‘ಲೀಡರ್ ಚೇಂಜ್’ಗೆ ಸಜ್ಜಾಗಿ ಬಿಟ್ಟಿದೆಯಾ ಕಮಲ ಹೈಕಮಾಂಡ್? ನಿಜಕ್ಕೂ ‘ಕೇಸರಿ ಮನೆ’ಯಲ್ಲಿನ ಬೆಳವಣಿಗೆಗಳು ಏನು? ಇಲ್ಲಿದೆ ಒಂದು ಇಣುಕು ನೋಟ

ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೆರಡು ವರ್ಷ ನಾನೇ ಸಿಎಂ ಅಂತಿದ್ದ ಯಡಿಯೂರಪ್ಪ ದಿಢೀರ್ ಅಂತಾ ಮೌನಕ್ಕೆ ಜಾರಿದ್ದಾರೆ.

‘ಲೀಡರ್ ಚೇಂಜ್’ಗೆ ಸಜ್ಜಾಗಿ ಬಿಟ್ಟಿದೆಯಾ ಕಮಲ ಹೈಕಮಾಂಡ್? ನಿಜಕ್ಕೂ ‘ಕೇಸರಿ ಮನೆ’ಯಲ್ಲಿನ ಬೆಳವಣಿಗೆಗಳು ಏನು? ಇಲ್ಲಿದೆ ಒಂದು ಇಣುಕು ನೋಟ
ಬಿ.ಎಸ್.ಯಡಿಯೂರಪ್ಪ
Follow us
| Updated By: ಆಯೇಷಾ ಬಾನು

Updated on: Jul 20, 2021 | 9:41 AM

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆದ ಬೆನ್ನಲ್ಲೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಹೆಚ್ಚು ಕಾವು ಪಡೆದುಕೊಂಡಿದೆ. ಜೊತೆಗೆ ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೆರಡು ವರ್ಷ ನಾನೇ ಸಿಎಂ ಅಂತಿದ್ದ ಯಡಿಯೂರಪ್ಪ ದಿಢೀರ್ ಅಂತಾ ಮೌನಕ್ಕೆ ಜಾರಿದ್ದಾರೆ. ನಾಯಕತ್ವ ಬದಲಾವಣೆಯೋ? ನಾಯಕತ್ವ ಮುಂದುವರಿಕೆಯೋ? ‘ಲೀಡರ್ ಚೇಂಜ್’ಗೆ ಕಮಲ ಹೈಕಮಾಂಡ್ ಸಜ್ಜಾಗಿ ಬಿಟ್ಟಿದೆಯಾ ಎಂಬ ಪ್ರಶ್ನೆ ಎದ್ದಿದೆ. ರಾಜ್ಯ ಬಿಜೆಪಿ ಪಾಳಯದಲ್ಲಿ ‘ಜುಲೈ 26’ಕ್ಕೆ ನೂರೆಂಟು ಲೆಕ್ಕಾಚಾರಗಳು ಶುರುವಾಗಿವೆ.

ಜುಲೈ 25ರ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ರಾಜೀನಾಮೆ ಕೊಟ್ಟುಬಿಡ್ತಾರಾ ಅನ್ನೋ ಪ್ರಶ್ನೆ ಎಲ್ಲಾ ಬಿಜೆಪಿ ಶಾಸಕರನ್ನು ಬಿಟ್ಟೂ ಬಿಡದೇ ಕಾಡುತ್ತಿದೆ. ಮೊನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದ ಬಿಎಸ್ವೈ, ಮುಂದಿನ ಎರಡು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದರು. ಆದರೆ ಮೊನ್ನೆ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾಗಿರೋ ಆಡಿಯೋ ಕ್ಲಿಪ್ ಬಹಿರಂಗಗೊಂಡ ಬಳಿಕ ಸೀನ್ ಚೇಂಜ್ ಆಗಿದೆ. ಸಿಎಂ ರಾಜೀನಾಮೆ ನೀಡುವ ಕುರಿತ ಚರ್ಚೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದಕ್ಕೆ ಪೂರಕವೆಂಬಂತೆ ಸಿಎಂ ಕ್ಯಾಂಪ್ನಲ್ಲಿ ಸೈಲೆಂಟ್ ಌಕ್ಟಿವಿಟಿ ನಡೆಯುತ್ತಿರುವುದು ಕೂಡಾ ಶಾಸಕಾಂಗ ಸಭೆಯ ಬಳಿಕ ಸಿಎಂ ಬದಲಾಗ್ತಾರಾ ಎಂಬ ಅನುಮಾನಕ್ಕೆ ರೆಕ್ಕೆಪುಕ್ಕ ಕಟ್ಟಿದೆ.

ಇನ್ನು ಸಂಸತ್‌ನ ಮಳೆಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ನಳಿನ್ ಕುಮಾರ್ ಕಟೀಲ್ ದೆಹಲಿಗೆ ತೆರಳಲಿದ್ದಾರೆ. ದೆಹಲಿ ಭೇಟಿ ಬಳಿಕ ಮತ್ತಷ್ಟು ಚರ್ಚೆಗಳು, ಬದಲಾವಣೆಗಳು ಆಗುವ ಸಾಧ್ಯತೆ ಇದೆ.

ರಾತ್ರಿ ವಲಸಿಗ ಸಚಿವರ ಸಭೆ ಸಿಎಂ ಬಿಎಸ್‌ವೈ ಬದಲಾವಣೆ ವಿಚಾರ ಚರ್ಚೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್‌ನಲ್ಲಿ ರಾತ್ರಿ ವಲಸಿಗ ಸಚಿವರ ಸಭೆ ನಡೆದಿದೆ. ಸಚಿವರಾದ ಭೈರತಿ ಬಸವರಾಜ್, ಬಿ.ಸಿ.ಪಾಟೀಲ್, ಎಸ್.ಟಿ.‌ಸೋಮಶೇಖರ್, ಆನಂದ್‌ಸಿಂಗ್, ಡಾ.ಕೆ.ಸುಧಾಕರ್ ಸಭೆಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಬಿಎಸ್‌ವೈ ಬದಲಾವಣೆ ಆದ್ರೆ ತಮ್ಮ ಸ್ಥಾನಮಾನ ಬಗ್ಗೆ ವಲಸಿಗ ಸಚಿವರು ಚರ್ಚಿಸಿದ್ದಾರೆ.

ಜಿಲ್ಲಾಡಳಿತಗಳ ಜೊತೆ ಸಿಎಂ ಸಭೆ ಮಳೆ ಪೀಡಿತ 12 ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ BSY ಸಭೆ ನಡೆಸಲಿದ್ದಾರೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕಲಬುರಗಿ, ಕೊಪ್ಪಳ, ಬಳ್ಳಾರಿ, ವಿಜಯಪುರ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಹಾಗೂ ಮಳೆಯಿಂದಾದ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕಾನ್ಫರೆನ್ಸ್ ನಡೆಯಲಿದೆ.

ಇದನ್ನೂ ಓದಿ: ಯಡಿಯೂರಪ್ಪ ದೆಹಲಿಗೆ 6 ಬ್ಯಾಗ್​ ತೆಗೆದುಕೊಂಡು ಹೋಗಿದ್ದಾರೆ; ಒಳಗೆ ಏನೇನಿದೆ ಎಂದು ಅವರೇ ಹೇಳಲಿ: ಹೆಚ್​.ಡಿ.ಕುಮಾರಸ್ವಾಮಿ