ಅನಿವಾರ್ಯವಾಗಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ: ಚನ್ನಪಟ್ಟಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಮನಗರ ಅಭಿವೃದ್ಧಿ ಮಾಡಿದ್ದು ನಾನು ಮತ್ತು ಹೆಚ್ಡಿ ದೇವೇಗೌಡರು. ಇವರು ಅಣ್ಣ ತಮ್ಮ ಬಂದು ಏನ್ ಮಾಡಿದರು ಎಂದು ಕಿಡಿಕಾರಿದ್ದಾರೆ. ಅಲ್ಲಿ ಟೊಯೋಟಾ ಫ್ಯಾಕ್ಟರಿ ಮಾಡಿದ್ದು ನಾನು, ದೇವೇಗೌಡರು. ಇವರು ಅಲ್ಲಿ ಕಲ್ಲು ಹೊಡೆದುಕೊಂಡು ಕೂತಿರುವ ಗಿರಾಕಿಗಳು ಎಂದು ವಾಗ್ದಾಳಿ ಮಾಡಿದ್ದಾರೆ.
ರಾಮನಗರ, ಜೂನ್ 23: ನಾನು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಾರದು ಅಂತಾ ಇದ್ದೆ, ಆದರೆ ಅನಿವಾರ್ಯವಾಗಿ ನಾನು ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಸಿಎಂ ಆಗಿದ್ದಾಗ 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದೇನೆ. ಚನ್ನಪಟ್ಟಣವನ್ನು ಬದುಕಿರುವವರೆಗೂ ನಾನು ಮರೆಯುವುದಿಲ್ಲ. ಈಗಾಗಲೇ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಕೇಂದ್ರ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸ ಮಾಡುತ್ತಾನೆ ಅಂತಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದರು.
ರಾಮನಗರ ಅಭಿವೃದ್ಧಿ ಮಾಡಿದ್ದು ನಾನು ಮತ್ತು ಹೆಚ್ಡಿ ದೇವೇಗೌಡರು. ಇವರು ಅಣ್ಣ ತಮ್ಮ ಬಂದು ಏನ್ ಮಾಡಿದರು ಎಂದು ಡಿಕೆ ಬ್ರದರ್ಸ್ ವಿರುದ್ಧ ಕಿಡಿಕಾರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ರೇಷ್ಮೆ ಮಾರುಕಟ್ಟೆ ಮಾಡಿಸಿದೆ. ರೈತರಿಗಾಗಿ ಮ್ಯಾಂಗೋ ಯೂನಿಟ್ ಸ್ಥಾಪನೆ ಮಾಡಿದ್ದೆ. ರಾಜೀವ್ ಗಾಂಧಿ ಆಸ್ಪತ್ರೆ ಇಲ್ಲಿ ಮಾಡಿಸಲು ಪ್ರಯತ್ನಿಸಿದೆ. ಇವತ್ತು ನಿದ್ದೆಗಟ್ಟಿದ್ದಾರೆ. ಇಂತಹ 10 ಜನ ಹುಟ್ಟಿ ಬಂದ್ದರು ಏನು ಮಾಡೋಕೆ ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಅಲ್ಲಿ ಟೊಯೋಟಾ ಫ್ಯಾಕ್ಟರಿ ಮಾಡಿದ್ದು ನಾನು, ದೇವೇಗೌಡರು. ಇವರು ಅಲ್ಲಿ ಕಲ್ಲು ಹೊಡೆದುಕೊಂಡು ಕೂತಿರುವ ಗಿರಾಕಿಗಳು. ಅವರು ಯಾವ ಮಟ್ಟಕ್ಕೆ ದುಡ್ಡು ಖರ್ಚು ಮಾಡಬೇಕು ಮಾಡುತ್ತಾರೆ ಎಂದಿದ್ದಾರೆ.
ದೇಶದ ದೃಷ್ಟಿಯಿಂದ ನಾನು, ಸಿ.ಪಿ.ಯೋಗೇಶ್ವರ್ ಒಂದಾಗಿದ್ದೇವೆ
ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಯಾವ ಒಡಕಿಲ್ಲ. ಸಿಪಿ ಯೋಗೇಶ್ವರ್ ಅಭ್ಯರ್ಥಿ ಆಗಬಹುದು, ಜೆಡಿಎಸ್ನವರೇ ನಿಲ್ಲಬಹುದು. ನಮ್ಮಲ್ಲಿ ಯಾವುದೇ ಒಡಕಿಲ್ಲ. ದೇಶದ ದೃಷ್ಟಿಯಿಂದ ನಾನು, ಸಿ.ಪಿ.ಯೋಗೇಶ್ವರ್ ಒಂದಾಗಿದ್ದೇವೆ. ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸಿಲ್ಲ. ಮೂರು ಬಾರಿ ನನಗೆ ಶಸ್ತ್ರಚಿಕಿತ್ಸೆ ಆಗಿದೆ. ಅದರ ನಡುವೆಯೂ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿದ್ದೇನೆ ಎಂದರು.
