ಬೆಂಗಳೂರು ಫೋಷಾ ಆಸ್ಪತ್ರೆಯಲ್ಲಿ ವೈದ್ಯರ ಕಳ್ಳಾಟ; ಸರ್ಕಾರಿ ಆಸ್ಪತ್ರೆಯ ಬಹುದೊಡ್ಡ ಭ್ರಷ್ಟಾಚಾರ ಬಯಲು
ಫೋಷಾ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ದೀಪಿಕಾ, ಸ್ತ್ರೀರೋಗ ತಜ್ಞೆ ಡಾ. ರಮ್ಯ, ಸ್ಟಾಪ್ ನರ್ಸ್ ಸೇರಿದಂತೆ ಕೆಲವು ಸಿಬ್ಬಂದಿ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದು ತನಿಖೆಯಲ್ಲಿ ದೃಢವಾಗಿದೆ. ಈ ಹಿನ್ನಲೆ ಇಲಾಖೆ ಸಮಿತಿ ಕೈಗೊಂಡ ತನಿಖೆಯಲ್ಲಿ ಹಣಕಾಸಿನ ಅವ್ಯವಹಾರ ಸೇರಿ ವಿವಿಧ ಆರೋಪಗಳು ಸಾಬೀತಾಗಿದ್ದು, ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 30: ಶಿವಾಜಿನಗರದಲ್ಲಿರುವ (Shivajinagar) ಸರ್ಕಾರಿ ಎಚ್.ಎಸ್.ಐ.ಎಸ್ ಘೋಷಾ ಆಸ್ಪತ್ರೆಯಲ್ಲಿ ಪ್ರತಿದಿನ 25 ರಿಂದ 30 ಹೆರಿಗೆ ಮಾಡಲಾಗುತ್ತದೆ. ದಿನ ನಿತ್ಯ 350 ರಿಂದ 400 ಕ್ಕೂ ಹೆಚ್ಚು ರೋಗಿಗಳು ಒಪಿಡಿಗೆ ಬರತ್ತಾರೆ. ಆದರೆ ಇದೇ ಆಸ್ಪತ್ರೆಯಲ್ಲಿ ಈಗ ವೈದ್ಯರ ಅಕ್ರಮವೊಂದು ಬಯಲಾಗಿದೆ. ಅಕ್ರಮ ಗರ್ಭಪಾತ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ, ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದು ಸಾಬೀತಾಗಿದೆ.
ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅಕ್ರಮಗಳೇನು?
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಫೋಷಾ ಆಸ್ಪತ್ರೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ದೀಪಿಕಾ, ಸ್ತ್ರೀರೋಗ ತಜ್ಞೆ ಡಾ. ರಮ್ಯ, ಸ್ಟಾಪ್ ನರ್ಸ್ ಸೇರಿದಂತೆ ಕೆಲವು ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾಲು ಸಾಲು ಅಕ್ರಮಗಳನ್ನು ಮಾಡಿರುವುದು ಬಯಲಾಗಿದೆ. ವೈದ್ಯಕೀಯ ಉಪಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿರುವುದು ತನಿಖೆಯಲ್ಲಿ ದೃಢವಾಗಿದೆ.
ರೋಗಿಗಳಿಂದ ಯುಪಿಐ ಆಧಾರಿತ ಆ್ಯಪ್‌ಗಳ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಡಾ. ದೀಪಿಕಾ ಹಾಗೂ ಡಾ ರಮ್ಯಾ ಕೆಲವು ಸಿಬ್ಬಂದಿ ವಿರುದ್ಧ ಅಕ್ರಮ ಗರ್ಭಪಾತ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ, ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ, ಸಹ ಪ್ರಸೂತಿ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಿರುಕುಳದ ಬಗ್ಗೆ ಫೋಷಾ ಆಸ್ಪತ್ರೆಯ ಸಿಬ್ಬಂದಿ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಗಸ್ಟ್ 8ರಂದು ತನಿಖಾ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಇದೇ 18ರಂದು ವರದಿ ನೀಡಿದೆ. ಈ ವರದಿಯಲ್ಲಿ ವೈದ್ಯರ ಅಕ್ರಮ ಗರ್ಭಪಾತ, ಗರ್ಭಾಶಯದ ಅನಗತ್ಯ ಶಸ್ತ್ರಚಿಕಿತ್ಸೆ, ವೈದ್ಯಕೀಯ ನಿರ್ಲಕ್ಷ್ಯ, ಭ್ರಷ್ಟಾಚಾರ ಕಂಡು ಬಂದಿದೆ. ಈ ಹಿನ್ನಲೆ ಇಲಾಖೆ ಸಮಿತಿ ಕೈಗೊಂಡ ತನಿಖೆಯಲ್ಲಿ ಹಣಕಾಸಿನ ಅವ್ಯವಹಾರ ಸೇರಿ ವಿವಿಧ ಆರೋಪಗಳು ದೃಢಪಟ್ಟಿವೆ.
