ಅಳಿವಿನಂಚಿನಲ್ಲಿರುವ ಗ್ರಾಮೀಣ ಆಟದ ಪ್ರದರ್ಶನ; ಹಾಸನ ಜಿಲ್ಲೆಯ ಶಾಲೆಯ ಬೆಳ್ಳಿ ಹಬ್ಬದಲ್ಲಿ ಮಕ್ಕಳಾದ ಪೋಷಕರು!

ಸೈಕಲ್ ಬಂಡಿ ಆಟ, ಚಿನ್ನಿದಾಂಡು ಆಟದ ಜೊತೆಗೆ ಕುಂಟೆಬಿಲ್ಲೆ, ಗೋಣಿ ಚೀಲದೊಳಗೆ ಕಾಲಿಟ್ಟು ಕುಪ್ಪಳಿಸಿ ಓಡಿ ಗುರಿಮುಟ್ಟುವುದು, ಅಳಗುಲಿ ಮಣೆ ಆಟ, ಒಡೆದ ಗಾಜಿನ ಚೂರುಗಳನ್ನ ಬಳಸಿ ಸರಮಾಡುವುದು ಹೀಗೆ ಹಲವು ತಮಾಷೆಯ ಆಟವನ್ನು ಪೋಷಕರು ಆಡಿದರು.

ಅಳಿವಿನಂಚಿನಲ್ಲಿರುವ ಗ್ರಾಮೀಣ ಆಟದ ಪ್ರದರ್ಶನ; ಹಾಸನ ಜಿಲ್ಲೆಯ ಶಾಲೆಯ ಬೆಳ್ಳಿ ಹಬ್ಬದಲ್ಲಿ ಮಕ್ಕಳಾದ ಪೋಷಕರು!
ಗ್ರಾಮೀಣ ಆಟಗಳನ್ನು ಆಡುತ್ತಿರುವ ಪೋಷಕರು
Follow us
preethi shettigar
| Updated By: ganapathi bhat

Updated on: Mar 31, 2021 | 4:54 PM

ಹಾಸನ: ಶಾಲಾ ಬೆಳ್ಳಿ ಹಬ್ಬದ ಅಂಗವಾಗಿ ನಡೆದ ವಿಶಿಷ್ಟ ಹಳ್ಳಿ ಹಬ್ಬದಲ್ಲಿ ಪುಟ್ಟ ಪುಟ್ಟ ಮಕ್ಕಳೆಲ್ಲ ಪ್ರೇಕ್ಷಕರಾಗಿದ್ದು, ಮಕ್ಕಳ ಪೋಷಕರೆಲ್ಲಾ ಪುಟ್ಟ ಮಕ್ಕಳಾಗಿಬಿಟ್ಟಿದ್ದರು. ಮೈದಾನದಲ್ಲಿ ಕುಂಟೆಬಿಲ್ಲೆ, ಸೈಕಲ್ ಬಂಡಿ, ಕುಪ್ಪಳಿಸುವ ಆಟ, ಚಿನ್ನಿದಾಂಡು ಹೀಗೆ ಅಳಿವಿನಂಚಿನಲ್ಲಿರುವ ಹಳ್ಳಿ ಸೊಗಡಿನ ಆಟಗಳನ್ನ ಆಡಿ ನಲಿದು ಸಂಭ್ರಮಿಸಿದ ಪೋಷಕರು, ದಿನವಿಡೀ ಉಳಿದೆಲ್ಲಾ ಕೆಲಸ ಮರೆತು ಮಕ್ಕಳ ಜೊತೆಗೆ ಮಕ್ಕಳಾಗಿ ಬೆರೆತು ಖುಷಿಯ ಅಲೆಯಲ್ಲಿ ತೇಲಿದರು.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮೈತ್ರಿ ಕಾನ್ವೆಂಟ್ ಮೈದಾನದಲ್ಲಿ ನಡೆದ ಹಳ್ಳಿ ಆಟಗಳು, ಶಾಲೆಯ ಮಕ್ಕಳ ಪೋಷಕರನ್ನು ಪುಟ್ಟ ಮಕ್ಕಳಾಗುವಂತೆ ಮಾಡಿತ್ತು. ಶಾಲೆಯ 25 ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪೋಷಕರಿಗಾಗಿ ಆಯೋಜನೆಗೊಂಡಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗಿಯಾಗಿ ಆಟ ಆಡಿ ನಲಿದು ಸಂಭ್ರಮಿಸಿದರು.

ಟ್ರ್ಯಾಕ್​ನಲ್ಲಿ ಸೈಕಲ್ ಟಯರ್ ಓಡಿಸಿ ದಶಕಗಳ ಹಿಂದೆ ಪುಟ್ಟ ಮಕ್ಕಳಾಗಿದ್ದಾಗ ತಾವು ಆಡಿದ ಹಳ್ಳಿ ಆಟದ ದಿನಗಳನ್ನು ಪುರುಷರು ಮೆಲುಕು ಹಾಕಿದರೆ, ನಾವು ಯಾರ್ಗು ಕಮ್ಮಿ ಇಲ್ಲ ಎನ್ನುವಂತೆ ಮಹಿಳೆಯರೂ ಕೂಡ ಸೈಕಲ್ ಬಂಡಿ ಆಟವಾಡಿ ಖುಷಿಪಟ್ಟರು. ಇನ್ನು ಮಹಿಳೆಯರಿಗಾಗಿಯೇ ಇದ್ದ ಕುಂಟೆಬಿಲ್ಲೆ ಆಟದಲ್ಲಂತೂ ಮಹಿಳೆಯರು ಕುಪ್ಪಳಿಸಿ ಕುಪ್ಪಳಿಸಿ ನೆಗೆಯುತ್ತಾ ಮಕ್ಕಳಂತೆ ಆಡಿ ಸಂಭ್ರಮಿಸಿದರು. ಆಟ ತಪ್ಪಿ ಹೋದಾಗ ನೆರೆದಿದ್ದವರು ಕಾಲೆಳೆಯುವುದು, ಚಪ್ಪಾಳೆ ಮೂಲಕ ಹುರಿದುಂಬಿಸುವುದು ಹೀಗೆ ಆಟದ ಸವಿಯನ್ನು ಸವಿದ ಹಳ್ಳಿಗರು ಮರೆಯಾಗುತ್ತಿರುವ ಗ್ರಾಮೀಣ ಸೊಬಗಿನ ಆಟಗಳನ್ನ ಮತ್ತೆ ನೆನೆದರು.