ಇದನ್ನೂ ಓದಿ: ಕೇಂದ್ರದ ಒಪ್ಪಿಗೆ ನಂತರವೂ ಬಳ್ಳಾರಿ ದೇವದಾರಿ ಬೆಟ್ಟದಲ್ಲಿ ಗಣಿಗಾರಿಕೆಗೆ ರಾಜ್ಯ ತಡೆ, ಹೆಚ್ಡಿಕೆಗೆ ಹಿನ್ನಡೆ
ಕುಮಾರಣ್ಣ ಕೃಷಿ ಮಂತ್ರಿ ಆಗ್ತಾರೆ ಅಂತಾ ಆಸೆ ಇಟ್ಟುಕೊಂಡಿದ್ರಿ, ಜನರ ನಿರೀಕ್ಷೆ ನೋಡಿ ಭಯ ಆಗುತ್ತೆ. ಸಚಿವರು ಯಾವತ್ತಾದ್ರೂ ನಿಮ್ಮ ಸಮಸ್ಯೆ ಏನು ಅಂತಾ ಬಂದಿದ್ರಾ? ಈಗ ದೇವಸ್ಥಾನ ಸುತ್ತಿ ಏನೋ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ನಾನು ಯಾವತ್ತೂ ಕೆಡಿಪಿ ಸಭೆ ಮಾಡಿಲ್ಲ ಅಂತಾ ಸಭೆ ಮಾಡಿದ್ದಾರೆ. ಎಲ್ಲರನ್ನೂ ಒಳಗೆ ಕರೆಸಿಕೊಂಡು ನಾನು ಸಭೆ ಮಾಡಿದ್ದೆ. ಮೊನ್ನೆಯ ಸಭೆಯಲ್ಲಿ ಅಧಿಕಾರಿಗಳ ಮೊಬೈಲ್ ಕೂಡ ಬಿಟ್ಟಿಲ್ಲವಂತೆ.
ಅಧಿಕಾರಿಗಳಿಗೆ ಕೇಳ್ತೇನೆ, ಈ ಗುಲಾಮಗಿರಿ ಎಷ್ಟ ದಿನ ನಡೆಸುತ್ತೀರಿ. ಗ್ರಾಮದಿಂದ ಜನ ಖಾತೆ ಮಾಡಿಸಿಕೊಳ್ಳೋದಕ್ಕೆ ಬಂದ್ದರೆ ಹಣ ವಸೂಲಿ ಮಾಡುತ್ತೀರಿ. ಈಗ ಅವರ ಗುಟುರಿಗೆ ಹೆದರಿ ನಿಂತಿದ್ದೀರಿ. ಚನ್ನಪಟ್ಟಣ ತಾಲೂಕಿನ 61 ಕೋಟಿ ರೂ. ಬರಬೇಕು. ಮೊದಲು ಈ ದುಡ್ಡು ಕೊಟ್ಟ ಬಿಡಪ್ಪ. ಆಮೇಲೆ ಈ ವಿಧವಾವೇತನ ಕೊಡು ಎಂದಿದ್ದಾರೆ.
ಇದನ್ನೂ ಓದಿ: ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಮತ್ತೊಮ್ಮೆ ಅಸಹನೆ, ಸಿಡುಕುತನ ಪ್ರದರ್ಶಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ
ಮುಸ್ಲಿಂ ಓಟ್ 7 ಸಾವಿರ ಹೆಚ್ಚಿಸಬೇಕಂತೆ. ರಾಮನಗರ ಚನ್ನಪಟ್ಟಣ ಮಧ್ಯೆ ರೇಷ್ಮೆ ಮಾರುಕಟ್ಟೆ ಮಾಡಲು ಹೋದಾಗ ದೇವೆಗೌಡರು ಮುಸ್ಲಿಂ ಜನರಿಗೆ ಯಾವ ರೀತಿ ಗೌರವ ಕೊಟ್ಟರು. ರಾಮನಗರ ಮುಸ್ಲಿಂ ಮುಖಂಡರಿಗೆ ಕೆಳುತ್ತೇನೆ, ನಿಮ್ಮ ಯೋಗ್ಯತೆ ಏನಿತ್ತು ಮೊದಲು, ಯಾವ ರೀತಿ ಇದ್ರಿ ನೀವು. ತಿಂದ ಅನ್ನ ಕಕ್ಕುವ ಪರಿಸ್ಥಿತಿ ಇತ್ತು. ಆ ರೀತಿ ಅಲ್ಲಿ ಮುಖ ಮುಚ್ಕೊಂಡು ಓಡಾಡಬೇಕಿತ್ತು. ಕ್ಷಮಿಸಿ ಬಹಳ ಮಾತಾಡಿದ್ದೇನೆ, ನನಗಾದ ನೋವಿನಿಂದ ಮಾತಾಡಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.