ರೋಚಕ ಕಾರ್ಯಾಚರಣೆ ಹೊರತಾಗಿಯೂ ತುಂಗಭದ್ರಾ ಡ್ಯಾಂಗೆ ಸ್ಟಾಪ್‌ಲ್ಯಾಗ್ ಗೇಟ್ ಅಳವಡಿಸಲು ಅಡ್ಡಿ
ತುಂಗಭದ್ರಾ ಡ್ಯಾಂನ ಕೊಚ್ಚಿ ಹೋಗಿರುವ ಕ್ರಸ್ಟ್ಗೇಟ್ ಜಾಗಕ್ಕೆ ಸ್ಟಾಪ್‌ಲ್ಯಾಗ್ ಗೇಟ್ ಅಳವಡಿಸಲು ಕಸರತ್ತು ನಡೆದಿದೆ. ಕಠಿಣ ಸವಾಲನ್ನು ಮೆಟ್ಟಿ ನಿಂತು ನೀರಲ್ಲಿ ಮುಳುಗಿ ಕಾರ್ಯಾಚರಣೆ ನಡೆಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಜನ ಶುಭ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಸ್ಟಾಪ್‌ಲ್ಯಾಗ್ ಗೇಟ್ ಎಂದರೇನು? ಇದರ ಅಳವಡಿಕೆ ಹೇಗೆ ನಡೆಯುತ್ತದೆ? ಗುರುವಾರದ ಕಾರ್ಯಾಚರಣೆಯಲ್ಲಿ ಏನೇನಾಯ್ತು ಎಂಬ ಮಾಹಿತಿ ಇಲ್ಲಿದೆ.
ಕೊಪ್ಪಳ, ಬಳ್ಳಾರಿ, ಆಗಸ್ಟ್ 16: ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪಾಲಾಗಿದೆ. ಕ್ಷಣ ಕ್ಷಣವೂ ಅಪಾರ ನೀರು ಪೋಲಾಗುತ್ತಿದೆ. ಹೊಸ ಸ್ಟಾಪ್‌ಲ್ಯಾಗ್ ಗೇಟ್ ಅಳವಡಿಸಲು ತಜ್ಞರು ಹರಸಾಹಸ ಪಡುತ್ತಿದ್ದಾರೆ. ಗುರುವಾರದ ಕಾರ್ಯಾಚರಣೆಯಲ್ಲಿ, ಕ್ರೇನ್ ಮೂಲಕ ಎತ್ತಿ ಮೊದಲು ಎಲಿಮೆಂಟ್ ಅಳವಡಿಕೆಗೆ ಸಿಬ್ಬಂದಿ ಪ್ರಯತ್ನಿಸಿದರು. ಆದರೆ, ಗೇಟ್ನೊಳಗಡೆ ಸರಿಯಾಗಿ ಬಿಡಲು ತೊಂದರೆ ಆಗಿದೆ. ಡ್ಯಾಮ್ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೀತಿದ್ದು ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸುತ್ತಿದ್ದಾರೆ.
ಗೇಟ್ ಅಳವಡಿಕೆ ವೇಳೆ ಹೆಚ್ಚುಕಮ್ಮಿಯಾದರೆ ಅಪಾಯ
ಗುರುವಾರ, ಡ್ಯಾಮ್ನಲ್ಲಿ ರಭಸವಾಗಿ ಹರಿಯುವ ನೀರಲ್ಲಿ ಇಳಿದು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಎಲಿಮೆಂಟ್ ಅಳವಡಿಕೆಗಿದ್ದ ಕೆಲ ಅಡ್ಡಿ ನಿವಾರಿಸಲು ಮುಂದಾದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಇಂದು ಕೂಡ ಕಾರ್ಯಾಚರಣೆ ನಡೆಯಲಿದೆ. 2 ಕ್ರೇನ್ ಮೂಲಕ ಮೊದಲ ಎಲಿಮೆಂಟ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಟ್ಟು 5 ಸ್ಟಾಪ್ ಲಾಗ್ ಗೇಟ್ ಅಳವಡಿಸಲು ತಜ್ಞರು ಮುಂದಾಗಿದ್ದು ಅವಶ್ಯಕತೆ ಬಿದ್ದರೆ ಇನ್ನೂ 3 ಗೇಟ್ ಅಳವಡಿಸುತ್ತೇವೆ ಎಂದು ಡ್ಯಾಂ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಸ್ವಲ್ಪ ಹೆಚ್ಚುಕಡಿಮೆಯಾದರೂ ಡ್ಯಾಂಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ರಾಜಕಾರಣಿಗಳು ಸೇರಿ ಯಾರೂ ಕೂಡಾ ಡ್ಯಾಂ ಮೇಲೆ ಬರಬಾರದು ಎಂದು ಮನವಿ ಮಾಡಿದ್ದಾರೆ.
