗೂ ಆಸ್ತಿ ಕೊಟ್ಟಿದಾರೆ. ಅವೆಲ್ಲಾ ಸಿವಿಲ್ ಡಿಸ್ಪ್ಯೂಟ್. ಆದರೆ ಅದನ್ನು ಸಾರ್ವಜನಿಕವಾಗಿ ಬೀದಿ ನ್ಯಾಯ ಮಾಡಿದರು. ನಮ್ಮ ವರ್ಷನ್ ಹೇಳ್ತೀನಿ ಕೇಳಿ. ವಕ್ಪ್ ಆಸ್ತಿನೂ ಪರಿಶೀಲನೆ ಮಾಡಿದಾರೆ. ಗುಡಿ ಗುಂಡಾರಗಳ ಆಸ್ತಿನೂ ಪರಿಶೀಲನೆ ಮಾಡಿದ್ದಾರೆ. ಅದಕ್ಕೆಲ್ಲಾ ಕೋರ್ಟ್ ಇದೆ ಎಂದು ಹೇಳಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.