ಅಫಜಲಪುರ: ಸರ್ಕಾರಿ ಶಾಲೆಯ ಉಳಿವಿಗಾಗಿ ಜೋಳಿಗೆ ಹಿಡಿದು 1 ಕೋಟಿ ಸಂಗ್ರಹಿಸಿದ ಸ್ವಾಮಿಜಿ
ಗ್ರಾಮದ ಜನರೇ ಇದೀಗ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಹೊಸ ಕ್ರಾಂತಿಯೊಂದನ್ನು ಮಾಡಿದ್ದಾರೆ. ತಮ್ಮೂರಿನ ಶಾಲೆಯ ನಿರ್ಮಾಣಕ್ಕೆ ಸರಿಸುಮಾರು ಒಂದು ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದಾರೆ.
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಜನರು ಇಡೀ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಆ ಮೂಲಕ ಬಂದ್ ಆಗಬೇಕಿದ್ದ ಹಂತಕ್ಕೆ ತಲುಪಿದ್ದ ತಮ್ಮೂರಿನ ಸರ್ಕಾರಿ ಪ್ರೌಢಶಾಲೆಯನ್ನು ಜೀವಂತವಾಗಿಡುವ ಕೆಲಸ ಮಾಡಿದ್ದಾರೆ.ಇಂತಹ ಸತ್ಕಾರ್ಯಕ್ಕೆ ಕೈ ಜೋಡಿಸಿದ್ದು ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ವಿರಕ್ತಮಠದ ಶಿವಾನಂದ ಸ್ವಾಮೀಜಿ. ಜೋಳಿಗೆ ಹಿಡಿದು ಸ್ವಾಮೀಜಿ ಮನೆಮನೆಗೆ ಹೋಗುತ್ತಿದ್ದರೆ, ಮನೆಯಲ್ಲಿದ್ದವರು ಕಂತೆಕಂತೆ ನೋಟುಗಳನ್ನು ತಂದು ಜೋಳಿಗೆಗೆ ಹಾಕಿ, ಸ್ವಾಮೀಜಿಗೆ ನಮಸ್ಕಾರ ಮಾಡುತ್ತಿದ್ದರು. ಸ್ವಾಮೀಜಿ ಯಾರ ಮನೆಗೆ ಹೋಗುತ್ತಾರೋ, ಆ ಮನೆಯವರು ತಮ್ಮಲ್ಲಿದ್ದಷ್ಟು ಹಣವನ್ನು ಅಕ್ಷರ ಜೋಳಿಗೆಗೆ ಹಾಕಿದ್ದಾರೆ. ಹತ್ತು ದಿನದಿಂದ ಗ್ರಾಮದಲ್ಲಿ ಸರಿಸುಮಾರು ಒಂದು ಕೋಟಿಯಷ್ಟು ಹಣವನ್ನು ಅಕ್ಷರ ಜೋಳಿಗೆಯ ಮೂಲಕ ಶಿವಾನಂದ ಸ್ವಾಮೀಜಿ ಅವರು ಸಂಗ್ರಹಿಸಿದ್ದಾರೆ.
ಸರ್ಕಾರಿ ಶಾಲೆಯ ಭವಿಷ್ಯದ ಉದ್ದೇಶಕ್ಕಾಗಿ ಅಕ್ಷರ ಜೋಳಿಗೆ ಹಾಕಿಕೊಂಡು ಮನೆಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿದ್ದಾರೆ. ಘತ್ತರಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಿದ್ದು, 250ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಇನ್ನು ಈ ಶಾಲೆ ಗ್ರಾಮದ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ತುಂಬಾ ಹಳೆಯದಾಗಿದ್ದು, ಬೀಳುವ ಹಂತಕ್ಕೆ ಬಂದಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಕೂಡಾ ನೀಡಿದೆ. ಆದರೆ ಮುಜರಾಯಿ ಇಲಾಖೆಯ ಜಾಗದಲ್ಲಿ ಬೇರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ್ಲ. ಹೀಗಾಗಿ ಅಧಿಕಾರಿಗಳು ಈ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲಾ. ಇರುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅವಕಾಶ ಇಲ್ಲದ್ದರಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದರು.
