ಲಿಂಗೈಕ್ಕೆಕ್ಕೂ ಮುನ್ನ ತಮ್ಮ ಕೊನೆ ಆಸೆ ಈಡೇರಿಸಿಕೊಂಡ ಶರಣಬಸಪ್ಪ ಅಪ್ಪ
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ, ಡಾ. ಶ್ರೀ ಶರಣಬಸಪ್ಪ ಅಪ್ಪಾ (92) ಅವರು ನಿಧನರಾಗಿದ್ದಾರೆ. ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರು ಪತ್ನಿ, ನಾಲ್ವರು ಪುತ್ರಿ ಮತ್ತು ಓರ್ವ ಪುತ್ರ ಹಾಗೂ ಲಕ್ಷಾಂತರ ಭಕ್ತರನ್ನು ಅವರು ಅಗಲಿದ್ದಾರೆ. ಶರಣಬಸಪ್ಪ ಅಪ್ಪ ಅವರು ಲಿಂಗೈಕ್ಯಕ್ಕೂ ಮುನ್ನ ತಮ್ಮ ಅಂತಿಮ ಆಸೆಯನ್ನು ಈಡೇರಿಸಿಕೊಂಡರು.

ಕಲಬುರಗಿ, ಆಗಸ್ಟ್ 14: ಕಲಬುರಗಿಯ (Kalaburagi) ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ (Sharanabasappa Appa) (92) ಅವರು ಲಿಂಗೈಕ್ಯರಾಗಿದ್ದಾರೆ. ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು ತಮ್ಮ ಅಂತಿಮ ಇಚ್ಛೆಯಂತೆ ಶ್ರೀ ಶರಣಬಸವೇಶ್ವರರ ದರ್ಶನ ಪಡೆದು ಕೊನೆಯುಸಿರು ಎಳೆದಿದ್ದಾರೆ. ಹೌದು, ಗೃಹ ಆರೈಕೆಗೆಂದು ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲು ಕುಟುಂಬಸ್ಥರು ನಿರ್ಧರಿಸಿದರು.
ಅದರಂತೆ, ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರನ್ನು ಮಠಕ್ಕೆ ಕರೆದುಕೊಂಡು ಬರಲಾಯಿತು. ಶರಣಬಸವೇಶ್ವರ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕೀಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಹಾಕಲಾಯಿತು. ಬಳಿಕ, ಡಾ. ಶರಣಬಸಪ್ಪ ಅಪ್ಪ ಅವರನ್ನು ಸಂಜೆ ಸುಮಾರು 7:30ಕ್ಕೆ ದಸೋಹಕ್ಕೆ ಕರೆದೊಯ್ಯಲಾಯಿತು. ಇಲ್ಲಿ, ಡಾ. ಶರಣಬಸಪ್ಪ ಅಪ್ಪ ಅವರು ಕೊನೆಯುಸಿರು ಎಳೆದರು.
- ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು 14 -11-1935ರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರಿ ಗೋದುತಾಯಿ ಅವರ ಪತ್ರನಾಗಿ ಜನಿಸಿದರು.
- ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು 17-02-1957 ಕೋಮಲಾ ದೇವಿ ಅವರೊಂದಿಗೆ ವಿವಾಹವಾದರು.
- ಡಾ. ಶ್ರೀ ಶರಣಬಸಪ್ಪ ಅಪ್ಪ 1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾದರು.
- ಡಾ. ಶ್ರೀ ಶರಣಬಸಪ್ಪ ಅಪ್ಪ ಮತ್ತು ಕೋಮಲಾದೇವಿ ದಂಪತಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ.
- ಡಾ. ಶ್ರೀ ಶರಣಬಸಪ್ಪ ಅಪ್ಪ ಅವರ ಪತ್ನಿ ಕೋಮಲಾದೇವಿ ಅವರು 23-03-1993ರಲ್ಲಿ ಅನಾರೋಗ್ಯದಿಂದ ನಿಧನರಾದರು.
- 30-11-1993ರಲ್ಲಿ ಡಾ. ದ್ರಾಕ್ಷಾಯಣಿಯವರೊಂದಿಗೆ ಡಾ. ಶ್ರೀ ಶರಣಬಸಪ್ಪ ಅಪ್ಪ ಅವರು ಎರಡನೇ ವಿವಾಹವಾದರು.
- ಡಾ. ಶ್ರೀ ಶರಣಬಸಪ್ಪ ಅಪ್ಪ ಧಾರವಾಡದಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಿದ್ದರು.
- ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಾಹಿಸಿದ್ದರು.
- 1980ರಲ್ಲಿ ಗುಲಬುರ್ಗ ವಿವಿಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ವಿವಿಗೆ ಭದ್ರ ಬುನಾದಿ ಹಾಕಿದ್ದರು.
- 2003ರ ಏಪ್ರಿಲ್ 28 ರಂದು ಸಂಸತ್ ಭವನದಲ್ಲಿ ಬಸವೇಶ್ವರ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.
- 2017ರಲ್ಲಿ ಕರ್ನಾಟಕ ಖಾಸಗಿ ವಿಶ್ವವಿದ್ಯಾಲಯ ಕಾಯ್ದೆ ಅಡಿ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ್ದರು.
- ಸದ್ಯ ಅಪ್ಪಾಜಿ ನಿರ್ಮಿಸಿದಂತಹ ಶಿಕ್ಷಣ ಸಂಸ್ಥೆಗಳಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
- 1991ರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಕಲಬುರಗಿ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಶರಣಬಸಪ್ಪ ಅಪ್ಪ ಲಿಂಗೈಕ್ಯ
ಪ್ರಶಸ್ತಿ, ಗೌರವಗಳು
- ಕರ್ನಾಟಕ ಸರ್ಕಾರದಿಂದ 1988ರಲ್ಲಿ ಕರ್ನಾಟಕ ರಾಜ್ಯೋಪ್ರಶಸ್ತಿ ಭಾಜನರಾಗಿದ್ದರು.
- 1999ರಲ್ಲಿ ಗುಲಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿತ್ತು.
- ಹಲವಾರು ವರ್ಷಗಳ ಕಾಲ ಧಾರವಾಡ ವಿವಿ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
- ಲಲಿತ ಕಲಾ ಅಕಾಡೆಮಿ ವತಿಯಿಂದ ಕಲಾ ಪೋಷಿತ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:59 pm, Thu, 14 August 25



