ಕಲಬುರಗಿ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ; ಹೆರಿಗೆ ವೇಳೆ ಮಗು ಸಾವು, ಹೆರಿಗೆ ನಂತರ ತಾಯಿ ಸಾವು
ಆ ಕುಟುಂಬಸ್ಥರು ತಮ್ಮ ಮನೆಗೆ ಹೊಸ ಅತಿಥಿ ಆಗಮನದ ನಿರೀಕ್ಷೆಯಲ್ಲಿದ್ರು. ಪುಟ್ಟ ಮಗುವಿನ ಬರಮಾಡಿಕೊಳ್ಳುವ ಸಂತಸದಲ್ಲಿದ್ರು. ಆದ್ರೆ, ವಿಧಿ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಹೆರಿಗೆ ಸಮಯದಲ್ಲೇ ಮಗು ಸತ್ತರೆ, ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ತಾಯಿಯೂ ಬಾರದ ಲೋಕಕ್ಕೆ ಹೋಗಿದ್ದಾಳೆ.
ಕಲಬುರಗಿ: ಜೇವರ್ಗಿ ತಾಲೂಕಿನ ನಡುವಿನಹಳ್ಳಿ ಗ್ರಾಮದ ನಿವಾಸಿ ಕನ್ಯಾಕುಮಾರಿಗೆ ಮೊನ್ನೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪತಿ ಮನೆಯವರು, ಮೊದಲು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ರು. ಅಲ್ಲಿನ ವೈದ್ಯರು, ಇಲ್ಲಿ ಹೆರಿಗೆ ಮಾಡಲು ಆಗಲ್ಲ. ಜಿಲ್ಲಾಸ್ಪತ್ರೆಗೆ ಕರೆದೊಯ್ಯಿರಿ ಅಂದಿದ್ರಂತೆ. ತಕ್ಷಣ ಕನ್ಯಾಕುಮಾರಿಯನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು. ಆದ್ರೆ, ಮೊನ್ನೆ ತಡರಾತ್ರಿ 1 ಗಂಟೆಗೆ ಹೆರಿಗೆ ಸಮಯದಲ್ಲಿಯೇ ಗಂಡು ಕೂಸು ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ನನಗೆ ಹೊಟ್ಟೆ ನೋವಾಗುತ್ತಿದೆ ಅಂತಾ ಕನ್ಯಾಕುಮಾರಿ, ವೈದ್ಯರಿಗೆ ಹೇಳಿದ್ಳು. ಹೀಗಾಗಿ ಹೆರಿಗೆ ವಾರ್ಡ್‌ನ ನರ್ಸ್ ಒಬ್ರು ಕನ್ಯಾಕುಮಾರಿಗೆ ಮಾತ್ರೆ ನೀಡಿದ್ದಾರೆ. ಮಾತ್ರೆ ಪಡೆದ ಅರ್ಧ ಗಂಟೆಯಲ್ಲೆ ಕನ್ಯಾಕುಮಾರಿ ಇಹಲೋಕ ತ್ಯಜಿಸಿದ್ದಾಳೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದ ಕುಟುಂಬಸ್ಥರು, ಮಗುವಿನ ಶವ ಆಸ್ಪತ್ರೆ ಮುಂದಿಟ್ಟು ಆಕ್ರೋಶ ವ್ಯಕ್ತಪಡಿಸಿದ್ರು. ತಾಯಿ ಮಗುವಿನ ಸಾವಿಗೆ ಕಾರಣವಾದ ವೈದ್ಯರ ಮೇಲೆ ಕ್ರಮ ಕೈಗೊಳ್ಬೇಕು ಅಂತಾ ಆಗ್ರಹಿಸಿದ್ರು. ಅಲ್ದೆ, ಹೆರಿಗೆ ವಾರ್ಡ್ನಲ್ಲಿ ವೈದ್ಯರು ಇರಲ್ಲ. ನರ್ಸ್ಗಳ ಮೂಲಕವೇ ಎಲ್ಲ ಕೆಲಸ ಮಾಡಿಸ್ತಾರೆ. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಕನ್ಯಾಕುಮಾರಿ ಬದುಕುಳಿಯುತ್ತಿದ್ದಳು. ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಮೃತಪಟ್ಟಿದೆ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನು, ಕುಟುಂಬಸ್ಥರ ಆರೋಪಗಳನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಮೃತಪಟ್ಟಿದ್ದು, ಹೆರಿಗೆಯಾದ 1 ಗಂಟೆ ನಂತರ ತಾಯಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ. ಇದರಲ್ಲಿ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಇಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ. ಆದ್ರೆ, ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ ಕುಟುಂಬಸ್ಥರಿಗಂತೂ ಬರಸಿಡಿಲೇ ಬಡಿದಂತಾಗಿದೆ.
ಇದನ್ನೂ ಓದಿ: ಪ್ರಕೃತಿಯ ಸೊಬಗನ್ನು ಸವಿಯಲು ಕರ್ನಾಟಕದ ಈ ಗಿರಿಧಾಮಗಳಿಗೆ ಭೇಟಿ ನೀಡಿ