ಆಳಂದ ಮತಗಳ್ಳತನ ಪ್ರಕರಣ: ಎಸ್‌ಐಟಿ ಚಾರ್ಜ್‌ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು ನೋಡಿ
ಆಳಂದ ಮತಗಳ್ಳತನ ಪ್ರಕರಣ ಸಂಬಂಧ ಚಾರ್ಜ್‌ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ, ಇದು ಆಡಳಿತಾರೂಢ ಕಾಂಗ್ರೆಸ್ನ ಕುತಂತ್ರ ಎಂದು ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ್ ಗುತ್ತೆದಾರ್ ಟೀಕಿಸಿದ್ದಾರೆ. ಇವರಿಬ್ಬರೂ ಸೇರಿದಂತೆ ಒಟ್ಟು 7 ಮಂದಿಯ ಹೆಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಕಲಬುರಗಿ, ಡಿಸೆಂಬರ್ 13: ಕಲಬುರಗಿ ಜಿಲ್ಲೆಯ ಆಳಂದ (Aland) ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದ್ದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚಾರ್ಜ್‌ಶೀಟ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾನಂದ್ ಗುತ್ತೆದಾರ್ ಸೇರಿ ಒಟ್ಟು ಏಳು ಮಂದಿಯ ಹೆಸರು ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ಕುರಿತು ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹರ್ಷಾನಂದ್ ಗುತ್ತೆದಾರ್, ‘‘ಚಾರ್ಜ್‌ಶೀಟ್‌ನಲ್ಲಿ ಏನೆಲ್ಲಾ ಅಂಶಗಳಿವೆ ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸೋಮವಾರ ನೋಟಿಸ್ ನೀಡಿ ನಮ್ಮ ಹೇಳಿಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರವಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳಿದ್ದೇವೆ’’ ಎಂದು ಹೇಳಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಈ ಪ್ರಕರಣದ ಬಗ್ಗೆ ಆರೋಪ ಮಾಡಿದ್ದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಗೆದ್ದಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ಈ ಪ್ರಕರಣದಲ್ಲಿ ಯಾವುದೇ ಪ್ರಗತಿ ಆಗಿರಲಿಲ್ಲ. ಇದೀಗ ಸರ್ಕಾರ ತಮ್ಮದೇ ಇದ್ದ ಕಾರಣ ಅಧಿಕಾರಿಗಳನ್ನು ಬಳಸಿಕೊಂಡು ನನ್ನ ತಂದೆ ಹಾಗೂ ನನ್ನ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ ಎಂದು ಹರ್ಷಾನಂದ್ ಗುತ್ತೆದಾರ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಈ ವಿಚಾರವನ್ನು ಪ್ರಸ್ತಾಪಿಸಿದ ಬಳಿಕವೇ ಈ ಪ್ರಕರಣ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದ ಹರ್ಷಾನಂದ್ ಗುತ್ತೆದಾರ್, ‘ರಾಹುಲ್ ಗಾಂಧಿ ಬಳಿ ಹತ್ತಿರವಾಗಲು ಮತ್ತು ಸಚಿವ ಸ್ಥಾನ ಪಡೆಯಲು ಬಿ.ಆರ್.ಪಾಟೀಲ್ ಈ ಪ್ರಕರಣವನ್ನು ಉಪಯೋಗಿಸಿಕೊಂಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹರ್ಷಾನಂದ್ ಗುತ್ತೆದಾರ್ ಮಾತಿನ ವಿಡಿಯೋ
ಇದು ಬಿಜೆಪಿ ವಿರುದ್ಧ ‘ವೋಟ್ ಚೋರಿ’ ಎಂಬ ಕಥೆಕಟ್ಟಲು ಕಾಂಗ್ರೆಸ್ ಮಾಡುತ್ತಿರುವ ರಾಜಕೀಯ ತಂತ್ರ. ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಅದಕ್ಕಾಗಿಯೇ ಈಗ ವೋಟ್ ಚೋರಿ ಎನ್ನುವ ಆರೋಪಗಳನ್ನು ಮುಂದಿಟ್ಟು ದೇಶದ ಗಮನ ಸೆಳೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಳಂದ ಮತಗಳ್ಳತನ ಪ್ರಕರಣ: ಪ್ರಭಾವಿ ನಾಯಕ ಸೇರಿ 7 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಐಡಿ
ದೆಹಲಿ ನಗರದಲ್ಲಿ ರಾಹುಲ್ ಗಾಂಧಿ ನಡೆಸಲಿರುವ ವೋಟ್ ಚೋರಿ ಕುರಿತ ಸಮಾವೇಶಕ್ಕೂ ಮುನ್ನವೇ ಚಾರ್ಜ್‌ಶೀಟ್ ಸಲ್ಲಿಸಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ‘ದೇಶಕ್ಕೆ ಸಂದೇಶ ನೀಡುವ ತರಾತುರಿಯಲ್ಲಿ ಈ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ’ ಎಂದು ಟೀಕಿಸಿದ್ದಾರೆ.
ನಮಗೆ ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ವಕೀಲರ ಮೂಲಕ ಚಾರ್ಜ್‌ಶೀಟ್‌ನ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತೇವೆ. ಸತ್ಯ ಹೊರಬರಲಿದೆ ಎಂದು ಹರ್ಷಾನಂದ್ ಗುತ್ತೆದಾರ್ ಸ್ಪಷ್ಟಪಡಿಸಿದ್ದಾರೆ.



