
ಕಲಬುರಗಿ, ಏಪ್ರಿಲ್ 24: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಜಿಲ್ಲೆಯ ಆಳಂದದ ಲಾಡ್ಲೆ ಮಶಾಕ್ ದರ್ಗಾ (ladle mashak dargah) ಗಲಭೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವಂತೆ ಸಭಾಧ್ಯಕ್ಷ ಯು.ಟಿ. ಖಾದರ್ (U.T. Khader) ಗೃಹ ಸಚಿವ ಜಿ ಪರಮೇಶ್ವರ್ಗೆ ಬರೆದಿರುವ ಪತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಪೀಕರ್ ಅವರ ಈ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿವೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ವೇಳೆ ಮುಸ್ಲಿಂರಿಂದ ಹಿಂದೂ ಸಂಘಟನೆ ಮುಖಂಡರು, ಡಿಸಿ, ಎಸ್ಪಿ, ಕೇಂದ್ರ ಸಚಿವರ ಮೇಲೆ ದೊಡ್ಡ ಪ್ರಮಾಣದ ಕಲ್ಲುತೂರಾಟ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ, ಪ್ರಕರಣದಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಂರನ್ನ ಬಿಡುಗಡೆ ಮಾಡಬೇಕೆಂದು ಸ್ಪೀಕರ್ ಯು.ಟಿ ಖಾದರ್ ಬರೆದಿರುವ ಪತ್ರಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿವೆ.
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಕಲ್ಲು ತೂರಾಟ ಪ್ರಕರಣದಲ್ಲಿ ಅಮಾಯಕ ಮುಸ್ಲಿಂ ಯುವಕರ ಹೆಸರು ಸಿಲುಕಿಸಲಾಗಿದ್ದು, ಪ್ರಕರಣದಿಂದ ಅವರನ್ನ ಕೈಬಿಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ಯು.ಟಿ ಖಾದರ್ ಬರೆದಿರುವ ಪತ್ರಕ್ಕೆ ಶಿವಸೇನೆ ಕಿಡಿಕಾರಿದೆ.
ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ
ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಕೆಲ ಕಿಡಿಗೇಡಿಗಳು ಮಲ-ಮೂತ್ರ ಎರೆಚಿ ಅಪವಿತ್ರಗೊಳಿಸಿದ್ದರು. ಅದಕ್ಕಾಗಿ 2022ರಲ್ಲಿ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ದೀಕರಣಕ್ಕೆ ತೆರಳಿದ್ದ ಸಂದರ್ಭದಲ್ಲಿ ನೂರಾರು ಮುಸ್ಲಿಂ ಯುವಕರು ಪೂಜೆ ಸಲ್ಲಿಸಿ ಹೊರಬರ್ತಿದ್ದ ಕೇಂದ್ರ ಸಚಿವ ಭಗವಂತ್ ಖೂಬಾ, ಡಿಸಿ, ಎಸ್ಪಿ, ಹಿಂದೂ ಮುಖಂಡರ ಕಾರಿನ ಮೇಲೆ ಮನಸೋ ಇಚ್ಛೆ ಕಲ್ಲು ತೂರಾಟ ಮಾಡಿದ್ದಲ್ಲದೇ, ದೊಣ್ಣೆಗಳನ್ನ ಹಿಡಿದು ಗಲಭೆ ಎಬ್ಬಿಸಿದ್ದರು.
ಗಲಭೆಗೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಅನ್ಸಾರಿ ಸೇರಿದಂತೆ ನೂರಾರು ಜನರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣದಲ್ಲಿ ಅಮಾಯಕ ಮುಸ್ಲಿಂರನ್ನ ಸಹ ಸಿಲುಕಿಸಲಾಗಿದ್ದು, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ವಾಪಸ್ಸು ಪಡೆಯಬೇಕೆಂದು ಯು.ಟಿ ಖಾದರ್ ಮನವಿ ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿ ಮುಸ್ಲಿಂರನ್ನ ಕೈಬಿಟ್ಟರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಅಂತಾ ಸರ್ಕಾರಕ್ಕೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಇದನ್ನೂ ಓದಿ: ಆಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್ ಗ್ರೀನ್ ಸಿಗ್ನಲ್
ಆಳಂದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ, ಮುಸ್ಲಿಂರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನ ಕೈಬಿಡಿ ಎಂದಿರುವ ಯು.ಟಿ ಖಾದರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಒಂದು ಸಮುದಾಯ ಪರ ಕೆಲಸ ಮಾಡುತ್ತಿರುವುದು ಹಿಂದೂ ಸಂಘಟನೆಗಳ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.