ಇದನ್ನೂ ಓದಿ ರಾಯಚೂರು: ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಆಸ್ಪತ್ರೆ
ತನಿಖೆಯಲ್ಲಿ ಕಂಡು ಬಂದ ಅಂಶಗಳು ಏನು?
- ತಾಯಂದಿತ ಆರೋಗ್ಯಕ್ಕೆ ಸಂಬಂಧಿಸಿದ ಮಾರ್ಗಸೂಚಿ ಅನುಷ್ಠಾನ ಮಾಡದಿರುವುದು
- ಸಿಸೇರಿಯನ್ ಬಗ್ಗೆ ಆಡಿಟ್ ನಡೆಸದಿರುವುದು
- ಅಕ್ರಮವಾಗಿ ಗರ್ಭಪಾತ ನಡೆಸಿರುವುದು
- ಗರ್ಭಾಶಯದ ಅನಗತ್ಯ ಶಸ್ತ್ರ ಚಿಕಿತ್ಸೆ ನಡೆಸಿರುವುದು
- ವೈದ್ಯಕೀಯ ನಿರ್ಲಕ್ಷ್ಯವಹಿಸಿರುವುದು
- ಭ್ರಷ್ಟಚಾರ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿರುವುದು
- ಸಹ ಪ್ರಸೂತಿ ತಜ್ಞರು ಹಾಗೂ ಸ್ನಾತಕ್ಕೋತರ ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟಿರುವುದು
- ಅಕ್ರಮದಲ್ಲಿ ಆಸ್ಪತ್ರೆ ಶುಶ್ರೂಷಾಧಿಕಾರಿ ಭಾಗಿ
- ರೋಗಿಗಳಿಂದ ಹಣ ಪಡೆದು ದೀಪಿಕಾ ವರ್ಗಾವಣೆ ಮಾಡಿರುವುದು
- ಅನನುಭವಿಗಳು ಹೆರಿಗೆ ಪ್ರಕಣಗಳನ್ನು ನಿರ್ವಹಣೆ ಮಾಡಿರುವುದು ಬೆಳಕಿಗೆ
- 29 ವರ್ಷದ ಬಾಣಂತಿ ಸಾವಿಗೆ ನಿರ್ಲಕ್ಷ್ಯವೇ ಕಾರಣ
ಸಿಬ್ಬಂದಿಗಳ ಅಮಾನತು
H.S.I.S. ಘೋಷ ಆಸ್ಪತ್ರೆಯ ವೈದ್ಯರು ಕೆಲ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದ ಹಿನ್ನಲೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅಕ್ರಮದಲ್ಲಿ ಭಾಗಿಯಾಗಿರುವುದೂ ಕಂಡುಬಂದಿದೆ. ಡಾ. ದೀಪಿಕಾ, ಡಾ. ರಮ್ಯಾ ಸೇರಿದಂತೆ ಕೆಲವು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಸಿದ್ದಾರೆ.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಮಾತನಾಡಿ, ಅಕ್ರಮದ ದೂರು ಬಂದ ಮೇಲೆ ವಾಣಿ ವಿಲಾಸ್ ಆಸ್ಪತ್ರೆ ವೈದ್ಯಕೀಯ ಅಧಿಶಿಕ್ಷಕಿ ಡಾ ಸವೀತಾ, ಹಾಗೂ ಡಿಡಿ ರಾಜಕುಮಾರ್ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ವರದಿಯಲ್ಲಿ ಕೆಲವು ಲೋಪ ದೋಷ ಕಂಡುಬಂದಿವೆ. ಪ್ರಾಥಮಿಕ ವರದಿಯಲ್ಲಿ ಕೆಲವು ಲೋಪ ದೋಷ ಬೆಳಕಿಗೆ ಬಂದಿದೆ ಈ ಹಿನ್ನಲೆ ಡಾ ದೀಪಿಕಾ , ರಮ್ಯಾ ಸೇರಿದ್ದಂತೆ ಐದು ಜನ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಹೆಚ್ಚಿನ ತನಿಖೆಗೂ ಮುಂದಾಗಿದ್ದೇವೆ ಎಂದಿದ್ದಾರೆ. ಬಡ ರೋಗಿಗಳಿಂದ ಅಕ್ರಮ ಸುಲಿಗೆ ಜೊತೆ ಕಾನೂನುಬಾಹಿರವಾಗಿ ಅಕ್ರಮ ಗರ್ಭಪಾತ, ಸಿಜೇರಿಯನ್ ಮಾಡುತ್ತಿರುವುದು ಕಂಡುಬಂದಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಮತಷ್ಟು ಆಸ್ಪತ್ರೆ ಭ್ರಷ್ಟ ಸಿಬ್ಬಂದಿ ಹೊರ ಬೀಳುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 am, Tue, 30 September 25