ಏನಿದು ಸ್ಟಾಪ್‌ಲ್ಯಾಗ್ ಗೇಟ್?
ಶಾಶ್ವತ ಗೇಟ್ ಅಳವಡಿಕೆಯ ಬದಲು ಸ್ಟಾಪ್‌ಲ್ಯಾಗ್ ಗೇಟ್ ಅಳವಡಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ ಇದೊಂದು ತಾತ್ಕಾಲಿಕ ಗೇಟ್. ಒಟ್ಟು 20 ಅಡಿ ಎತ್ತರದ ಗೇಟ್ ಇದಾಗಿದ್ದು ಇದನ್ನು ನಾಲ್ಕು ಭಾಗ ಮಾಡಲಾಗಿದೆ. ಒಂದೊಂದು ಭಾಗ ಕೂಡ 4 ಅಡಿ ಎತ್ತರ, 64 ಅಡಿ ಅಗಲ ಇದೆ. ಪ್ರತೀ ಭಾಗವೂ ಬರೋಬ್ಬರಿ 13 ಟನ್ ತೂಕ ಹೊಂದಿವೆ. ಪ್ರತೀ ಭಾಗದಿಂದಲೂ 25 ಟಿಎಂಸಿ ನೀರು ಸಂಗ್ರಹ ಆಗುತ್ತದೆ. ಸದ್ಯಕ್ಕೆ 3 ಭಾಗಗಳನ್ನು ಮಾತ್ರ ಅಳವಡಿಸಲಾಗ್ತಿದ್ದು, ಕೆಲಸ ಯಶಸ್ವಿ ಆದ ನಂತರ ಉಳಿದ ಭಾಗವನ್ನು ಅಳವಡಿಕೆ ಮಾಡಲಾಗುತ್ತದೆ.
ಬೇಗ ಗೇಟ್ ಅಳವಡಿಸಿದರೆ ತಲಾ 50,000 ರೂ!
ಟಿಬಿ ಡ್ಯಾಮ್ಗೆ ಹೊಸ ಗೇಟ್ ಅಳವಡಿಸುತ್ತಿರುವ ಸ್ಥಳಕ್ಕೆ ಗುರುವಾರ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಭೇಟಿ ನೀಡಿದರು. ತ್ವರಿತವಾಗಿ ಗೇಟ್ ಅಳವಡಿಕೆ ಕಾರ್ಯ ಮುಗಿಸಿದರೆ, ಎಲ್ಲಾ ಸಿಬ್ಬಂದಿಗೂ ವೈಯಕ್ತಿಕವಾಗಿ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯದ ಆಯುಷ್ಯ ಮುಗಿದಿದೆ: ಜಲತಜ್ಞರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ
ಆಪರೇಷನ್ ಸಂದರ್ಭ ಮುನ್ನೆಚ್ಚರಿಕಾ ಕ್ರಮವಾಗಿ ಡ್ಯಾಂ ಮುಂಭಾಗದಲ್ಲಿ ಎಸ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಸನ್ನದ್ಧವಾಗಿದ್ದಾರೆ. 35 ಸಾವಿರ ಕ್ಯೂಸೆಕ್ ನೀರು ಒಂದೇ ಗೇಟ್‌ನಲ್ಲಿ ಭೋರ್ಗರೆದು ಹರಿಯುತ್ತಿದೆ. ಅದೇ ಗೇಟನ್ನು ಬಂದ್ ಮಾಡಿ ನೀರು ಉಳಿಸಬೇಕಾಗಿರುವ ಸವಾಲು ತಜ್ಞರು ಹಾಗೂ ಇಂಜಿನಿಯರ್‌ಗಳ ಮುಂದಿದೆ.
ವರದಿ: ವಿನಾಯಕ್ ಬಡಿಗೇರ್, ಸಂಜಯ್ ‘ಟಿವಿ9’
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 am, Fri, 16 August 24