ಹೀಗಾಗಿ ಗ್ರಾಮದ ಜನರು, ತಾವೇ ಹಣ ಸಂಗ್ರಹಿಸಿ ಎರಡುವರೆ ಎಕರೆ ಭೂಮಿಯನ್ನು ಖರೀದಿಸಿ ಇಂದು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ. ಗ್ರಾಮದ ಜನರು ಅರವತ್ತೈದು ಲಕ್ಷ ರೂ ಹಣವನ್ನು ನೀಡಿದ್ದಾರೆ. ಘತ್ತರಗಿ ಭಾಗ್ಯವಂತಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ನಿತೀನ್ ಗುತ್ತೇದಾರ್ ಹದಿನೇಳು ಲಕ್ಷ ರೂ. ಹಾಗೂ ಶಾಸಕ ಎಮ್ ವೈ ಪಾಟೀಲ್ ಹದಿನೇಳು ಲಕ್ಷ ರೂ. ಹಣವನ್ನು ನೀಡಿದ್ದಾರೆ. ಸರ್ಕಾರಿ ಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಭೂಮಿ ಖರೀದಿಸಲು ಅವಕಾಶವಿಲ್ಲದ್ದರಿಂದ, ಗ್ರಾಮದ ಜನರೇ ಇದೀಗ ಭೂಮಿ ಖರೀದಿಸಿ ಸರ್ಕಾರಕ್ಕೆ ನೀಡಿದ್ದಾರೆ. ಸರ್ಕಾರಿ ಶಾಲೆಯ ಕಟ್ಟಡಕ್ಕೆ ಮಾತ್ರವಲ್ಲ, ಗ್ರಾಮದಲ್ಲಿ ಆಸ್ಪತ್ರೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಗಾಗಿ ಕೂಡಾ ಸರ್ಕಾರಿ ಭೂಮಿ ಇಲ್ಲದೇ ಇರುವುದರಿಂದ ಗ್ರಾಮಸ್ಥರೇ ಅಕ್ಷರ ಜೋಳಿಗೆ ಮೂಲಕ ಹಣ ಸಂಗ್ರಹಿಸಿ ಭೂಮಿ ಖರೀದಿಸಿ ಸರ್ಕಾರಕ್ಕೆ ನೀಡುತ್ತಿದ್ದಾರೆ. ಒಟ್ಟು ಸಂಗ್ರಹವಾದ ಹಣದಲ್ಲಿ ಐದು ಎಕರೆ ಭೂಮಿಯನ್ನು ಗ್ರಾಮದ ಜನರು ಖರೀದಿಸಿದ್ದಾರೆ. ಅದರಲ್ಲಿ ಇಂದು ಎರಡುವರೆ ಎಕರೆ ಭೂಮಿಯನ್ನು ಸರ್ಕಾರಕ್ಕೆ ನೀಡಿದ್ದು, ಕೆಲವೇ ದಿನದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಘತ್ತರಗಾ ಗ್ರಾಮದಲ್ಲಿ ಸ್ವಾಮೀಜಿ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಅದರಲ್ಲೂ ಅಕ್ಷರ ಜೋಳಿಗೆಗೆ ಹೆಚ್ಚಿನ ಹಣ ಸಂಗ್ರಹವಾಗಿದ್ದರಿಂದ ಶಾಲಾ ಮಕ್ಕಳಲ್ಲಿ ಮಂದಹಾಸ ಮೂಡಿಸಿದೆ. ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಾಡಬೇಕಾಗಿರುವ ಕೆಲಸವನ್ನು ಇದೀಗ ಗ್ರಾಮದ ಜನರು ಮತ್ತು ಸ್ವಾಮೀಜಿ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ವರದಿ: ಸಂಜಯ್,ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಲಬುರಗಿ ನಗರದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನ ಬರ್ಬರ ಕೊಲೆ ಮಾಡಲಾಗಿದೆ.