AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Session: ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಸರ್ಕಾರದ ವಿರುದ್ಧ ‘ಪಂಚ’ ಅಸ್ತ್ರ ಹೂಡಲು ಬಿಜೆಪಿ ಸಿದ್ಧ

Belagavi Winter Session 2024: ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಸರ್ಕಾರದ ವಿರುದ್ದ ‘ಪಂಚ’ ಅಸ್ತ್ರ ಹೂಡಲು ಬಿಜೆಪಿ ನಾಯಕರು ಸಜ್ಜಾಗಿದ್ದು, ಅತ್ತ ಸರ್ಕಾರ ಕೂಡ ಪ್ರತ್ಯಸ್ತ್ರ ತಯಾರು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಪಂಚ ಅಸ್ತ್ರಗಳು ಯಾವುವು? ಸರ್ಕಾರದ ಪ್ರತ್ಯಸ್ತ್ರ ಯಾವುದು? ಇಲ್ಲಿದೆ ಮಾಹಿತಿ.

Belagavi Session: ಇಂದಿನಿಂದ ಬೆಳಗಾವಿ ಚಳಿಗಾಲದ ಅಧಿವೇಶನ: ಸರ್ಕಾರದ ವಿರುದ್ಧ ‘ಪಂಚ’ ಅಸ್ತ್ರ ಹೂಡಲು ಬಿಜೆಪಿ ಸಿದ್ಧ
ಬೆಳಗಾವಿಯ ಸುವರ್ಣ ವಿಧಾನಸೌಧ
ಕಿರಣ್​ ಹನಿಯಡ್ಕ
| Edited By: |

Updated on:Dec 09, 2024 | 8:46 AM

Share

ಬೆಳಗಾವಿ, ಡಿಸೆಂಬರ್ 9: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಬಾಣಂತಿಯರ ಸಾವು, ಶಿಶುಗಳ ಸಾವು, ವಕ್ಫ್ ವಿವಾದ, ಮುಡಾ ಅಕ್ರಮ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ, ಹೀಗೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಲು ಸಾಲು ಬಾಣಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ. ಹೀಗಾಗಿ ಕಣಕ್ಕಿಳಿದಿರುವ ವಿಪಕ್ಷ ನಾಯಕ ಆರ್‌.ಅಶೋಕ್, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಯುದ್ಧಕ್ಕಿಳಿದು ಸರ್ಕಾರಕ್ಕೆ ಖೆಡ್ಡಾ ತೋಡಲು ಸಜ್ಜಾಗಿದ್ದಾರೆ.

ಆಂತರಿಕ ಕಚ್ಚಾಟ ಬದಿಗಿಟ್ಟು ಸದನದಲ್ಲಿ ಬಿಜೆಪಿ ಹೋರಾಟ

ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೊನಾ ಹಗರಣದ ಪ್ರತ್ಯಸ್ತ್ರ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ. ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ. ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಯತ್ನಾಳ್ ಸದ್ಯ ತಮ್ಮ ಮಾತಿನ ಬಾಣವನ್ನು ಸರ್ಕಾರದತ್ತ ತಿರುಗಿಸಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿ ಕುಸಿದಿದೆ. ಇ.ಡಿ.ದು ಏನಾದರೂ ಆದರೆ, ಸಿಎಂ ಸಿದ್ದರಾಮಯ್ಯರದ್ದು ಕೊನೆ ಅಧಿವೇಶನ ಆಗಬಹುದು ಎಂದಿದ್ದಾರೆ. ಇದಕ್ಕೆ ಸಚಿವ ಚಲುವರಾಯಸ್ವಾಮಿ ಕೌಂಟರ್ ಕೊಟ್ಟಿದ್ದು, ಯತ್ನಾಳ್​ಗೆ ಪುರುಸೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಸದನದಲ್ಲಿ ಏನೆಲ್ಲಾ ಚರ್ಚೆಯಾಗಬಹುದು?

ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸಾವನ್ನು ಪ್ರಸ್ತಾಪಿಸಲು ಬಿಜೆಪಿ ಸಜ್ಜಾಗಿದೆ. ಮೃತರ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರದ ಜೊತೆಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದೆ. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತ್ಯಸ್ತ್ರ ರೆಡಿ ಮಾಡಿಕೊಂಡಿದ್ದು, ಕೇಂದ್ರದ ಲ್ಯಾಬೋರೇಟರಿ ನೀಡಿದ ಸ್ಯಾಂಪಲ್‌ನಿಂದ ಹೀಗಾಯಿತು ಎಂದು ಆರೋಪಿಸಲು ಸಜ್ಜಾಗಿದೆ. 22 ಬ್ಯಾಚ್​ಗಳ IV ಸ್ಯಾಂಪಲ್ಸ್ ರಿಜೆಕ್ಟ್ ಆಗಿತ್ತು. ಆದರೆ, ಇದೇ ಐವಿಗಳು ಕೇಂದ್ರದ ಲ್ಯಾಬೋರೇಟರಿಗಳಲ್ಲಿ ಪಾಸ್ ಆಗಿದ್ದವು ಎಂದು ಕೌಂಟರ್ ಕೊಡಲು ರೆಡಿಯಾಗಿದೆ.

ರೈತರ ಜಮೀನಿನಲ್ಲಿ ವಕ್ಫ್ ಹೆಸರು ಉಲ್ಲೇಖ ವಿಚಾರ ಬಿಜೆಪಿ ನಾಯಕರಿಗೆ ಮತ್ತೊಂದು ಪ್ರಮುಖ ಅಸ್ತ್ರವಾಗಿದೆ. ಇದೇ ವಿಚಾರಕ್ಕೆ ಬಿಜೆಪಿ ನಾಯಕರು ಪ್ರತಿಭಟಿಸಿದ್ದಾರೆ. ಯತ್ನಾಳ್ ಬಣ, ವಿಜಯೇಂದ್ರ ಟೀಂ, ಆರ್.ಅಶೋಕ್ ಸೇರಿ ಬಿಜೆಪಿ ನಾಯಕರು ರೈತರ ಬಳಿ ವಕ್ಫ್ ವಿಚಾರವಾಗಿ ಮಾಹಿತಿ ಸಂಗ್ರಹಿಸಿದ್ದು, ಇದನ್ನ ಸದನದ ಮುಂದಿಡಲಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಪ್ರತ್ಯಸ್ತ್ರ ಸಿದ್ಧಪಡಿಸಿಕೊಂಡಿದ್ದು, ಬಿಜೆಪಿ ಅವಧಿಯಲ್ಲಿಯೇ ರೈತರಿಗೆ ಹೆಚ್ಚು ನೋಟಿಸ್ ನೀಡಲಾಗಿದೆ. ನಿಮ್ಮ ಅವಧಿಯಲ್ಲಿ ನೋಟಿಸ್ ನೀಡಿದಾಗ ಎಲ್ಲಿ ಹೋಗಿದ್ದಿರಿ ಎಂದು ತಿರುಗೇಟು ಕೊಡಲಿದ್ದಾರೆ. ಅಲ್ಲದೇ, ಯಾರ ಅವಧಿಯಲ್ಲಿ ಎಷ್ಟು ರೈತರಿಗೆ ನೋಟಿಸ್ ಎಂಬುದರ ಕುರಿತ ಅಂಕಿ ಅಂಶಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಶಾಕ್ ಕೊಟ್ಟ ಸರ್ಕಾರ

ಇದಿಷ್ಟೇ ಅಲ್ಲ, ವಾಲ್ಮೀಕಿ ನಿಗಮ, ಮುಡಾ ಅಕ್ರಮ ವಿಷಯವನ್ನು ಕೂಡ ಬಿಜೆಪಿ ಸದನದಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಇದೆ.

ಸರ್ಕಾರಕ್ಕೆ ತಟ್ಟಲಿದೆ 2Aಮೀಸಲಾತಿ ಬಿಸಿ

ಒಟ್ಟಿನಲ್ಲಿ ಜನ ಪ್ರತಿನಿಧಿಗಳ ಮಾತಿನ ಯುದ್ಧಕ್ಕೆ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಲಿದೆ. ಸುವರ್ಣ ಸೌಧದಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಊಟ, ವಸತಿ, ಕಚೇರಿ ಸೇರಿ ಎಲ್ಲಾ ಹಂತದಲ್ಲಿ ಸಿದ್ಧತೆ ನಡೆದಿದೆ. 2,750 ಕೊಠಡಿಗಳಲ್ಲಿ ಸಚಿವರು, ಶಾಸಕರು, ಅಧಿಕಾರಿಗಳಿಗೆ 6 ಕಡೆ ವಸತಿ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್​ಗೆ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇದರ ಜೊತೆ 2A ಮೀಸಲಾತಿ ಪ್ರತಿಭಟನೆಯ ಬಿಸಿ ಕೂಡ ಸರ್ಕಾರಕ್ಕೆ ತಟ್ಟುವ ಸಾಧ್ಯತೆ ಇದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:49 am, Mon, 9 December 24