ಚುನಾವಣಾ ಆಯೋಗ ಸಮ್ಮತಿಸಿದರೆ ನಾಳೆಯೇ ಸಾರಿಗೆ ನೌಕರರ ವೇತನ ಹೆಚ್ಚಳ: ಲಕ್ಷ್ಮಣ ಸವದಿ

ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ಇಂದಿನ ಮಾತಿನ ಪ್ರಕಾರ ನೋಡಿದರೆ, ಚುನಾವಣಾ ಆಯೋಗ ಸಮ್ಮತಿಸಿದರೆ, ಸಾರಿಗೆ ನೌಕರರ ವೇತನ ಶೇ 10ರಷ್ಟು ಹೆಚ್ಚಳ ಸಾಧ್ಯತೆ ಕಂಡುಬಂದಿದೆ.

ಚುನಾವಣಾ ಆಯೋಗ ಸಮ್ಮತಿಸಿದರೆ ನಾಳೆಯೇ ಸಾರಿಗೆ ನೌಕರರ ವೇತನ ಹೆಚ್ಚಳ: ಲಕ್ಷ್ಮಣ ಸವದಿ
ಲಕ್ಷ್ಮಣ್​ ಸವದಿ
TV9kannada Web Team

| Edited By: ganapathi bhat

Apr 05, 2022 | 12:49 PM

ಬೆಂಗಳೂರು: ಚುನಾವಣಾ ಆಯೋಗ ಅನುಮತಿ ನೀಡಿದರೆ ನಾಳೆಯೇ ವೇತನ ಹೆಚ್ಚಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು (ಏಪ್ರಿಲ್ 5) ಬೆಂಗಳೂರಿನಲ್ಲಿ ಹೇಳಿಕೆ ನೀಡಿದರು. ಏಪ್ರಿಲ್​ 7ರಂದು ಕರೆ ಕೊಟ್ಟ ಮುಷ್ಕರ ಹಿಂಪಡೆಯಿರಿ ಎಂದು ಕೇಳಿಕೊಂಡರು. ಸಾರಿಗೆ ನೌಕರರಿಂದ ಪ್ರತಿಭಟನೆಗೆ ಕರೆ ಹಿನ್ನೆಲೆಯಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಮೇ 4ರ ನಂತರ ಸಂಬಳ ಹೆಚ್ಚಳ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ದಿಢೀರ್​ ಎಂದು ಸಾರಿಗೆ ನಿಲ್ಲಿಸಿದ್ರೆ ತೊಂದರೆ ಆಗಲಿದೆ. ವಿದ್ಯಾರ್ಥಿಗಳು, ಬಡವರು, ಶ್ರಮಿಕರಿಗೆ ಸಮಸ್ಯೆ ಆಗಲಿದೆ. 4 ದಿನ ಬಸ್​ ನಿಂತಾಗ ನಮಗೆ ₹ 7 ಕೋಟಿ ನಷ್ಟ ಆಗಿತ್ತು. ಇದೀಗ ದಿಢೀರ್​ ಎಂದು ಮತ್ತೆ ಬಸ್​ ನಿಲ್ಲಿಸಿದ್ರೆ ನಷ್ಟ. ಪ್ರತಿದಿನ ₹ 2 ರಿಂದ 2.5 ಕೋಟಿ ನಷ್ಟ ಉಂಟಾಗುತ್ತದೆ. ನಿಗಮಗಳನ್ನ ಮುಷ್ಕರ ಮಾಡಿ ಹಾನಿಗೊಳಿಸಬಾರದು. ಸರ್ಕಾರ ನಿಮ್ಮ ಪರವಾಗಿ ನಿಲ್ಲುತ್ತದೆ, ವಿರೋಧವಾಗಿ ಅಲ್ಲ. ಸರ್ಕಾರ ನಿಮ್ಮ ಯೋಚನೆಗಳಿಗೆ ವಿರೋಧವಾಗಿಲ್ಲ. ಅತ್ಯಂತ ಕಳಕಳಿಯಿಂದ ವಿನಂತಿ ಮಾಡಿಕೊಳ್ತೇನೆ. ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಮುಷ್ಕರ ಮುಂದೆ ಹಾಕಿ ಎಂದು ಸಚಿವ ಸವದಿ ಮನವಿ ಮಾಡಿಕೊಂಡರು.

