ದುಡಿಯುವ ವರ್ಗಕ್ಕೆ ಅಲ್ಪ ಬಿಸಿ ಮುಟ್ಟಿಸಿದ ಸಿದ್ದರಾಮಯ್ಯ ಬಜೆಟ್: ವೃತ್ತಿ ತೆರಿಗೆ ಏರಿಕೆ
2025-26ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೃತ್ತಿಪರ ತೆರಿಗೆಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ವಾಣಿಜ್ಯ ಮತ್ತು ಅಬಕಾರಿ ತೆರಿಗೆಯಿಂದ ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. ಒಟ್ಟು 2,92,477 ಕೋಟಿ ರೂಪಾಯಿಗಳ ರಾಜಸ್ವ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ. ಈ ಹೆಚ್ಚಳವು ಮದ್ಯದ ಬೆಲೆಯ ಮೇಲೆ ಪರಿಣಾಮ ಬೀರಬಹುದು. ಬಜೆಟ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲಾಗಿದೆ.

ಬೆಂಗಳೂರು, ಮಾರ್ಚ್ 07: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 2025-26ನೇ ಸಾಲಿನ ಆಯವ್ಯಯ ಪತ್ರ (Karnataka Budget) ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಡಿಯುವ ಕೈಗಳಿಗೆ ಅಲ್ಪ ಬಿಸಿ ಮುಟ್ಟಿಸಿದ್ದಾರೆ. ವೃತ್ತಿ ತೆರಿಗೆಯನ್ನು 200 ರೂಪಾಯಿಂದ 300 ರೂಪಾಯಿಗೆ ಏರಿಕೆ ಮಾಡಿದ್ದಾರೆ. ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500 ರೂ.ಗಳಿಗೆ ಅನುಗುಣವಾಗಿ, ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳ ವೃತ್ತಿ ತೆರಿಗೆಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಎರಡನೇ ಸ್ಥಾನದಲ್ಲಿದೆ. 2024-25ರಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿತ್ತು. ಇದೀಗ, 2025-26 ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ 1,20,000 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿಯನ್ನು ಸರ್ಕಾರ ಹೊಂದಿದೆ.
ಅಬಕಾರಿ ಇಲಾಖೆಗೆ ಗುರಿ
2024-25ರ ಪರಿಷ್ಕೃತ ಅಂದಾಜಿನಲ್ಲಿ ಅಬಕಾರಿ ತೆರಿಗೆಯಿಂದ ಒಟ್ಟು 36,500 ಕೋಟಿ ರೂ. ರಾಜಸ್ವ ಸರ್ಕಾರ ಸಂಗ್ರಹಿಸಿತ್ತು. ಆದರೆ, 2025-26ನೇ ಸಾಲಿನಲ್ಲಿ 40,000 ರೂ. ಸಂಗ್ರಹಾಣ ಗುರಿಯನ್ನು ಸರ್ಕಾರ ಅಬಕಾರಿ ಇಲಾಖೆಗೆ ನೀಡಿದೆ. ಇದರಿಂದ ಮದ್ಯದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಸದ್ದಿಲ್ಲದೇ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಘೋಷಿಸಿದ ಸಿದ್ದರಾಮಯ್ಯ!
2025-26ನೇ ಸಾಲಿನ ಆಯವ್ಯಯ
2025-26ನೇ ಸಾಲಿನಲ್ಲಿ ಒಟ್ಟು 2,92,477 ಕೋಟಿ ರೂ. ರಾಜಸ್ವ ಸ್ವೀಕೃತಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ 2,08,100 ಕೋಟಿ ರೂ. ಸ್ವಂತ ತೆರಿಗೆ ರಾಜಸ್ವ, 16,500 ಕೋಟಿ ರೂ. ತೆರಿಗೆಯೇತರ ರಾಜಸ್ವ ಮತ್ತು ಕೇಂದ್ರ ಸರ್ಕಾರ ಸ್ವೀಕೃತಿ 67,877 ಕೋಟಿ ರೂ. ಸೇರಿವೆ. 2025-26ನೇ ಸಾಲಿಗೆ ಒಟ್ಟು 1,16,000 ಕೋಟಿ ರೂ. ಸಾಲ ಮತ್ತು 170 ಕೋಟಿ ರೂ.ಗಳ ಋಣೇತರ ಬಂಡವಾಳ ಸ್ವೀಕೃತಿಯನ್ನು ಸರ್ಕಾರ ಪಡೆಯಲು ತೀರ್ಮಾನಿಸಿದೆ.
ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ಗಳಿಗೆ ಇಲ್ಲಿ ಕ್ಲಿಕ್ ಮಾಡಿ