
ಹುಬ್ಬಳ್ಳಿ, ಜೂನ್ 23: ರೈಲ್ವೆ ಇಲಾಖೆಯ (Indian Railways) ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ (Kannada) ಭಾಷೆಗೆ ಅವಕಾಶ ನೀಡದೆ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪದ ನಡುವೆಯೇ, ರೈಲ್ವೆ ಮಂಡಳಿ (Railway Board) ವಿರುದ್ಧ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಕನ್ನಡಪರ ಸಂಘಟನೆಗಳು ದಿಢೀರನೆ ಕೈಬಿಟ್ಟಿವೆ. ಈ ನಿರ್ಧಾರದ ಹಿಂದೆ ಅತ್ಯಂತ ಆಸಕ್ತಿದಾಯಕ ಕಾರಣವೊಂದಿದೆ! ಸ್ವತಃ ಕನ್ನಡಿಗ ಅಭ್ಯರ್ಥಿಗಳ ಹಿತದೃಷ್ಟಿಯಿಂದಲೇ ಹೋರಾಟಗಾರರು ಈ ಹೆಜ್ಜೆ ಇಟ್ಟಿದ್ದಾರೆ. ಜೂನ್ 25 ಕ್ಕೆ ಮರುನಿಗದಿಯಾಗಿರುವ ಈ ಮುಂಬಡ್ತಿ ಪರೀಕ್ಷೆಗೆ ಯಾವುದೇ ಅಡ್ಡಿಪಡಿಸಬಾರದು ಎಂದು ಪರೀಕ್ಷಾರ್ಥಿಗಳೇ ಕನ್ನಡ ಸಂಘಟನೆಗಳ ಬಳಿ ವಿನಂತಿಸಿಕೊಂಡಿದ್ದಾರೆ.
ಈ ಹಿಂದೆ ರೈಲ್ವೆ ಮಂಡಳಿಯು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಷ್ಟೇ ಮುಂಬಡ್ತಿ ಪರೀಕ್ಷೆ ನಡೆಸಲು ಮುಂದಾಗಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟ ನಡೆಸಿದ್ದವು. ಆ ಪ್ರತಿಭಟನೆಯ ಪರಿಣಾಮವಾಗಿ ಪರೀಕ್ಷೆಯು ರದ್ದಾಗಿತ್ತು. ಇದೀಗ ರೈಲ್ವೆ ಇಲಾಖೆಯು ಜೂನ್ 25 ರಂದು ಮತ್ತೊಮ್ಮೆ ಪರೀಕ್ಷೆಯನ್ನು ನಿಗದಿಪಡಿಸಿದೆ. ಆದರೆ, ಈ ಬಾರಿಯೂ ಪ್ರತಿಭಟನೆ ನಡೆದು ಪರೀಕ್ಷೆ ರದ್ದಾದರೆ ಅಥವಾ ಮುಂದೂಡಲ್ಪಟ್ಟರೆ ಇಲಾಖೆಯಲ್ಲಿರುವ ನೂರಾರು ಕನ್ನಡಿಗ ಉದ್ಯೋಗಿಗಳ ಮುಂಬಡ್ತಿಯ ವಯೋಮಿತಿ (Age Limit) ಮುಗಿದುಹೋಗುತ್ತದೆ. ಇದರಿಂದ ಕನ್ನಡಿಗರೇ ಬಡ್ತಿಯಿಂದ ವಂಚಿತರಾಗಬೇಕಾಗುತ್ತದೆ ಎಂಬ ಆತಂಕ ಎದುರಾಗಿತ್ತು.
ವಯೋಮಿತಿ ಮುಗಿಯುವ ಭೀತಿಯಲ್ಲಿದ್ದ 200 ಕ್ಕೂ ಹೆಚ್ಚು ಕನ್ನಡಿಗ ಅಭ್ಯರ್ಥಿಗಳು ಒಟ್ಟಾಗಿ ಕನ್ನಡಪರ ಹೋರಾಟಗಾರರನ್ನು ಭೇಟಿ ಮಾಡಿ, ‘ದಯವಿಟ್ಟು ಈ ಬಾರಿ ಪರೀಕ್ಷೆ ನಡೆಸಲು ಅಡ್ಡಿಪಡಿಸಬೇಡಿ, ಇದರಿಂದ ನಮಗೇ ಆರ್ಥಿಕವಾಗಿ ಹಾಗೂ ವೃತ್ತಿ ಬದುಕಿನಲ್ಲಿ ಅನ್ಯಾಯವಾಗುತ್ತದೆ’ ಎಂದು ಲಿಖಿತ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಕನ್ನಡಿಗರ ಎಚ್ಚರಿಕೆಯಿಂದ ರದ್ದಾಗಿದ್ದ ರೈಲ್ವೆ ಬಡ್ತಿ ಪರೀಕ್ಷೆಗೆ ಮರುದಿನಾಂಕ ನಿಗದಿ, ಈ ಬಾರಿಯೂ ಕನ್ನಡಕ್ಕೆ ಕೊಕ್
ಕನ್ನಡಿಗ ಉದ್ಯೋಗಿಗಳ ಭವಿಷ್ಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಅರಿತ ಕನ್ನಡ ಸಂಘಟನೆಗಳು ತಕ್ಷಣವೇ ಸ್ಪಂದಿಸಿ, ಜೂನ್ 25 ರಂದು ರೈಲ್ವೆ ಇಲಾಖೆ ವಿರುದ್ಧ ನಡೆಸಲು ಉದ್ದೇಶಿಸಿದ್ದ ಧರಣಿ ಹಾಗೂ ಪ್ರತಿಭಟನೆಯನ್ನು ಅಧಿಕೃತವಾಗಿ ಕೈಬಿಟ್ಟಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