ಡಿಸೆಂಬರ್​ನಲ್ಲಿ ದಿಢೀರ್​ ಮುಷ್ಕರದಿಂದ ರಾಜ್ಯಾದ್ಯಂತ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿತ್ತು. ಅಂದು ಟ್ರೇಡ್ ಯೂನಿಯನ್, ಸಾರಿಗೆ ಒಕ್ಕೂಟದ ಜತೆ ಚರ್ಚೆ ನಡೆಸಲಾಗಿತ್ತು. 9 ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರೆ ಸಾರಿಗೆ ನೌಕರರು ಮುಷ್ಕರ ಹಿಂಪಡೆಯುತ್ತೇವೆ ಅಂದಿದ್ದರು. ಈಗಾಗಲೇ 8 ಬೇಡಿಕೆ ಈಡೇರಿಸಿ ಆದೇಶ ಹೊರಡಿಸಿದ್ದೇವೆ ಎಂದು ಸಾರಿಗೆ ನೌಕರರಿಂದ ಪ್ರತಿಭಟನೆಗೆ ಕರೆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವದಿ ಹೇಳಿಕೆ ನೀಡಿದರು.

ಸಾರಿಗೆ ನೌಕರರ ಹಲವು ಬೇಡಿಕೆ ಈಡೇರಿಸಲಾಗಿದೆ ಕೊವಿಡ್​ನಿಂದ ಸಾರಿಗೆ ಸಿಬ್ಬಂದಿ ಮೃತಪಟ್ಟರೆ 30 ಲಕ್ಷ ವಿಮೆ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಮೆ ಹಾಗೂ ಹೆಚ್​ಆರ್​ಎಂಎಸ್​ ಜಾರಿಗೆ ತಂದಿದ್ದೇವೆ ಎಂದು ಬೆಂಗಳೂರಿನಲ್ಲಿ ಲಕ್ಷ್ಮಣ ಸವದಿ ತಿಳಿಸಿದರು. ಡಿಪೋಗಳಲ್ಲಿ ಮೇಲಧಿಕಾರಿಗಳ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಎನ್​ಐಎನ್​ಸಿ ಜಾರಿಗೆ ಒತ್ತಾಯಿಸಿದ್ದರು, ಜಾರಿಮಾಡಿದ್ದೇವೆ. ಶೇ 2ರಷ್ಟು ಅಂತರ್​ನಿಗಮ ವರ್ಗಾವಣೆಗೆ ತಾಂತ್ರಿಕ ತೊಂದರೆ ಇತ್ತು. ಅದಾಗ್ಯೂ ವರ್ಗಾವಣೆಗೆ ಅವಕಾಶ ನೀಡಿದ್ದೇವೆ ಎಂದು ಲಕ್ಷ್ಮಣ ಸವದಿ ಹೇಳಿಕೆ ನೀಡಿದರು.

ಕೊರೊನಾದಿಂದ ನಷ್ಟ ಉಂಟಾಗಿದೆ ಇಲಾಖೆ ನೌಕರರಿಗೆ ನೀಡುವ ತರಬೇತಿಯನ್ನು ಎರಡು ವರ್ಷ ಬದಲು ಒಂದು ವರ್ಷಕ್ಕೆ ಇಳಿಸಲು ಹಠ ಹಿಡಿದಿದ್ದರು. ಅದನ್ನೂ ಕೂಡ ನಾವು ಮಾಡಿದ್ದೇವೆ. 6ನೇ ವೇತನ ಆಯೋಗದ ಸಂಬಳ ನೀಡಬೇಕು ಎಂಬುದನ್ನು ಹೇಳಿದ್ದರು. ಹಣಕಾಸಿನ ಇತಿಮಿತಿಯೊಳಗೆ ನಾವು ಮುಂದೆ ನಿರ್ಧಾರ ಮಾಡ್ತೇವೆ ಅಂತ ಹೇಳಿದ್ದೆವು. ಪ್ರತಿನಿತ್ಯ ನಾಲ್ಕೂ ನಿಗಮದಲ್ಲಿ 65 ಲಕ್ಷ ಜನ ಸಂಚಾರ ಮಾಡ್ತಿದ್ದಾರೆ. ಕೊವಿಡ್​ಗೂ ಮೊದಲು 1 ಕೋಟಿಗೂ ಹೆಚ್ಚು ಮಂದಿ ಪ್ರಯಾಣ ಮಾಡ್ತಿದ್ರು. ಬಸ್ ಪ್ರಯಾಣದಲ್ಲಿ ಶೇ 35ರಷ್ಟು ಕೊರತೆ ಇದೆ. ಇಂಧನ ಮತ್ತು ವೇತನಕ್ಕೆ ₹ 1962 ಕೋಟಿ ಕೊರತೆ ಇದೆ. ಕೊರತೆ ಆಗಿರುವ ಹಣವನ್ನು ಮುಖ್ಯಮಂತ್ರಿಗೆ ವಿನಂತಿ ಮಾಡಿಕೊಂಡಾಗ ರಾಜ್ಯ ಸರ್ಕಾರದ ಬೊಕ್ಕಸದಿಂದ ಕೊಟ್ಟಿದ್ದಾರೆ. ಸಂಬಳವನ್ನು ಕಡಿತ ಮಾಡದೇ ನಾವು ನೌಕರರಿಗೆ ನೀಡಿದ್ದೇವೆ. ಸಂಬಳ ಜಾಸ್ತಿ ಮಾಡುವ ಬೇಡಿಕೆಗೆ ಹಣಕಾಸಿನ ತೊಂದರೆ ಇದ್ದಾಗ್ಲೂ ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ. ಆದರೆ ಇದಕ್ಕೆ ಬಂದಿರುವ ತೊಂದರೆ ಸಾಕಷ್ಟಿದೆ ಎಂದು ವಿವರಿಸಿದರು.

ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟರೆ ಸಂಬಳ ಹೆಚ್ಚಳ ಮಾಡೆಲ್ ಕೋಡ್ ಆಫ್ ಕಂಡಕ್ಟ್ ರಾಜ್ಯದಲ್ಲಿ ಜಾರಿಯಲ್ಲಿದೆ. ಬೆಳಗಾವಿ, ಬೀದರ್, ರಾಯಚೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಅಡ್ಡಿ ಬಂದಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದ್ದೇವೆ. ಕೇಂದ್ರಚುನಾವಣಾ ಆಯೋಗ ನಮಗೆ ಮುಕ್ತ ಅವಕಾಶ ಮಾಡಿಕೊಟ್ಟರೆ ಸಂಬಳ ಹೆಚ್ಚಳ ಮಾಡುವ ನಿರ್ಣಯಕ್ಕೆ ಮುಂದುವರೆಯಬಹುದು ಎಂದು ಹೇಳಿದರು.

ಈಗಾಗಲೇ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಜೊತೆಗೆ ಮಾತುಕತೆ ಸಭೆ ನಡೆಸಿದ್ದೇವೆ. ಕೊರೊನಾ ಎರಡನೇ ಅಲೆ ಹೆಚ್ಚಾಗ್ತಿದೆ. ನಮ್ಮಲ್ಲೂ ಪ್ರತಿದಿನ 4 ಸಾವಿರ ಕೇಸ್ ಬರ್ತಿದೆ. ಕೊವಿಡ್ ಹೆಚ್ಚಳದಿಂದ ಮತ್ತೆ ಶೇ 5ರಷ್ಟು ಪ್ರಯಾಣಿಕರ ಕೊರತೆ ಆಗ್ತಿದೆ. ನಾಲ್ಕೂ ನಿಗಮಗಳಲ್ಲಿ ₹ 3200 ಕೋಟಿ ಹಾನಿ ಆಗ್ತಿದೆ. ಇಷ್ಟಿದ್ದಾಗಲೂ ಸಿಬ್ಬಂದಿಗೆ ಸಂಬಳ ಹೆಚ್ಚಳ ಮಾಡಿದ್ರೆ ಇನ್ನಷ್ಟು ಹೊರೆ ಆಗುತ್ತದೆ. ಬೇಡಿಕೆ ಸ್ಬಲ್ಪ ಮಟ್ಟಿಗಾದ್ರೂ ಈಡೇರಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸವದಿ ತಿಳಿಸಿದರು.

ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ಇಂದಿನ ಮಾತಿನ ಪ್ರಕಾರ ನೋಡಿದರೆ, ಚುನಾವಣಾ ಆಯೋಗ ಸಮ್ಮತಿಸಿದರೆ, ಸಾರಿಗೆ ನೌಕರರ ವೇತನ ಶೇ 10ರಷ್ಟು ಹೆಚ್ಚಳ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ: 9 ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಧರಣಿ: 7 ದಿನ ನಡೆಯುವ ವಿಭಿನ್ನ ಪ್ರತಿಭಟನೆಯ ಪಟ್ಟಿ ಇಲ್ಲಿದೆ

ಇದನ್ನೂ ಓದಿ: ಸಾರಿಗೆ ಸಚಿವರ ಪ್ರಕಟಣೆಗೆ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ; ಬೇಡಿಕೆ ಈಡೇರಿಸದಿದ್ದರೆ ಏ.7ರಂದು ಸಾರಿಗೆ ಸೇವೆ ಬಂದ್​

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada