ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಟಾರ್ಗೆಟ್​​: ಸರ್ಕಾರದ ಹೊಸ ನೀತಿಗೆ ವ್ಯಾಪಾರಿಗಳ ವಿರೋಧ

ಸಿಎಂ ಸಿದ್ದರಾಮಯ್ಯ 17ನೇ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 45 ಸಾವಿರ ಕೋಟಿ ರೂ. ಸಂಗ್ರಹದ ಗುರಿ ನೀಡಲಾಗಿದೆ. ಮದ್ಯದ ದರ ಹೆಚ್ಚಳದ ಸುಳಿವು ಕೂಡ ದೊರಕಿದೆ. ಸದ್ಯ ರಾಜ್ಯ ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ ವ್ಯಕ್ತವಾಗಿದೆ. ತಮ್ಮ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಟಾರ್ಗೆಟ್​​: ಸರ್ಕಾರದ ಹೊಸ ನೀತಿಗೆ ವ್ಯಾಪಾರಿಗಳ ವಿರೋಧ
ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್, ಮದ್ಯ
Image Credit source: tv9 kannada

Updated on: Mar 06, 2026 | 5:05 PM

ಬೆಂಗಳೂರು, ಮಾರ್ಚ್​​ 06: ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಜೆಟ್ (Budget) ಮಂಡಿಸಿದ್ದಾರೆ. 3 ಗಂಟೆ 30 ನಿಮಿಷಗಳ ಕಾಲ ಭಾಷಣ ಮಾಡಿದ ಸಿಎಂ, ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಒಂದೊಂದು ಕೊಡುಗೆ ನೀಡಿದ್ದಾರೆ. ಆದರೆ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದೆ. ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಿರೋದು ದರ ಹೆಚ್ಚಳದ ಸುಳಿವು ಕೊಟ್ಟಿದೆ. ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹದ ಗುರಿ ನೀಡಿದೆ. ಸದ್ಯ ಸರ್ಕಾರ ನೀಡಿರುವ ಟಾರ್ಗೆಟ್​ ಬಗ್ಗೆ ಮದ್ಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ: ಲೋಕೇಶ್ 

ಈ ಬಗ್ಗೆ ಬೆಂಗಳೂರು ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯಿಸಿದ್ದು, 2026-27ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 45,000 ಕೋಟಿ ರೂ ಟಾರ್ಗೆಟ್​​, ಯಾವ ಅಂಶ ಇಟ್ಟುಕೊಂಡು ಇಷ್ಟು ಆದಾಯ ನಿರೀಕ್ಷಿಸಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್​​ ಶಾಕ್​​ ನೀಡಿದ ಸಿದ್ದರಾಮಯ್ಯ: ಬಜೆಟ್​​​ನಲ್ಲಿ ಮಹತ್ವದ ನಿರ್ಧಾರ

ಪ್ರಸ್ತುತ ಅಬಕಾರಿ ಆದಾಯ 2-3 ಸಾವಿರ ಕೋಟಿ ಖೋತಾ ಎಂಬ ಮಾಹಿತಿ. ಇರುವ ಸ್ಲ್ಯಾಬ್​ಗಳನ್ನು ಮತ್ತಷ್ಟು ಇಳಿಕೆ ಮಾಡುವ ಬಗ್ಗೆ ತೀರ್ಮಾನವಾಗಿದೆ. ಸರ್ಕಾರದ ಹೊಸ ಅಬಕಾರಿ ನೀತಿ ಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ. CL2, CL7, CL5ಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ತಿದ್ದುಪಡಿ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ

ಇನ್ನು ರಾಜ್ಯ ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ ವ್ಯಕ್ತವಾಗಿದೆ. ಅಬಕಾರಿ ನೀತಿ ಬದಲಾವಣೆ ವಿರುದ್ಧ ಮದ್ಯ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟಿವಿ9ಗೆ ಮದ್ಯ ವ್ಯಾಪಾರಿ ಮಹದೇವಗೌಡ ಹೇಳಿಕೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಅಬಕಾರಿ ನೀತಿಯನ್ನೇ ಮುಂದುವರಿಸಬೇಕಿತ್ತು. ಹೊಸ ಅಬಕಾರಿ ನೀತಿಯಲ್ಲಿ ಆಗುವ ಬದಲಾವಣೆಯಿಂದ ಸಮಸ್ಯೆ ಹೆಚ್ಚುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಮದ್ಯದ ಅಂಶದ ಮೇಲೆ ಸುಂಕ ನಿಗದಿ ಅಂದರೆ ದರದಲ್ಲಿ ವ್ಯತ್ಯಾಸವಾಗುತ್ತೆ. ತಮ್ಮ ಉತ್ಪನ್ನ ಇಂತಹ ಸ್ಲ್ಯಾಬ್​ಗಳಲ್ಲಿ ಬರಬೇಕೆಂದು ಉತ್ಪಾದಕರು ನಿಗದಿ ಮಾಡಿದರೆ ಸರಿಹೋಗಲ್ಲ. ಬೆಲೆ ನಿಗದಿಯಲ್ಲಿ ಅಬಕಾರಿ ಇಲಾಖೆ ಹಸ್ತಕ್ಷೇಪ ಇಲ್ಲವಾದರೆ ಸಮಸ್ಯೆ. ಅಂತಿಮವಾಗಿ ವರ್ತಕರು ಮತ್ತು ಗ್ರಾಹಕರ ಮೇಲೆ ಹೊಡೆತ ಬೀಳಲಿದೆ ಎಂದು ಅವರು ಹೇಳಿದ್ದಾರೆ.

ವರದಿ: ಲಕ್ಷ್ಮೀನರಸಿಂಹ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us