school festival

ಮೈತ್ರಿ ಕಾನ್ವೆಂಟ್ ಶಾಲೆಯ ದೃಶ್ಯ

ಜನರ ಕೈಗೆ ಮೊಬೈಲ್ ಬರುತ್ತಲೇ ಮೈದಾನದಲ್ಲಿ ಆಡುವ ಆಟಗಳು ಮರೆಯಾಗಿದ್ದು, ಮತ್ತೊಂದೆಡೆ ಅಬ್ಬರದ ಕ್ರಿಕೆಟ್​ನಂತಹ ಆಟಗಳಿಂದ ಗ್ರಾಮೀಣ ಕ್ರೀಡೆಗಳು ಮೂಲೆಗೆ ಸರಿದು ಹೋಗಿದ್ದವು. ಹಾಗಾಗಿಯೇ ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕು, ಮನೋರಂಜನೆ ಜೊತೆಗೆ ದೇಹದ ಆಲಸ್ಯ ದೂರಮಾಡಿ, ಮಾನಸಿಕ ನೆಮ್ಮದಿ ನೀಡುತ್ತಿದ್ದ ಹಳ್ಳಿಗರ ಜಾನಪದ ಆಟಗಳನ್ನ ಪ್ರೋತ್ಸಾಹಿಸಬೇಕು ಎನ್ನುವ ನಿಟ್ಟಿನಲ್ಲಿ ಆಯೋಜನೆಗೊಂಡಿದ್ದ ಗ್ರಾಮೀಣ ಕ್ರೀಡಾಕೂಟ ಇದಾಗಿತ್ತು. ಸೈಕಲ್ ಬಂಡಿ ಆಟ, ಚಿನ್ನಿದಾಂಡು ಆಟದ ಜೊತೆಗೆ ಕುಂಟೆಬಿಲ್ಲೆ, ಗೋಣಿ ಚೀಲದೊಳಗೆ ಕಾಲಿಟ್ಟು ಕುಪ್ಪಳಿಸಿ ಓಡಿ ಗುರಿಮುಟ್ಟುವುದು, ಅಳಗುಲಿ ಮಣೆ ಆಟ, ಒಡೆದ ಗಾಜಿನ ಚೂರುಗಳನ್ನ ಬಳಸಿ ಸರಮಾಡುವುದು ಹೀಗೆ ಹಲವು ತಮಾಷೆಯ ಆಟವನ್ನು ಆಡಿದರು.

school festival

ಅಳಗುಲಿ ಮಣೆ ಆಟ ಆಡುತ್ತಿರುವ ಪೋಷಕರು

ಕೈಗೊಂದು ಮೊಬೈಲ್ ಸಿಗುತ್ತಲೇ ಫೆಸ್​ಬುಕ್, ವಾಟ್ಸಾಪ್, ಲೂಡೋ ಗೇಮ್, ಪಬ್ಜಿ ಅಂತೆಲ್ಲಾ ಕೂತಲ್ಲೆ ನಾನಾ ರೋಗಗಳನ್ನ ಮೈಗಂಟಿಸಿಕೊಂಡು ನರಳಾಡುವ ಈ ಕಾಲದಲ್ಲಿ ಹಳ್ಳಿ ಆಟಗಳ ಮೂಲಕ ದೇಹ ಮನಸ್ಸಿಗೆ ಮುದ ನೀಡುವ ಗ್ರಾಮೀಣ ಸೊಗಡಿನ ಆಟಗಳನ್ನ ಮುನ್ನೆಲೆಗೆ ತರಲೆಂದು ನಡೆಯುತ್ತಿರುವ ಇಂತಹ ಪ್ರಯತ್ನಕ್ಕೆ ಜನರ ಸ್ಪಂದನೆಯೂ ಇದೆ ಎನ್ನವುದು ವಿಶೇಷ.

ಇದನ್ನೂ ಓದಿ:

ಹಣದಾಸೆಗೆ ಯದ್ವತದ್ವಾ ಪ್ರಯಾಣಿಕರನ್ನ ತುಂಬುತ್ತಿರುವ ಅಪೇ ಆಟೋಗಳಿಂದ ಕೊರೊನಾ ಭೀತಿ

ಮಹಿಳಾ ದಿನಾಚರಣೆ 2021: ‘ಕ್ರೀಡೆಯಲ್ಲಿ ಸಾಧನೆ ಸುಲಭವಲ್ಲ..‘ ಅಂತರಾಷ್ಟ್ರೀಯ ಹೈಜಂಪ್​ ಕ್ರೀಡಾಪಟು ಸಹನಾಕುಮಾರಿ ಮನದಾಳ